ADVERTISEMENT

ಏಳು ದಿನವೂ ಹಾಲು ಖರೀದಿ-ಎಚ್‌.ಎಸ್‌.ಹರೀಶ್‌ಕುಮಾರ್‌

ಬಮೂಲ್‌ ತುರ್ತುಸಭೆಯಲ್ಲಿ ನಿರ್ಣಯ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 30 ಮೇ 2021, 3:28 IST
Last Updated 30 ಮೇ 2021, 3:28 IST
ದೊಡ್ಡಮುದುವಾಡಿಯಲ್ಲಿ ಬಮೂಲ್‌ ನಿರ್ದೇಶಕ ಎಚ್‌.ಎಸ್‌. ಹರೀಶ್‌ ರೈತರಿಂದ ಹಾಲು ಖರೀದಿ ಬಗ್ಗೆ ಮಾಹಿತಿ ನೀಡಿದರು
ದೊಡ್ಡಮುದುವಾಡಿಯಲ್ಲಿ ಬಮೂಲ್‌ ನಿರ್ದೇಶಕ ಎಚ್‌.ಎಸ್‌. ಹರೀಶ್‌ ರೈತರಿಂದ ಹಾಲು ಖರೀದಿ ಬಗ್ಗೆ ಮಾಹಿತಿ ನೀಡಿದರು   

ಕನಕಪುರ: ಕೋವಿಡ್‌ ಕಾರಣದಿಂದ ಕೆಎಂಎಫ್‌ ಎರಡು ದಿನ ರೈತರಿಂದ ಹಾಲು ಖರೀದಿ ನಿಲ್ಲಿಸುವುದಾಗಿ ಹೇಳಿದೆ. ಆದರೆ, ಬೆಂಗಳೂರು ಹಾಲು ಒಕ್ಕೂಟ ವಾರದ 7 ದಿನವೂ ರೈತರಿಂದ ಹಾಲನ್ನು ಖರೀದಿಸಲಿದೆ ಎಂದು ಬಮೂಲ್‌ ನಿರ್ದೇಶಕ ಎಚ್‌.ಎಸ್‌.ಹರೀಶ್‌ಕುಮಾರ್‌ ತಿಳಿಸಿದರು.

ತಾಲ್ಲೂಕಿನ ಹಾರೋಹಳ್ಳಿ ಹೋಬಳಿಯ ದೊಡ್ಡಮುದುವಾಡಿ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ನಡೆದ ಕೋವಿಡ್‌ ಕಿಟ್‌ ವಿತರಣೆ ಕಾರ್ಯಕ್ರಮದಲ್ಲಿ ನಂತರ ಅವರು ಮಾತನಾಡಿದರು.

ಕೋವಿಡ್‌ ಕಾರಣದಿಂದ ರಾಜ್ಯದಲ್ಲಿ 20 ಲಕ್ಷ ಲೀಟರ್‌ ಹಾಲು ಪ್ರತಿದಿನ ಉಳಿಯುತ್ತಿದ್ದು ಒಕ್ಕೂಟಕ್ಕೆ ನಷ್ಟವಾಗುತ್ತಿದೆ. ಆ ಕಾರಣದಿಂದ ಕೆಎಂಎಫ್‌ ವಾರದಲ್ಲಿ ಎರಡು ದಿನ ರೈತರಿಂದ ಹಾಲು ಖರೀದಿ ನಿಲ್ಲಿಸಲು ತೀರ್ಮಾನಿಸಿದೆ ಎಂದರು.

ADVERTISEMENT

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಸಂಸದ ಡಿ.ಕೆ. ಸುರೇಶ್‌ ಅವರು ಕೊರೊನಾ ಸಂಕಷ್ಟದಲ್ಲಿ ರೈತರಿಗೆ ತೊಂದರೆ ಕೊಡದೆ ಹಾಲು ಖರೀದಿಸುವಂತೆ ಮನವಿ ಮಾಡಿದ್ದಾರೆ. ಹಾಗಾಗಿ, ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್‌) ಶುಕ್ರವಾರ ಆಡಳಿತ ಮಂಡಳಿಯ ತುರ್ತು ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಿದರು.

ಕೋವಿಡ್‌ ಸಂದರ್ಭದಲ್ಲಿ ರೈತರ ನೆರವಿಗೆ ನಾವು ನಿಲ್ಲಬೇಕಿದೆ. ಈ ಸಂದರ್ಭದಲ್ಲಿ ಉಳಿಯುವ ಹಾಲನ್ನು ಪೌಡರ್‌ ಮಾಡೋಣವೆಂದು ಎಲ್ಲಾ ನಿರ್ದೇಶಕರು ಸಭೆಯಲ್ಲಿ ಒಮ್ಮತದ ತೀರ್ಮಾನ ಮಾಡಿದ್ದಾರೆ. ಬಮೂಲ್‌ ಹಾಲು ಖರೀದಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲದಂತೆ ವಾರದ ಎಲ್ಲಾ ದಿನವೂ ಹಾಲು ಖರೀದಿಸಲು ನಿರ್ಣಯ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್‌.ಇ. ಇಕ್ಬಾಲ್‌ ಹುಸೇನ್‌ ಮಾತನಾಡಿ, ಕೋವಿಡ್‌ ಕಾರಣದಿಂದ ರೈತರು ಈಗಾಗಲೇ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಬೇರೆ ಪದಾರ್ಥಗಳಂತೆ ಹಾಲನ್ನು ಶೇಖರಣೆ ಮಾಡಿ ಬೇರೆ ಸಂದರ್ಭದಲ್ಲಿ ಮಾರಾಟ ಮಾಡಲು ಆಗುವುದಿಲ್ಲ. ಎರಡು ದಿನ ಉಳಿಯುವ ಹಾಲನ್ನು ಏನು ಮಾಡಬೇಕೆಂದು ರೈತರು ಚಿಂತಿತರಾಗಿದ್ದರು ಎಂದರು.

ಡಿ.ಕೆ. ಶಿವಕುಮಾರ್‌ ಮತ್ತು ಡಿ.ಕೆ. ಸುರೇಶ್‌ ಅವರು ಬಮೂಲ್‌ ಮೇಲೆ ಒತ್ತಡ ತಂದು ರೈತರಿಂದ ಹಾಲು ಖರೀದಿಯನ್ನು ಯಾವುದೇ ಕಾರಣಕ್ಕೂ ನಿಲ್ಲಸದಂತೆ ಮನವಿ ಮಾಡಿದ್ದರು. ಅದಕ್ಕೆ ಸ್ಪಂದಿಸಿರುವ ಬಮೂಲ್‌ ಆಡಳಿತ ಮಂಡಳಿಯು ಹಾಲು ಖರೀದಿಗೆ ಒಪ್ಪಿದೆದೆ. ಇದರಿಂದ ರೈತರು ನಿರಾಳವಾಗಿ ಇರಬಹುದು ಎಂದು ತಿಳಿಸಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌, ಗೂಗರೆದೊಡ್ಡಿ ಪರಮೇಶ್‌, ಮುದುವಾಡಿ ರವಿ, ಬಾಬು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.