ಚನ್ನಪಟ್ಟಣ: ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರಿಗೆ ಟಿಕೆಟ್ ಕೊಡಬೇಕು ಎಂದು ಪಟ್ಟು ಹಿಡಿದಿರುವ ತಾಲ್ಲೂಕು ಬಿಜೆಪಿ ಮುಖಂಡರು, ‘ತಮ್ಮ ನಾಯಕನಿಗೆ ಟಿಕೆಟ್ ಸಿಗದಿದ್ದರೆ, ಈ ಚುನಾವಣೆಯಲ್ಲಿ ಮೈತ್ರಿ ಬದಿಗಿಟ್ಟು ಫೆಂಡ್ಲಿ ಫೈಟ್ ಮಾಡೋಣ’ ಎಂದು ಜೆಡಿಎಸ್‌ಗೆ ಸವಾಲು ಹಾಕಿದರು.
ಸಿಪಿವೈ ಪರವಾಗಿ ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಆನಂದಸ್ವಾಮಿ, ತಾಲ್ಲೂಕು ಅಧ್ಯಕ್ಷ ತೂಬಿನಕೆರೆ ರಾಜು ಹಾಗೂ ಸ್ಥಳೀಯ ಮುಖಂಡರು, ‘ಟಿಕೆಟ್ ವಿಷಯದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಜಯಮುತ್ತು ಗೊಂದಲ ಸೃಷ್ಟಿಸುತ್ತಿದ್ದಾರೆ. ಹಾಗಾಗಿ, ಕ್ಷೇತ್ರದಲ್ಲಿ ಮೈತ್ರಿ ಬಿಟ್ಟು ಚುನಾವಣೆ ಎದುರಿಸೋಣ. ನಮ್ಮಲ್ಲಿ ಸಿಪಿವೈ ಅಭ್ಯರ್ಥಿಯಾಗುತ್ತಾರೆ. ನಿಮ್ಮಲ್ಲಿ ಯಾರಾದರೂ ಆಗಿ’ ಎಂದರು.
‘ಕೇಂದ್ರ ಸಚಿವರಾಗಿರುವ ಎಚ್.ಡಿ. ಕುಮಾರಸ್ವಾಮಿ ಅವರಿಂದ ತೆರವಾಗಿರುವ ಸ್ಥಾನ ತುಂಬಲು ಸಿಪಿವೈ ಬಿಟ್ಟರೆ ಬೇರಾರೂ ಸಮರ್ಥರಿಲ್ಲ. ಇದೇ ಕಾರಣಕ್ಕಾಗಿ ಜೆಡಿಎಸ್ ಮುಖಂಡರೂ ಸಿಪಿವೈ ಬೆಂಬಲಿಸುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಮತ್ತು ಎರಡೂ ಪಕ್ಷಗಳ ಕಾರ್ಯಕರ್ತರಿಗೆ ರಕ್ಷಣೆ ಸಿಗಬೇಕಾದರೆ ಸಿಪಿವೈ ಅನಿವಾರ್ಯ’ ಎಂದು ಹೇಳಿದರು.
ವರಿಷ್ಠರ ಭೇಟಿ: ‘ಅಭ್ಯರ್ಥಿ ಆಯ್ಕೆಯನ್ನು ಎರಡೂ ಪಕ್ಷಗಳ ವರಿಷ್ಠರು ತೀರ್ಮಾನಿಸಬೇಕು. ಆದರೆ, ಜೆಡಿಎಸ್‌ನವರು ಮನಬಂದಂತೆ ಹೇಳಿಕೆ ಕೊಟ್ಟು ಗೊಂದಲ ಸೃಷ್ಟಿಸುತ್ತಿದ್ದಾರೆ. ಹಾಗಾಗಿ, ನಾವು ಸಹ ಸಿಪಿವೈಗೆ ಟಿಕೆಟ್ ಕೊಡಬೇಕು ಎಂದು ಒತ್ತಾಯಿಸಿ, ರಾಜ್ಯ ಮತ್ತು ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಮನವಿ ಮಾಡುತ್ತೇವೆ’ ಎಂದು ಆನಂದಸ್ವಾಮಿ ತಿಳಿಸಿದರು.
‘ಕ್ಷೇತ್ರಕ್ಕೆ ನಿಖಿಲ್ ಹೆಸರನ್ನು ಹೇಳಬೇಡಿ ಎಂದಿರುವ ಎಚ್‌ಡಿಕೆ, ಒಮ್ಮೆ ಸಿಪಿವೈ ಅವರನ್ನು ಭೇಟಿ ಮಾಡಿ ಮಾತನಾಡಿ ಎಂದು ಸ್ಥಳೀಯ ಜೆಡಿಎಸ್ ಮುಖಂಡರಿಗೆ ಸೂಚಿಸಿದ್ದರು. ಇದುವರೆಗೆ ಯಾರೂ ಭೇಟಿ ಮಾಡಿಲ್ಲ. ಆದರೆ, ಅಭ್ಯರ್ಥಿ ಬಗ್ಗೆ ಗೊಂದಲ ಸೃಷ್ಟಿಸುತ್ತಲೇ ಇದ್ದಾರೆ. ಕ್ಷೇತ್ರದಲ್ಲಿ ಮೈತ್ರಿ ಉಳಿಯಬೇಕಾದರೆ ಅಂತಹ ಹೇಳಿಕೆ ನೀಡುವುದನ್ನು ಬಿಟ್ಟು, ಮೈತ್ರಿ ಧರ್ಮ ಪಾಲಿಸಬೇಕು’ ಎಂದು ತೂಬಿನಕೆರೆ ರಾಜು ಮತ್ತು ಮುಖಂಡ ಜಯಕುಮಾರ್ ಎಚ್ಚರಿಕೆ ನೀಡಿದರು.
ಜಯಮುತ್ತು ಜೆಡಿಎಸ್ ವರಿಷ್ಠರೇ? ‘ನಿಖಿಲ್ ಕುಮಾರಸ್ವಾಮಿ ಅವರೇ ಅಭ್ಯರ್ಥಿ ಎಂದು ಹೇಳಿರುವ ಜಯಮುತ್ತು ಅವರು ಆ ಪಕ್ಷದ ವರಿಷ್ಠರೇ? ಅಥವಾ ಹೀಗೆ ಹೇಳುವಂತೆ ಅವರ ಪಕ್ಷದ ನಾಯಕರು ಇವರಿಗೇನಾದರೂ ಸೂಚನೆ ಕೊಟ್ಟಿದ್ದಾರೆಯೇ? ಇದೀಗ ಸ್ಥಳೀಯ ಜೆಡಿಎಸ್ ಮುಖಂಡರು ಸಹ ಸಿಪಿವೈಗೆ ಬೆಂಬಲ ವ್ಯಕ್ತಪಡಿಸುತ್ತಿರುವುದರಿಂದ ತನಗೆ ಹಿನ್ನಡೆಯಾಗಲಿದೆ ಎಂದು ಜಯಮುತ್ತು ಹೀಗೆ ಗೊಂದಲ ಸೃಷ್ಟಿಸುತ್ತಿದ್ದಾರೆ. ಮೈತ್ರಿ ಅಬಾಧಿತವಾಗಿ ಉಳಿಯಬೇಕಾದರೆ ಇಂತಹ ಧೋರಣೆಯನ್ನು ಬಿಟ್ಟು ಸಿಪಿವೈ ಬೆಂಬಲಿಸಬೇಕು’ ಎಂದು ತೂಬಿಕೆರೆ ರಾಜು ಹೇಳಿದರು. ‘ಜೆಡಿಎಸ್ ಸೇರುವ ಅಗತ್ಯವಿಲ್ಲ’ ‘ಯೋಗೇಶ್ವರ್ ಅವರು ರಾಜ್ಯದ ಪ್ರಭಾವಿ ರಾಜಕಾರಣಿಯಾಗಿದ್ದು ಹಿಂದೆ ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಂತಹವರು ಯಾವ ಕಾರಣಕ್ಕೆ ಜೆಡಿಎಸ್ ಸೇರುತ್ತಾರೆ. ಅಂತಹ ಅಗತ್ಯವೂ ಅವರಿಗೆ ಬರುವುದಿಲ್ಲ. ಈ ಬಗ್ಗೆ ತಾಲ್ಲೂಕು ಅಧ್ಯಕ್ಷರು ಅನಗತ್ಯ ಹೇಳಿಕೆ ನೀಡಬಾರದು. ಸದ್ಯ ಸಿಪಿವೈ ಅವರ ಪರಿಷತ್ ಅವಧಿ ಇನ್ನೂ ಒಂದೂವರೆ ವರ್ಷವಿದ್ದು ಕಾಂಗ್ರೆಸ್ ಎದುರಿಸಲು ಕ್ಷೇತ್ರದಲ್ಲಿ ಎದುರಿಸಲು ಅವರೊಬ್ಬರೇ ಸಮರ್ಥರು’ ಎಂದು ಮುಖಂಡ ಜಯಕುಮಾರ್ ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.