ADVERTISEMENT

ಕನಕಪುರ | ಬಿಜೆಪಿ-ಜೆಡಿಎಸ್‌ ಜಂಟಿಯಾಗಿ ಅಯೋಧ್ಯೆ ಮಂತ್ರಾಕ್ಷತೆ ಹಂಚಿಕೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2023, 16:12 IST
Last Updated 24 ಡಿಸೆಂಬರ್ 2023, 16:12 IST
ಕನಕಪುರ ಸಾತನೂರು ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಮತ್ತು ಜೆಡಿಎಸ್‌ ಮುಖಂಡರು
ಕನಕಪುರ ಸಾತನೂರು ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಮತ್ತು ಜೆಡಿಎಸ್‌ ಮುಖಂಡರು   

ಕನಕಪುರ: ಅಯೋಧ್ಯೆಯಿಂದ ಬಂದಿರುವ ಶ್ರೀರಾಮನ ಪವಿತ್ರ ಮಂತ್ರಾಕ್ಷತೆ ಹಂಚಿಕೆಯನ್ನು ಎರಡು ಪಕ್ಷದವರು ಒಟ್ಟಾಗಿ ಸೇರಿ ಜನವರಿ 1 ರಿಂದ ಪ್ರಾರಂಭಗೊಳಿಸಿ 15 ಕ್ಕೆ ಮುಕ್ತಾಯಗೊಳಿಸಲಾಗುವುದು ಎಂದು ಆಯೋಧ್ಯೆ ಶ್ರೀರಾಮ ತೀರ್ಥ ಟ್ರಸ್ಟ್‌ನ ತಾಲ್ಲೂಕು ಸಂಚಾಲಕ ಕುಮಾರಸ್ವಾಮಿ ತಿಳಿಸಿದರು.

ತಾಲ್ಲೂಕಿನ ಸಾತನೂರು ಗ್ರಾಮದಲ್ಲಿರುವ ಪ್ರವಾಸಿ ಮಂದಿರದಲ್ಲಿ ಅಯೋದ್ಯೆ ಶ್ರೀರಾಮ ತೀರ್ಥ ಟ್ರಸ್ಟ್ ನೇತೃತ್ವದಲ್ಲಿ ಮಂತ್ರಾಕ್ಷತೆ ಹಂಚಿಕೆ ಸಂಬಂಧ ಬಿಜೆಪಿ ಮತ್ತು ಜೆಡಿಎಸ್‌ ಭಾನುವಾರ ನಡೆಸಿದ ಜಂಟಿ ಸಭೆಯಲ್ಲಿ ಅವರು ಮಾತನಾಡಿದರು.

ಆಯೋಧ್ಯೆಯು ಶ್ರೀರಾಮನ ಜನ್ಮಭೂಮಿಯಾಗಿದ್ದು ಅಲ್ಲಿ ರಾಮಮಂದಿರವನ್ನು ನಿರ್ಮಾಣ ಮಾಡಿದ್ದು ಜನವರಿ 22 ಕ್ಕೆ ಶ್ರೀರಾಮನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ದೇಶದ ಜನರು ರಾಮನ ಮೂರ್ತಿ ಪ್ರತಿಷ್ಠಾಪನೆಗೆ ಮನೆಯಿಂದಲೇ ಮಂತ್ರಾಕ್ಷತೆ ಪ್ರೋಕ್ಷಣೆ ಮಾಡಲು ಮನೆ ಮನೆಗೆ ಹಂಚಿಕೆ ಮಾಡುತ್ತಿದ್ದೇವೆ ಎಂದು ಹೇಳಿದರು.

ADVERTISEMENT

ಬೆಳ್ಳಿ ರಥದಲ್ಲಿ ಮಂತ್ರಾಕ್ಷತೆಯನ್ನು ಮೆರವಣಿಗೆಯಲ್ಲಿ ಪ್ರತಿ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಮನೆ ಮನೆಗೆ ಹಂಚಿಕೆ ಮಾಡಲಾಗುವುದು. ಈ ಒಂದು ಕಾರ್ಯದಲ್ಲಿ ಎರಡು ಪಕ್ಷದವರು ಒಟ್ಟಾಗಿ ಕೆಲಸ ಮಾಡುತ್ತೇವೆ. ಸಭೆಯಲ್ಲಿ ಮಂತ್ರಾಕ್ಷತೆ ಹಂಚಿಕೆ ಮತ್ತು ಮೆರವಣಿಗೆ ಸಂಬಂಧ ಚರ್ಚೆ ನಡೆಸಿ ಕೆಲವು ನಿರ್ಣಯಗಳನ್ನು ಕೈಗೊಂಡಿರುವುದಾಗಿ ತಿಳಿಸಿದರು.

ಜೆಡಿಎಸ್ ನ ಮುಖಂಡರಾದ ಸಣ್ಣಪ್ಪ, ರಾಜೇಶ್, ಅನು ಕುಮಾರ್, ಪುಟ್ಟಸ್ವಾಮಿ, ಕೆಂಚಪ್ಪ, ಮನು, ಮಾದೇವ್‌, ಟ್ರಸ್ಟ್ ನ ಜಿಲ್ಲಾ ಸಂಚಾಲಕ ಕಿರಣ್, ತಾಲ್ಲೂಕು ಸಂಚಾಲಕ ಶಿವಮುತ್ತು, ಹೋಬಳಿ ಸಂಚಾಲಕರಾದ ಸುನಿಲ್, ಮಂಜುನಾಥ್ ರಾವ್, ಅಶ್ವಥ್ ನಾರಾಯಣ, ಬಿಜೆಪಿ ಮುಖಂಡರಾದ ಪ್ರದೀಪ, ಹೊನ್ನಪ್ಪ, ನಂಜುಂಡಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.