ಬಿಡದಿ: ಇಲ್ಲಿನ ರೈಲು ನಿಲ್ದಾಣದಲ್ಲಿ ಬಾಂಬ್ ಇರುವ ಕುರಿತು ಬಂದ ಅನಾಮಧೇಯ ಕರೆ ಮೇರೆಗೆ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಹಾಗೂ ರೈಲ್ವೆ ಪೊಲೀಸರು ಮಂಗಳವಾರ ಬೆಳಗ್ಗೆ ಬಾಂಬ್‌ಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ. ಹಾಗಾಗಿ, ಇದೊಂದು ಹುಸಿ ಕರೆ ಎಂದು ಪೊಲೀಸರು ತಿಳಿಸಿದ್ದಾರೆ.
ರೈಲ್ವೆ ನಿಯಂತ್ರಣ ಕೊಠಡಿಗೆ ಸೋಮವಾರ ರಾತ್ರಿ 11.30ರ ಸುಮಾರಿಗೆ ವ್ಯಕ್ತಿಯೊಬ್ಬರು ಮಾಡಿ, ‘ನಿಲ್ದಾಣದಲ್ಲಿ ಬಾಂಬ್ ಇದೆ’ ಎಂದಿದ್ದಾರೆ. ರಾಜ್ಯ ಗುಪ್ತಚರ ವಿಭಾಗದಿಂದ ಬಂದ ಸೂಚನೆ ಮೇರೆಗೆ ಪೊಲೀಸರು ತಕ್ಷವೇ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದೊಂದಿಗೆ ನಿಲ್ದಾಣಕ್ಕೆ ತೆರಳಿ ತಪಾಸಣೆ ನಡೆಸಿದ್ದಾರೆ. ಆದರೆ, ಸ್ಫೋಟಕ ಸಿಕ್ಕಿಲ್ಲ. ಮಂಗಳವಾರ ಬೆಳಿಗ್ಗೆ ತಪಾಸಣೆ ವೇಳೆಯೂ ಸ್ಫೋಟಕ ಪತ್ತೆಯಾಗಿಲ್ಲ.
ಕರೆ ಬಂದಿದ್ದರ ಕುರಿತು ಪೊಲೀಸರು ಒಂದೊಂದು ರೀತಿ ಹೇಳುತ್ತಿದ್ದಾರೆ. ಗುಪ್ತಚರ ವಿಭಾಗದ ಸೂಚನೆ ಮೇರೆಗೆ ತೆರಳಿ ಶೋಧ ನಡೆಸಿದ್ದೇವೆ ಎಂದು ರೈಲ್ವೆ ಪೊಲೀಸರು ಹೇಳಿದರೆ, ನಿಯಂತ್ರಣ ಕೊಠಡಿಗೆ ಬಂದ ಕರೆ ಆಧರಿಸಿ ನಿಲ್ದಾಣದಲ್ಲಿ ತಪಾಸಣೆ ನಡೆಸಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪಾಕ್ ಪರ ಬರಹ ಪ್ರಕರಣಕ್ಕೆ ಸಂಬಂಧವಿಲ್ಲ: ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯ ಶೌಚಾಲಯದಲ್ಲಿ ಇತ್ತೀಚೆಗೆ ಪಾಕಿಸ್ತಾನ ಪರ ಗೋಡೆ ಬರಹ ಬರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿ ಪೊಲೀಸರು ಉತ್ತರ ಕರ್ನಾಟಕ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.
ಇದನ್ನು ಖಂಡಿಸಿ ಕಿಡಿಗೇಡಿ ನಿಯಂತ್ರಣ ಕೊಠಡಿಗೆ ಹುಸಿ ಬಾಂಬ್ ಕರೆ ಮಾಡಿ ಬೆದರಿಸಿದ್ದಾನೆ ಎಂಬ ಮಾತು
ಗಳು ಸಹ ಕೇಳಿ ಬರುತ್ತಿವೆ. ಆದರೆ, ಪೊಲೀಸರು ಇದನ್ನು ನಿರಾಕರಿಸಿದ್ದಾರೆ.
ಇತರ ನಿಲ್ದಾಣದಲ್ಲೂ ಶೋಧ
ಬಿಡದಿ ರೈಲು ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ ಬೆನ್ನಲ್ಲೇ ಮುನ್ನೆಚ್ಚರಿಕೆ ಕ್ರಮವಾಗಿ ರಾಮನಗರ ಮತ್ತು ಚನ್ನಪಟ್ಟಣ ನಿಲ್ದಾಣದಲ್ಲೂ ರೈಲ್ವೆ ಪೊಲೀಸರು ತಪಾಸಣೆ ನಡೆಸಿದ್ದಾರೆ ಎಂದು ರೈಲ್ವೆ ಪೊಲೀಸ್ ಮೂಲಗಳು ತಿಳಿಸಿವೆ.
ಹುಸಿ ಬಾಂಬ್ ಕರೆ ಬಂದಿಲ್ಲ. ಹಬ್ಬಗಳು ಬಂದಾಗ ಇಲಾಖೆಯು ಎಂದಿನಂತೆ ಜನನಿಬಿಡ ಪ್ರದೇಶಗಳಲ್ಲಿ ಬಾಂಬ್ ನಿಷ್ಕ್ರೀಯ ದಳದೊಂದಿಗೆ ತಪಾಸಣೆ ನಡೆಸುತ್ತದೆಆರ್. ಶ್ರೀನಿವಾಸ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.