ರಾಮನಗರ: ಬಿಡದಿಯ ಜಾಲಿವುಡ್ ಸ್ಟುಡಿಯೊಸ್ ಆ್ಯಂಡ್ ಅಡ್ವೆಂಚರ್ಸ್ ಪಾರ್ಕ್‌ನಲ್ಲಿ ‘ಬಿಗ್ ಬಾಸ್’ ರಿಯಾಲಿಟಿ ಷೋ ನಡೆಯುತ್ತಿರುವ ಸ್ಟುಡಿಯೊ ಪ್ರವೇಶ ದ್ವಾರಕ್ಕೆ ಹಾಕಿದ್ದ ಬೀಗವನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ಮೇರೆಗೆ ಜಿಲ್ಲಾಡಳಿತ ಗುರುವಾರ ನಸುಕಿನಲ್ಲಿ ತೆರೆದಿದೆ.
ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ಹಾಗೂ ಸಿಬ್ಬಂದಿಯೊಂದಿಗೆ ನಸುಕಿನಲ್ಲಿ 2.30ಕ್ಕೆ ಜಾಲಿವುಡ್‌ಗೆ ಬಂದು ಬೀಗ ತೆಗೆಸಿದರು. ಇದರೊಂದಿಗೆ ಎರಡು ದಿನಗಳ ಹೈಡ್ರಾಮಾ ಅಂತ್ಯಗೊಂಡಿತು.
ಈಗಲ್ಟನ್ ರೆಸಾರ್ಟ್‌ನಲ್ಲಿ ಆಶ್ರಯ ಪಡೆದಿದ್ದ 17 ಸ್ಪರ್ಧಿಗಳು ಬೆಳಗ್ಗೆ ಬಿಗ್‌ಬಾಸ್ ಮನೆಗೆ ಮರಳಿದ್ದು, ಷೋ ಮತ್ತೆ ಆರಂಭವಾಗಿದೆ. ಇದರೊಂದಿಗೆ ‘ಬಿಗ್ ಬಾಸ್’ ಆಯೋಜಕರು ನಿರಾಳರಾಗಿದ್ದಾರೆ.
30 ಎಕರೆಯಲ್ಲಿರುವ ಜಾಲಿವುಡ್ ಪಾರ್ಕ್‌ಗೆ ಒಟ್ಟು ನಾಲ್ಕು ದ್ವಾರಗಳಿವೆ. ಆ ಪೈಕಿ ‘ಬಿಗ್ ಬಾಸ್’ ಚಿತ್ರೀಕರಣ ನಡೆಯುತ್ತಿರುವ ಸ್ಟುಡಿಯೊ ಇರುವ ‘ಸಿ’ ಪ್ರವೇಶ ದ್ವಾರಕ್ಕೆ ಹಾಕಿದ್ದ ಬೀಗವನ್ನು ಮಾತ್ರ ತೆಗೆಯಲಾಗಿದೆ. ಮುಖ್ಯ ಪ್ರವೇಶ ದ್ವಾರ ಹಾಗೂ ಇತರ ದ್ವಾರಗಳ ಬೀಗ ಇನ್ನೂ ಹಾಗೆಯೇ ಇವೆ.
ಸಾರ್ವಜನಿಕರ ಪ್ರವೇಶ ಸೇರಿದಂತೆ ಪಾರ್ಕ್‌ನಲ್ಲಿ ಬೇರೆ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡಿಲ್ಲ. ನಿಯಮ ಉಲ್ಲಂಘನೆ ಸರಿಪಡಿಸಿಕೊಳ್ಳಲು ಪಾರ್ಕ್ ಆಡಳಿತ ಮಂಡಳಿಗೆ ಹತ್ತು ದಿನ ಕಾಲಾವಕಾಶ ನೀಡಲಾಗಿದೆ ಎನ್ನಲಾಗಿದೆ.
ಪಾರ್ಕ್ ಕಾರ್ಯಾಚರಣೆಗೆ ಅನುಮತಿ ಪಡೆಯದಿರುವುದು ಸೇರಿದಂತೆ ವಿವಿಧ ನಿಯಮಗಳ ಉಲ್ಲಂಘನೆಗಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ಮೇರೆಗೆ ಅ.6ರಂದು ಜಿಲ್ಲಾಡಳಿತ ಪಾರ್ಕ್‌ಗೆ ಬೀಗ ಹಾಕಿತ್ತು. ಬೀಗ ತೆಗೆಸಲು ಜಾಲಿವುಡ್ ಆಡಳಿತ ಮಂಡಳಿ ಎರಡು ದಿನ ಕಸರತ್ತು ನಡೆಸಿತ್ತು.
ಬಿಗ್‌ಬಾಸ್ ನಿರೂಪಕ ಹಾಗೂ ನಟ ಕಿಚ್ಚ ಸುದೀಪ್ ಸ್ಟುಡಿಯೊ ಬೀಗ ತೆಗೆಸಿ, ಷೋ ನಡೆಸಲು ಅವಕಾಶ ಮಾಡಿಕೊಡುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ಅ ವರನ್ನು ಕೋರಿದ್ದರು. ಡಿ.ಕೆ. ಶಿವಕುಮಾರ್ ಸ್ಟುಡಿಯೊ ಬೀಗ ತೆರವುಗೊಳಿಸುವಂತೆ ಅ. 8ರಂದು ರಾತ್ರಿ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದರು. ಈ ಕುರಿತು ರಾತ್ರಿ 11.21ಕ್ಕೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದರು. ಅದಾದ ಮೂರೇ ತಾಸಿನಲ್ಲೇ ಜಿಲ್ಲಾಧಿಕಾರಿ ಜಾಲಿವುಡ್‌ಗೆ ಬಂದು ಬೀಗ ತೆಗೆಸಿದರು.
ಜಾಲಿವುಡ್ ಬೀಗ ತೆರವುಗೊಳಿಸಿರುವುದನ್ನು ಖಂಡಿಸಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಉಪ ಮುಖ್ಯಮಂತ್ರಿ ಮತ್ತು ಜಿಲ್ಲಾಡಳಿತದ ವಿರುದ್ದ ಪ್ರತಿಭಟನೆ ನಡೆಸಿದರು. ಈ ವೇಳೆ ಪಾರ್ಕ್ ಒಳಕ್ಕೆ ನುಗ್ಗಿದ ಕೆಲವರನ್ನು ಪೊಲೀಸರು ವಶಕ್ಕೆ ಪಡೆದರು. ‘ರಾತ್ರೋರಾತ್ರಿ ಬೀಗ ತೆಗೆಸಿ ಬಿಗ್ ಬಾಸ್ ಷೋ ನಡೆಸಲು ಅವಕಾಶ ನೀಡುವ ತುರ್ತು ಏನಿತ್ತು? ನಿಯಮಗಳು ಎಲ್ಲರಿಗೂ ಸಮಾನವಾಗಿ ಅನ್ವಯಿಸಬೇಕು. ಡಿಸಿಎಂ ಈ ವಿಷಯದಲ್ಲಿ ತೋರಿಸಿರುವ ಆಸಕ್ತಿಯನ್ನು ಈಗಾಗಲೇ ಮುಚ್ಚಿರುವ ಕಾರ್ಖಾನೆಗಳ ವಿಷಯದಲ್ಲೂ ತೋರಿಸಲಿ. ಜನರ ಸಮಸ್ಯೆಗಳ ಪರಿಹಾರದಲ್ಲಿ ತೋರಿಸಲಿ’ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
‘ಪರಿಸರ ಅನುಸರಣೆ ಪ್ರಮುಖ ಆದ್ಯತೆಯಾಗಿ ಉಳಿದಿದ್ದರೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ಉಲ್ಲಂಘನೆಗಳನ್ನು ಪರಿಹರಿಸಿಕೊಳ್ಳಲು ಸ್ಟುಡಿಯೊಗೆ ಕಾಲಾವಕಾಶ ನೀಡಲಾಗುವುದು. ಪರಿಸರ ಸಂರಕ್ಷಣೆ ಕಡೆಗೆ ನಮ್ಮ ಜವಾಬ್ದಾರಿ ಎತ್ತಿ ಹಿಡಿಯುವುದರ ಜೊತೆಗೆ ಕನ್ನಡ ಮನರಂಜನಾ ಉದ್ಯಮ ಬೆಂಬಲಿಸಲು ನಾನು ಬದ್ಧನಾಗಿರುತ್ತೇನೆ’ ಎಂದು ಡಿಸಿಎಂ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಾಕಿರುವ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಡಿಕೆಶಿಗೆ ಕಿಚ್ಚ ಧನ್ಯವಾದ: ಸ್ಟುಡಿಯೊ ಬೀಗ ತೆರವಿಗೆ ಸೂಚನೆ ನೀಡಿದ ಬೆನ್ನಲ್ಲೇ ಷೋ ನಿರೂಪಕ ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಡಿಸಿಎಂಗೆ ಧನ್ಯವಾದ ಸಲ್ಲಿಸಿದ್ದಾರೆ. ‘ನನ್ನ ಕರೆಗೆ ಸ್ಪಂದಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಹಾಗೂ ಬಿಗ್ ಬಾಸ್ ಈ ಗೊಂದಲದಲ್ಲಿ ಯಾವುದೇ ರೀತಿಯಲ್ಲೂ ಭಾಗಿಯಾಗಿಲ್ಲ ಎಂಬುದನ್ನು ಒಪ್ಪಿಕೊಂಡಿರುವ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸುವೆ. ಈ ನಿಟ್ಟಿನಲ್ಲಿ ಪ್ರಯತ್ನಿಸಿದ ನಲಪಾಡ್ ಅವರಿಗೂ ಧನ್ಯವಾದ’ ಎಂದು ತಮ್ಮ ‘ಎಕ್ಸ್’ ಖಾತೆಯಲ್ಲಿ ರಾತ್ರಿ 11.42ಕ್ಕೆ ಪೋಸ್ಟ್ ಹಾಕಿದ್ದಾರೆ.
ಜಾಲಿವುಡ್ ಸ್ಥಾಪನೆ ಮತ್ತು ಕಾರ್ಯಾಚರಣೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಒಪ್ಪಿಗೆ ಪಡೆದಿಲ್ಲ. ಜೊತೆಗೆ ಪಾರ್ಕ್‌ನಲ್ಲಿ ಜಲ (ಮಾಲಿನ್ಯ ನಿವಾರಣೆ ಮತ್ತು ನಿಯಂತ್ರಣ) ಕಾಯ್ದೆ ಹಾಗೂ ಪರಿಸರ ಸಂರಕ್ಷಣಾ ಕಾಯ್ದೆ ಉಲ್ಲಂಘಿಸಿರುವುದು ದೃಢಪಟ್ಟಿದ್ದರಿಂದ ಪಾರ್ಕ್ ಬಂದ್ ಮಾಡಿಸುವಂತೆ ಜಿಲ್ಲಾಡಳಿತಕ್ಕೆ ಮಂಡಳಿ ಆದೇಶಿಸಿತ್ತು. ಬೀಗಮುದ್ರೆ ಬಿದ್ದ ಬಳಿಕ ಉಲ್ಲಂಘನೆ ಸರಿಪಡಿಸಿಕೊಳ್ಳಲು 15 ದಿನ ಕಾಲಾವಕಾಶ ಕೋರಿ ಜಾಲಿವುಡ್ ಆಡಳಿತ ಮಂಡಳಿ ಡಿ.ಸಿ.ಗೆ ಮನವಿ ಸಲ್ಲಿಸಿತ್ತು. ‘ಮಂಡಳಿ ಆದೇಶವನ್ನು ನಾವು ಪಾಲಿಸಿದ್ದು ನೀವು ಮಂಡಳಿಗೆ ಮನವಿ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದ್ದರು. ಆದರೆ ಡಿಸಿಎಂ ಸೂಚನೆ ಮೇರೆಗೆ ಸ್ವತಃ ತಾವೇ ಸ್ಥಳಕ್ಕೆ ಹೋಗಿ ಬೀಗ ತೆಗೆಸಿದರು. ಇದರೊಂದಿಗೆ ಮಂಡಳಿ ಆದೇಶಕ್ಕೆ ಕಿಮ್ಮತ್ತು ಇಲ್ಲದಂತಾಯಿತು. ‘ಡಿಸಿಎಂ ಅವರು ಸ್ಟುಡಿಯೊ ಬೀಗ ತೆಗೆಸಿ ಬಿಗ್ ಬಾಸ್ ಪುನರಾರಂಭಕ್ಕೆ ಅವಕಾಶ ಕೊಟ್ಟಿರಬಹುದು. ಆದರೆ ನಾವು ನಮ್ಮ ಆದೇಶಕ್ಕೆ ಬದ್ಧರಾಗಿದ್ದೇವೆ. ನಿಯಮ ಉಲ್ಲಂಘನೆ ಸರಿಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಜಾಲಿವುಡ್‌ನವರು ಮುಗಿಸಿದ ಬಳಿಕವೇ ಪಾರ್ಕ್ ಕಾರ್ಯಾಚರಣೆಗೆ ನಾವು ಅನುಮತಿ ನೀಡುತ್ತೇವೆ’ ಎಂದು ಮಂಡಳಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.