ADVERTISEMENT

ಜೈಲಿನಲ್ಲಿ ಜನ್ಮದಿನದ ಸೆಲ್ಫಿ; ಏಳು ಕೈದಿಗಳ ವಿರುದ್ಧ ಪ್ರಕರಣ

ಕೈದಿಯಿಂದ ಕೈದಿಗೆ ಹಸ್ತಾಂತರ ಆಗುತ್ತಿತ್ತು ಆ್ಯಂಡ್ರಾಯ್ಡ್‌ ಮೊಬೈಲ್‌!

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 4:16 IST
Last Updated 15 ಸೆಪ್ಟೆಂಬರ್ 2022, 4:16 IST
ರಾಮನಗರ ಜೈಲಿನಲ್ಲಿ ಕೈದಿಗಳು ತೆಗೆದುಕೊಂಡ ಸೆಲ್ಫಿ
ರಾಮನಗರ ಜೈಲಿನಲ್ಲಿ ಕೈದಿಗಳು ತೆಗೆದುಕೊಂಡ ಸೆಲ್ಫಿ   

ರಾಮನಗರ: ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡು ಸೆಲ್ಫಿ ತೆಗೆದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಕೈದಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಜೈಲಿನೊಳಗೆ ಸ್ಮಾರ್ಟ್‌ ಫೋನ್‌ ಬಳಕೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸದ್ಯ ಪ್ರಕರಣವೊಂದರಲ್ಲಿ ಬಂಧಿಯಾಗಿರುವ ಮಹೇಶ್‌ ಗೌಡ ಎಂಬ ಕೈದಿಯ ಹುಟ್ಟುಹಬ್ಬವು ಜೈಲಿನ ಒಳಗೇ ಮೂರು ದಿನದ ಹಿಂದೆ ನಡೆದಿತ್ತು. ಆತನೊಂದಿಗೆ ಇತರೆ ಏಳು ಕೈದಿಗಳು ಫೋಟೊಗೆ ಪೋಸ್ ನೀಡಿದ್ದು, ಆ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಚಿತ್ರ ಪೊಲೀಸರಿಗೂ ತಲುಪಿದ್ದು, ಅದನ್ನು ಆಧರಿಸಿ ಮಂಗಳವಾರ ಸಂಜೆ ರಾಮನಗರ ಎಸ್ಪಿ ಸಂತೋಷ್‌ ಬಾಬು ನೇತೃತ್ವದ ತಂಡವು ಜಿಲ್ಲಾ ಕಾರಾಗೃಹದ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಒಂದು ಆ್ಯಂಡ್ರಾಯ್ಡ್‌ ಮೊಬೈಲ್‌, ಒಂದು ಕೀ ಪ್ಯಾಡ್ ಮೊಬೈಲ್‌ , ಮೂರು ಸಿಮ್‌ ಕಾರ್ಡ್ ದೊರೆತಿದೆ. ಜೈಲಿನಲ್ಲಿ ಮೊಬೈಲ್ ಬಳಸಿದ ಆರೋಪದ ಮೇಲೆ ಮಹೇಶ್‌ ಗೌಡ ಹಾಗೂ ಸಯ್ಯದ್ ವಲ್ಲಿ, ಜುಬೇರ್, ದಿಲೀಪ್‌, ಯಶವಂತ್, ಅರುಣೇಶ್, ಗಿರೀಶ್, ಚಂದ್ರು ಎಂಬುವರ ಮೇಲೂ ಪ್ರಕರಣ ದಾಖಲಾಗಿದೆ.

ಮೊಬೈಲ್ ಬಳಕೆ ಅವ್ಯಾಹತ: ಜಿಲ್ಲಾ ಕಾರಾಗೃಹದಲ್ಲಿ ಮೊಬೈಲ್ ಬಳಕೆ ನಿರಂತರವಾಗಿದ್ದು, ಜೈಲಿನ ಕಾಂಪೌಂಡಿನಿಂದ ಒಳಗೆ ಮೊಬೈಲ್ ರವಾನಿಸುತ್ತಿದ್ದ ದೃಶ್ಯದ ವಿಡಿಯೊ ಈಚೆಗೆ ವೈರಲ್ ಆಗಿತ್ತು.

ADVERTISEMENT

ಸದ್ಯ ವಶಪಡಿಸಿಕೊಳ್ಳಲಾದ ಎರಡು ಮೊಬೈಲ್‌ಗಳನ್ನು ಈಗಿರುವ ಕೈದಿಗಳಿಗೆ ಹಿಂದಿನ ಕೈದಿಗಳು ಉಡುಗೊರೆಯಾಗಿ ಬಿಟ್ಟು ಹೋಗಿದ್ದರು ಎನ್ನುವುದು ವಿಶೇಷ. ವಾಸೀಂ ಎಂಬ ಕೈದಿ ಏಳು ತಿಂಗಳ ಹಿಂದಷ್ಟೇ ಇಲ್ಲಿಂದ ಬೇರೊಂದು ಜೈಲಿಗೆ ಸ್ಥಳಾಂತರ ಆಗುವ ಸಂದರ್ಭ ಚಂದ್ರು ಎಂಬ ಕೈದಿಗೆ ತನ್ನಲ್ಲಿದ್ದ ಸ್ಮಾರ್ಟ್‌ ಫೋನ್ ಕೊಟ್ಟು ಹೋಗಿದ್ದ. ಅಂತೆಯೇ, ಮತ್ತೊಬ್ಬ ಕೈದಿ ಕುಮಾರ್‌ ಬಿಡುಗಡೆ ಆಗುವ ಮುನ್ನ ವಾಸೀಂ ಎಂಬಾತನಿಗೆ ಕೀಪ್ಯಾಡ್ ಮೊಬೈಲ್‌ ನೀಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

ಹೀಗೆ ಕದ್ದು ಬಳಸುತ್ತಿದ್ದ ಮೊಬೈಲ್‌ಗಳನ್ನು ಆರೋಪಿಗಳು ಶೌಚಾಲಯದ ಕಮೋಡ್‌ನಲ್ಲಿ ಬಚ್ಚಿಡುತ್ತಿದ್ದರು. ಜೈಲಿನ ಟಿ.ವಿ. ಸೆಟ್‌ಟಾಪ್‌ ಬಾಕ್ಸ್ ಚಾರ್ಜರ್‌ ಅನ್ನು ಬಳಸಿಕೊಂಡು ಮೊಬೈಲ್ ರೀಜಾರ್ಚ್‌ ಮಾಡಿಕೊಳ್ಳುತ್ತಿದ್ದರು. ಈ ಮೊಬೈಲ್ ಬಳಸಿಕೊಂಡು ಯಾರೆಲ್ಲರಿಗೆ ಕರೆ ಮಾಡುತ್ತಿದ್ದರು. ಇದರಲ್ಲಿ ಜೈಲಿನ ಸಿಬ್ಬಂದಿಯ ಸಹಕಾರ ಇದೆಯೇ? ಎಂಬ ಆಯಾಮಗಳ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.