ಚನ್ನಪಟ್ಟಣ: ನಗರದಲ್ಲಿ ನನೆಗುದಿಗೆ ಬಿದ್ದಿರುವ ಖಾಸಗಿ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿಗೆ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಅನುದಾನದ ಆಸರೆ ಸಿಗುವುದೇ ಎಂಬ ನಿರೀಕ್ಷೆ ಚಿಗುರೊಡೆದಿದೆ. ನಗರದ ಹೃದಯಭಾಗವಾದ ಬೆಂಗಳೂರು–ಮೈಸೂರು ರಸ್ತೆಯಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ಜಾಗದಲ್ಲಿ ಖಾಸಗಿ ನಿಲ್ದಾಣ ನಿರ್ಮಾಣಕ್ಕೆ ಹನ್ನೊಂದು ವರ್ಷಗಳಿಂದ ಗ್ರಹಣ ಹಿಡಿದಿದೆ.
ಹಿಂದೆ ಅಸ್ತಿತ್ವದಲ್ಲಿದ್ದ ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನಗರಸಭೆ ವತಿಯಿಂದ 2013ರಲ್ಲಿ ಸುಮಾರು ₹40 ಕೋಟಿ ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣಕ್ಕೆ ಯೋಜನೆ ರೂಪಿಸಿ ಕಾಮಗಾರಿಗೂ ಚಾಲನೆ ನೀಡಲಾಗಿತ್ತು. ಆದರೆ, ನಂತರದಲ್ಲಿ ನಡೆದ ಕೆಲ ಬೆಳವಣಿಗೆಗಳಿಂದಾಗಿ ಕಾಮಗಾರಿ ನನೆಗುದಿಗೆ ಬಿದ್ದಿತ್ತು.
ನಿಲ್ದಾಣ ಒಳಗೊಂಡ ಆರು ಅಂತಸ್ತಿನ ಸಂಕೀರ್ಣದಲ್ಲಿ ತಳ ಮಹಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ, ನೆಲಮಹಡಿಯಲ್ಲಿ ಬಸ್ ನಿಲುಗಡೆ, ಮಲ್ಟಿಪ್ಲೆಕ್ಸ್ ಚಿತ್ರಮಂದಿರ, ಹೋಟೆಲ್ ಆರಂಭಿಸುವ ಯೋಜನೆ ರೂಪಿಸಲಾಗಿತ್ತು. ನಗರಭೆ ಜಾಗದಲ್ಲಿ ಪ್ರಾಧಿಕಾರವು ಎರಡು ವರ್ಷದೊಳಗೆ ಸಂಕೀರ್ಣ ನಿರ್ಮಿಸುವ ಒಡಂಬಡಿಕೆಯಾಗಿತ್ತು.
ಆರಂಭದಲ್ಲಿ ಬಿರುಸಿನಿಂದ ಆರಂಭಗೊಂಡ ಕಾಮಗಾರಿಗೆ ನಂತರ ಹಲವು ವಿಘ್ನಗಳು ಎದುರಾದವು. ಅಂದಿನಿಂದ ಸ್ಥಳದ ಸುತ್ತಲೂ ಶೀಟ್‌ಗಳನ್ನು ಅಳವಡಿಸಲಾಗಿದೆ. ಪಾಳು ಬಿದ್ದಂತಿರುವ ಜಾಗವು ಯಾವುದೇ ಉಪಯೋಗಕ್ಕೆ ಬಾರದಂತಾಗಿದೆ. ಗ್ರಾಮೀಣ ಭಾಗಕ್ಕೆ ಹೋಗಲು ಖಾಸಗಿ ಬಸ್ಸುಗಳನ್ನೇ ಆಶ್ರಯಿಸುವ ಪ್ರಯಾಣಿಕರು ಹಾಗೂ ಬಸ್‌ಗಳಿಗಾಗಿ ನಿಲ್ದಾಣ ತಲೆ ಎತ್ತಲಿದೆ ಎಂಬ ನಿರೀಕ್ಷೆ ಹುಸಿಯಾಗಿತ್ತು. ಇದೀಗ, ಮತ್ತೆ ನಿರೀಕ್ಷೆ ಗರಿಗೆದರಿದೆ.
ದುಪ್ಪಟ್ಟಾದ ಯೋಜನಾ ವೆಚ್ಚ: ಹನ್ನೊಂದು ವರ್ಷಗಳ ಹಿಂದೆ ₹40 ಕೋಟಿ ವೆಚ್ಚದಲ್ಲಿ ಸಿದ್ದಗೊಂಡಿದ್ದ ಯೋಜನೆಯ ಯೋಜನಾ ವೆಚ್ಚ ಇದೀಗ, ₹100 ಕೋಟಿ ದಾಟಿದೆ. ಇಷ್ಟೊಂದು ಬೃಹತ್ ಮೊತ್ತವನ್ನು ಇದೀಗ ಪ್ರತ್ಯೇಕವಾಗಿ ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರವಾಗಲಿ ಅಥವಾ ನಗರಸಭೆಯಾಗಲಿ ಭರಿಸುವ ಸಾಮರ್ಥ್ಯ ಹೊಂದಿಲ್ಲ. ಹಾಗಾಗಿ, ಬಜೆಟ್‌ನತ್ತ ಎಲ್ಲರ ಚಿತ್ತ ಹರಿದಿದೆ.
ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದು ಶಾಸಕರಾಗಿರುವ ಸಿ.ಪಿ. ಯೋಗೇಶ್ವರ್ ಅವರು, ನನೆಗುದಿಗೆ ಬಿದ್ದಿದ್ದ ಕಾಮಗಾರಿ ಸ್ಥಳಕ್ಕೆ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಯೋಜನೆಗೆ ಮರುಜೀವ ನೀಡುವ ಕುರಿತು ಚರ್ಚೆ ನಡೆಸಿದ್ದರು. ಕಾಮಗಾರಿಗೆ ಎದುರಾಗಿರುವ ಅಡೆತಡೆಗಳನ್ನು ನಿವಾರಿಸಿ ಹೊಸ ವರ್ಷದಲ್ಲಿ ಕಾಮಗಾರಿ ಪುನರಾರಂಭಿಸುವ ಭರವಸೆ ನೀಡಿದ್ದರು.
ನಿಲ್ದಾಣದ ಕುರಿತು ಯೋಗೇಶ್ವರ್ ಅವರು ಆರಂಭದಿಂದಲೂ ಹೆಚ್ಚಿನ ಆಸ್ಥೆ ವಹಿಸಿದ್ದರಿಂದ, ಈ ಬಾರಿಯ ಬಜೆಟ್‌ನಲ್ಲಿ ಸರ್ಕಾರದ ಗಮನ ಸೆಳೆದು ಅನುದಾನ ಬಿಡುಗಡೆ ಮಾಡಿಸುತ್ತಾರೆ ಎಂಬ ವಿಶ್ವಾಸ ತಾಲ್ಲೂಕಿನ ಜನರದ್ದು. ತಾಲ್ಲೂಕಿನಲ್ಲಿ ಜೆಡಿಎಸ್ ಪಾರಮ್ಯ ಅಂತ್ಯಗೊಳಿಸಲು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ನೇತೃತ್ವದಲ್ಲಿ ಕಾಂಗ್ರೆಸ್ ಇನ್ನಿಲ್ಲದ ಪ್ರಯತ್ನಗಳನ್ನು ಮಾಡಿತ್ತು.
ಉಪ ಚುನಾವಣೆ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿತ್ತು. ಇನ್ನೂ ಹಲವು ಕೆಲಸಗಳನ್ನು ಮಾಡುವ ಭರವಸೆಗಳನ್ನು ಡಿಸಿಎಂ ನೀಡಿದ್ದರು. ಕಡೆ ಗಳಿಗೆಯಲ್ಲಿ ಯೋಗೇಶ್ವರ್, ಕಮಲ ತೊರೆದು ಕೈ ಹಿಡಿದಿದ್ದರು. ನಿಲ್ದಾಣ ನಿರ್ಮಾಣವು ಯೋಗೇಶ್ವರ್ ಅವರಿಗೆ ಪ್ರತಿಷ್ಠೆಯಾಗಿರುವುದರಿಂದ ಬಜೆಟ್‌ನಲ್ಲಿ ಅನುದಾನ ತಂದು ನನೆಗುದಿಗೆ ಬಿದ್ದಿರುವ ಯೋಜನೆಗೆ ಮರುಜೀವ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿ ತಾಲ್ಲೂಕಿನ ಜನ ಇದ್ದಾರೆ.
ನಗರಸಭೆ ಪ್ರಾಧಿಕಾರದ ಜಂಟಿ ಸಹಭಾಗಿತ್ವದ ಯೋಜನೆ ₹40 ಕೋಟಿ ವೆಚ್ಚದ ಸಂಕೀರ್ಣಕ್ಕೆ 2013ರಲ್ಲಿ ಚಾಲನೆ ಬಜೆಟ್‌ನಲ್ಲಿ ಯೋಗೇಶ್ವರ್ ಅನುದಾನ ತರುವ ನಿರೀಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.