ರಾಮನಗರ: ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಳಿಹದ್ದುಗಳು ಸೇರಿದಂತೆ ಪಕ್ಷಿಗಳು ಅಪಘಾತದಲ್ಲಿ ಬಲಿಯಾಗುತ್ತಿರುವುದನ್ನು ತಡೆಯುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೆಲ ಕ್ರಮಗಳನ್ನು ಕೈಗೊಂಡಿದೆ. ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಪಕ್ಷಿಗಳ ಸಾವು ನಡೆಯುತ್ತಿರುವ ಕುರಿತು ‘ಪ್ರಜಾವಾಣಿ’ಯಲ್ಲಿ ‘ಹದ್ದುಗಳ ಮಸಣವಾದ ಹೆದ್ದಾರಿ!’ ವಿಶೇಷ ವರದಿಯನ್ನು ಜ.28ರಂದು ಪ್ರಕಟಿಸಿದ ಬೆನ್ನಲ್ಲೇ, ಪ್ರಾಧಿಕಾರ ವಾಹನ ಸವಾರರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದೆ.
ಹೆದ್ದಾರಿಯು ಸಂಚಾರಕ್ಕೆ ಮುಕ್ತವಾದಾಗಿನಿಂದ ಹದ್ದು, ಕಾಗೆ ಸೇರಿದಂತೆ ಕೆಲ ಪಕ್ಷಿಗಳು ವೇಗವಾಗಿ ಸಂಚರಿಸುವ ವಾಹನಗಳಿಗೆ ಸಿಲುಕಿ ಸಾಯುತ್ತಿದ್ದವು. ಈ ರೀತಿ ತಿಂಗಳಿಗೆ 15–20 ಪಕ್ಷಿಗಳು ಬಲಿಯಾಗುತ್ತಿದ್ದವು. ಇದರಲ್ಲಿ ಹದ್ದುಗಳೇ ಹೆಚ್ಚಾಗಿದ್ದವು. ಈ ಕುರಿತು ಬೆಂಗಳೂರಿನ ವಿಜಯನಗರದ ಸಾಫ್ಟ್‌ವೇರ್ ಎಂಜಿನಿಯರ್ ಗೌರಿ ಶಿವಯೋಗಿ ಅಧ್ಯಯನದಲ್ಲಿ ತೊಡಗಿದ್ದಾರೆ.
ಜಾಗೃತಿ ಬರಹ: ‘ಪ್ರಾಧಿಕಾರ ಹೆದ್ದಾರಿಯುದ್ಧಕ್ಕೂ 8 ಕಡೆ ಅಳವಡಿಸಿರುವ ಡಿಜಿಟಲ್ ಡಿಸ್‌ಪ್ಲೆ ಬೋರ್ಡ್‌ಗಳಲ್ಲಿ ‘DRIVE SLOWLY WE FLY HERE TOO’ (ಇಲ್ಲಿಯೂ ನಾವು ಹಾರಾಡುತ್ತಿರುತ್ತೇವೆ, ನಿಧಾನವಾಗಿ ಚಲಿಸಿ),‘BE ALERT WE TAKE OFF AND LAND HERE’ (ನಾವು ಇಲ್ಲಿ ಆಗಾಗ ಈ ರಸ್ತೆಗೆ ಇಳಿದು ಬಳಿಕ ಟೇಕಾಫ್ ಆಗುತ್ತಿರುತ್ತೇವೆ, ಎಚ್ಚರ ವಹಿಸಿ) ಹಾಗೂ ‘CARE FOR OUR BIRDS PLEASE DRIVE CAREFULLY’ (ನಮ್ಮ ಪಕ್ಷಿ ಸಂತತಿಯನ್ನು ರಕ್ಷಣೆ ಮಾಡಿ, ದಯವಿಟ್ಟು ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ) ಎಂಬ ಜಾಗೃತಿ ಬರಹಗಳನ್ನು ಹದ್ದಿನ ಚಿತ್ರದ ಜೊತೆಗೆ ಪ್ರದರ್ಶಿಸುತ್ತಿದೆ’ ಎಂದು ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ವಿಲಾಸ್ ಪಿ.ಬ್ರಹ್ಮಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಹೆದ್ದಾರಿಯಲ್ಲಿ ಪಕ್ಷಿಗಳ ಸಾವು ತಡೆಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೆಲ ಕ್ರಮಗಳನ್ನು ಕೈಗೊಂಡಿರುವುದು ಖುಷಿ ತಂದಿದೆ. ಇದಕ್ಕೆ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವರದಿ ಕಾರಣವಾಗಿದ್ದು ನನ್ನ ಪ್ರಯತ್ನಕ್ಕೆ ಫಲ ಸಿಕ್ಕಂತಾಗಿದೆಗೌರಿ ಶಿವಯೋಗಿ ಸಾಫ್ಟ್‌ವೇರ್ ಎಂಜಿನಿಯರ್ ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.