ADVERTISEMENT

ರಕ್ತನಿಧಿ ಕೇಂದ್ರಕ್ಕೆ ಬೇಕಿದೆ ಕಾಯಕಲ್ಪ

ಜಿಲ್ಲಾಸ್ಪತ್ರೆ: ತುರ್ತು ಸಂದರ್ಭದಲ್ಲಿ ರಕ್ತ ಸಿಗದೇ ರೋಗಿಗಳ ಪರದಾಟ

ಆರ್.ಜಿತೇಂದ್ರ
Published 14 ಜೂನ್ 2019, 19:30 IST
Last Updated 14 ಜೂನ್ 2019, 19:30 IST
ಜಿಲ್ಲಾಸ್ಪತ್ರೆಯಲ್ಲಿನ ರಕ್ತನಿಧಿ ಕೇಂದ್ರದ ಬಾಗಿಲು ಹಾಕಿರುವುದು
ಜಿಲ್ಲಾಸ್ಪತ್ರೆಯಲ್ಲಿನ ರಕ್ತನಿಧಿ ಕೇಂದ್ರದ ಬಾಗಿಲು ಹಾಕಿರುವುದು   

ರಾಮನಗರ: ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಇರುವ ರಕ್ತನಿಧಿ ಕೇಂದ್ರದ ಬಾಗಿಲು ಮುಚ್ಚಿದ್ದು, ರೋಗಿಗಳು ಪರದಾಡುವಂತೆ ಆಗಿದೆ.

ಕಳೆದ ಎರಡು ತಿಂಗಳಿನಿಂದ ಈ ಕೇಂದ್ರದ ಬಾಗಿಲು ತೆರೆದಿಲ್ಲ. ಇದರಿಂದಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ರಕ್ತ ದೊರೆಯುತ್ತಿಲ್ಲ. ರೋಗಿಗಳು ಖಾಸಗಿ ರಕ್ತನಿಧಿ ಕೇಂದ್ರಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ.

ಜಿಲ್ಲೆಯಲ್ಲಿ ರೆಡ್‌ ಕ್ರಾಸ್‌ ಸಂಸ್ಥೆಯು ಈ ರಕ್ತನಿಧಿ ಕೇಂದ್ರದ ನಿರ್ವಹಣೆಯ ಹೊಣೆ ಹೊತ್ತಿತ್ತು. ಆದರೆ ಸೂಕ್ತವಾಗಿ ನಿರ್ವಹಣೆ ಮಾಡಲು ಆಗಿರಲಿಲ್ಲ. ರಕ್ತ ಪರೀಕ್ಷೆಗೆ ಬೇಕಾದ ಸಿಬ್ಬಂದಿ, ವೈದ್ಯಾಧಿಕಾರಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಆಗಲಿಲ್ಲ. ಹೀಗಾಗಿ ಔಷಧ ನಿಯಂತ್ರಣ ಅಧಿಕಾರಿಗಳು ರೆಡ್‌ಕ್ರಾಸ್‌ಗೆ ನೀಡಿದ್ದ ಪರವಾನಗಿಯನ್ನು ರದ್ದುಗೊಳಿಸಿದ್ದರು.

ADVERTISEMENT

‘ಆಸ್ಪತ್ರೆಯಲ್ಲಿ ರಕ್ತ ದೊರೆಯದ ಕಾರಣ ಹಲವು ಸಮಸ್ಯೆಗಳು ಉಂಟಾಗಿವೆ. ರಕ್ತದ ಕೊರತೆಯ ನೆಪವೊಡ್ಡಿ ಸರ್ಕಾರಿ ವೈದ್ಯರು ಶಸ್ತ್ರಚಿಕಿತ್ಸೆಗಳನ್ನು ಮಾಡುತ್ತಿಲ್ಲ. ಬದಲಾಗಿ ಬೆಂಗಳೂರಿನ ಆಸ್ಪತ್ರೆಗಳಿಗೆ ಶಿಫಾರಸು ಮಾಡಿ ಕೈ ತೊಳೆದುಕೊಳ್ಳುತ್ತಿದ್ದಾರೆ’ ಎಂದು ರೋಗಿಗಳ ಸಂಬಂಧಿಕರು ಆರೋಪಿಸುತ್ತಾರೆ.

ಆದರೆ ಆಸ್ಪತ್ರೆಯ ಅಧಿಕಾರಿಗಳು ಇದನ್ನು ನಿರಾಕರಿಸಿದ್ದು, ‘ರಕ್ತ ಖರೀದಿಗೆ ರಾಷ್ಟ್ರೀಯ ಮಿಷನ್‌ ಅಡಿ ಸರ್ಕಾರವೇ ಹಣ ನೀಡುತ್ತಿದೆ. ಹೀಗಾಗಿ ಖಾಸಗಿ ಕೇಂದ್ರಗಳು ಹಾಗೂ ನೆರೆಹೊರೆಯ ಜಿಲ್ಲೆಗಳಿಂದ ರಕ್ತ ಖರೀದಿಗೆ ವ್ಯವಸ್ಥೆ ಮಾಡಿದ್ದೇವೆ’ ಎಂದು ಸ್ಪಷ್ಟನೆ ನೀಡುತ್ತಾರೆ.

ಹೊಸ ಪರವಾನಗಿ: ‘ರೆಡ್‌ಕ್ರಾಸ್‌ ಪರವಾನಗಿ ರದ್ದುಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆ ವತಿಯಿಂದಲೇ ಹೊಸ ಪರವಾನಗಿ ಪಡೆಯಲಾಗಿದೆ. ರಕ್ತನಿಧಿ ಕೇಂದ್ರವನ್ನೂ ನಾವೇ ನಿರ್ವಹಿಸಲಿದ್ದೇವೆ’ ಎನ್ನುತ್ತಾರೆ ಜಿಲ್ಲಾ ಶಸ್ತ್ರಚಿಕಿತ್ಸಕ ವಿಜಯ ನರಸಿಂಹ.

‘ಕೆಲವು ತಾಂತ್ರಿಕ ಕಾರಣಗಳಿಂದಾಗಿ ಬ್ಲಡ್‌ಬ್ಯಾಂಕ್‌ ನಿಂತಿತ್ತು. ಚುನಾವಣಾ ನೀತಿಸಂಹಿತೆ ಇದ್ದ ಕಾರಣ ಮತ್ತೆ ಬಾಗಿಲು ತೆರೆಯಲು ಆಗಿರಲಿಲ್ಲ. ಇದೀಗ ಕೇಂದ್ರವನ್ನು ಮತ್ತೆ ತೆರೆಯಲಾಗುತ್ತಿದ್ದು, ಶೀಘ್ರದಲ್ಲೇ ರೋಗಿಗಳಿಗೆ ಇಲ್ಲಿಯೇ ರಕ್ತ ಲಭ್ಯವಾಗಲಿದೆ’ ಎಂದು ಅವರು ತಿಳಿಸಿದರು.

ಕೇಂದ್ರದ ಮೂಲಕವೇ ಸ್ವೀಕಾರ
ಈ ಹಿಂದೆ ಇದ್ದಂತೆ ಆಸ್ಪತ್ರೆಗಳು ರೋಗಿಗಳ ಸಂಬಂಧಿಕರಿಂದ ನೇರವಾಗಿ ರಕ್ತ ಸ್ವೀಕರಿಸುವಂತೆ ಇಲ್ಲ. ಬದಲಾಗಿ ಅವಶ್ಯವಿದ್ದಷ್ಟು ರಕ್ತವನ್ನು ಕೇಂದ್ರಗಳ ಮೂಲಕವೇ ಪಡೆಯಬೇಕಾಗುತ್ತದೆ. ಆಸಕ್ತರು ಬ್ಲಡ್‌ ಬ್ಯಾಂಕುಗಳಲ್ಲಿ ರಕ್ತ ನೀಡಿ ಅದರ ಬದಲಿಗೆ ಮತ್ತೊಂದು ರಕ್ತವನ್ನು ರೋಗಿಗಳಿಗಾಗಿ ಪಡೆಯಬಹುದಾಗಿದೆ.

‘ರಕ್ತ ಪಡೆಯುವುದಕ್ಕೆ ಮುನ್ನ ಎಚ್‌ಐವಿ, ಎಚ್‌ಎಸ್‌ಬಿಎ ಮೊದಲಾದ ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ. ಒಂದೇ ಗುಂಪಿನ ರಕ್ತವಾದರೂ ಅದು ರೋಗಿಗಳಿಗೆ ಹೊಂದಿಕೊಳ್ಳುತ್ತದೆಯೋ ಇಲ್ಲವೋ ಎಂಬುದನ್ನೂ ಪರೀಕ್ಷಿಸಬೇಕಾಗುತ್ತದೆ. ಹೀಗಾಗಿ ನೇರ ರಕ್ತ ಪಡೆಯುವುದನ್ನು ನಿರ್ಬಂಧಿಸಲಾಗಿದೆ’ ಎನ್ನುತ್ತಾರೆ ವೈದ್ಯರು.

**
ರೆಡ್‌ಕ್ರಾಸ್ ಪರವಾನಗಿ ರದ್ದುಗೊಂಡ ಕಾರಣ ರಕ್ತನಿಧಿ ಕೇಂದ್ರವು ನಿಂತಿತ್ತು. ಮತ್ತೆ ಬಾಗಿಲು ತೆರೆಯುತ್ತಿದ್ದು, ಬೆಂಗಳೂರಿನಿಂದ ರಕ್ತ ತರಿಸಲು ವ್ಯವಸ್ಥೆ ಮಾಡಲಾಗಿದೆ
ವಿಜಯ ನರಸಿಂಹ, ಜಿಲ್ಲಾ ಶಸ್ತ್ರಚಿಕಿತ್ಸಕ

**

ರಕ್ತನಿಧಿ ಕೇಂದ್ರ ಬಾಗಿಲು ಹಾಕಿರುವುದರಿಂದ ರೋಗಿಗಳಿಗೆ ಸಾಕಷ್ಟು ತೊಂದರೆ ಆಗಿದೆ. ದಾನಿಗಳು ರಕ್ತ ನೀಡಬೇಕು ಎಂದರೂ ಆಗುತ್ತಿಲ್ಲ
ಕಾಂತರಾಜ ಪಟೇಲ್‌,ರಕ್ತದಾನಿ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.