ADVERTISEMENT

ಬೈರಮಂಗಲ ಜಲಾಶಯ ಶುದ್ಧೀಕರಣ ಕನಸು ನನಸು

ಕೊಳಚೆ ನೀರು ಹರಿದುಹೋಗಲು ತಿರುವು ಕಾಲುವೆ ನಿರ್ಮಾಣ; ಮಳೆ ನೀರು ಮಾತ್ರ ಕೆರೆಗೆ

ಆರ್.ಜಿತೇಂದ್ರ
Published 3 ಆಗಸ್ಟ್ 2019, 12:29 IST
Last Updated 3 ಆಗಸ್ಟ್ 2019, 12:29 IST
ಬೈರಮಂಗಲ ಜಲಾಶಯದಿಂದ ನೊರೆಯಂತೆ ಹರಿದು ಹೊರ ಹೋಗುತ್ತಿರುವ ನೀರು (ಸಂಗ್ರಹ ಚಿತ್ರ)
ಬೈರಮಂಗಲ ಜಲಾಶಯದಿಂದ ನೊರೆಯಂತೆ ಹರಿದು ಹೊರ ಹೋಗುತ್ತಿರುವ ನೀರು (ಸಂಗ್ರಹ ಚಿತ್ರ)   

ರಾಮನಗರ: ಬಿಡದಿ ಭಾಗದ ಜನರ ಬಹುದಿನದ ಕನಸಾದ ಬೈರಮಂಗಲ ಜಲಾಶಯದ ಶುದ್ಧೀಕರಣ ಕಾರ್ಯಕ್ಕೆ ಕಡೆಗೂ ಚಾಲನೆ ದೊರೆತಿದೆ. ಇನ್ನು ಮುಂದೆ ಬೆಂಗಳೂರಿನ ಕೊಳಚೆ ನೀರು ಈ ಜಲಾಶಯಕ್ಕೆ ಹರಿಯುವುದು ತಪ್ಪಲಿದೆ.

ವೃಷಭಾವತಿ ನದಿ ಪಾತ್ರದ ಶುದ್ಧೀಕರಣದ ಸದುದ್ದೇಶದೊಂದಿಗೆ ಕಾವೇರಿ ನೀರಾವರಿ ನಿಗಮವು ಈ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಬೆಂಗಳೂರು ಭಾಗದಿಂದ ವೃಷಭಾವತಿ ಮೂಲಕ ಹರಿದು ಬರುವ ಕೊಳಚೆ ನೀರನ್ನು ಜಲಾಶಯದ ಹಿಂದೆಯೇ ತಡೆಗಟ್ಟಿ ತಿರುವು ನಾಲೆ ನಿರ್ಮಾಣದ ಮೂಲಕ ಅದನ್ನು ನೇರ ನದಿಗೆ ಹರಿದು ಬಿಡುವುದು. ಮಳೆ ನೀರು ಮಾತ್ರ ಜಲಾಶಯಕ್ಕೆ ಬರುವಂತೆ ನೋಡಿಕೊಳ್ಳುವುದು ಈ ಯೋಜನೆಯ ಉದ್ದೇಶವಾಗಿದೆ. ಈಗಾಗಲೇ ಕಾಮಗಾರಿಯು ಆರಂಭಗೊಂಡಿದೆ.

ಅಣೆಕಟ್ಟೆ, ಕಾಲುವೆ ನಿರ್ಮಾಣ: ಬೈರಮಂಗಲ ಜಲಾಶಯದ ಹಿಂಭಾಗದಲ್ಲಿ ಶ್ಯಾನಮಂಗಲ ಸೇತುವೆ ಬಳಿ ವೃಷಭಾವತಿ ನದಿಗೆ ಅಡ್ಡಲಾಗಿ 68 ಮೀಟರ್‌ ಉದ್ದದ ತಳಮಟ್ಟದ ಅಣೆಕಟ್ಟೆ ನಿರ್ಮಾಣ ಆಗಲಿದೆ. ಇದಕ್ಕೆ ಗೇಟುಗಳನ್ನು ಅಳವಡಿಸಲಾಗುತ್ತದೆ. ಇದಕ್ಕೆ ಹೊಂದಿಕೊಂಡಂತೆ 2 ಮೀಟರ್‌ ಎತ್ತರ ಹಾಗೂ 4.25 ಮೀಟರ್‌ ಅಗಲಕ್ಕೆ ನಾಲೆಯನ್ನು ನಿರ್ಮಿಸಲಾಗುತ್ತದೆ. ಈ ನಾಲೆಯನ್ನು ಜಲಾಶಯಕ್ಕೆ ಹೊಂದಿಕೊಂಡಂತೆಯೇ ಎಳೆತಂದು ಕೋಡಿ ಪ್ರದೇಶದ ನಂತರ ನದಿಗೆ ಜೋಡಿಸಲಾಗುತ್ತದೆ. ಶ್ಯಾನಮಂಗಲದಿಂದ ಬೈರಮಂಗಲ ಕೆರೆಯ ತಳಭಾಗದವರೆಗೆ ಒಟ್ಟು 6.805 ಕಿ.ಮೀ. ಉದ್ದದ ನಾಲೆ ನಿರ್ಮಾಣ ಆಗಲಿದೆ.

ADVERTISEMENT

ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನ ಕೊಳಚೆ ನೀರು ಈ ಕಾಲುವೆ ಮೂಲಕ ಬೈರಮಂಗಲ ಜಲಾಶಯವನ್ನು ದಾಟಿ ಮತ್ತೆ ವೃಷಭಾವತಿ ನದಿ ಮೂಲಕ ಹರಿದು ಹೋಗಲಿದೆ. ಇದರಿಂದ ಕೊಳಚೆ ನೀರು ಒಳಗೆ ಬರುವುದು ತಪ್ಪಲಿದೆ ಎನ್ನುತ್ತಾರೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು.

ಬೆಂಗಳೂರಿನಲ್ಲಿ ಮಳೆ ಪ್ರವಾಹದಂತಹ ಸಂದರ್ಭಗಳಲ್ಲಿ ಮಾತ್ರ ಶ್ಯಾನಮಂಗಲ ಬಳಿಯ ಕಿರು ಅಣೆಕಟ್ಟೆಯಿಂದ ಬೈರಮಂಗಲ ಜಲಾಶಯಕ್ಕೆ ನೀರು ಹರಿಯಲಿದೆ. ಇದರಿಂದಾಗಿ ಆದಷ್ಟು ಶುದ್ಧ ನೀರು ಕೆರೆ ಅಂಗಳವನ್ನು ತಲುಪಲಿದೆ. ಮುಂಬರುವ ದಿನಗಳಲ್ಲಿ ಸುತ್ತಲಿನ ಗ್ರಾಮಗಳ ಜನರಿಗೆ ಶುದ್ಧ ಜಲ ದೊರೆಯಲಿದೆ.

ಜಲಾಶಯ ಶುದ್ಧೀಕರಣ: ಬೈರಮಂಗಲ ಕೆರೆಯಲ್ಲಿ ಈಗ ಸಂಗ್ರಹ ಆಗಿರುವ ಕೊಳಚೆ ನೀರನ್ನು ಹೊರಹಾಕಿ, ಅಲ್ಲಿನ ಹೂಳು ತೆಗೆದು, ಜೊಂಡುಗಳನ್ನು ತೆರವುಗೊಳಿಸುವ ಕಾರ್ಯವನ್ನೂ ಈ ಯೋಜನೆಯು ಒಳಗೊಂಡಿದೆ. ಕೆರೆಯಲ್ಲಿನ ನೀರು ಹೊರಹಾಕುವ ಕಾರ್ಯ ಈಗಾಗಲೇ ಆರಂಭಗೊಂಡಿದೆ. ಇದರೊಟ್ಟಿಗೆ ಎಡಭಾಗದಲ್ಲಿ ಪರ್ಯಾಯ ಬಂಡ್‌ ಸಹ ನಿರ್ಮಿಸಲು ಉದ್ದೇಶಿಸಲಾಗಿದೆ.

ತಪ್ಪಲಿದೆ ಜನರ ಬವಣೆ
ಬೈರಮಂಗಲ ಜಲಾಶಯ ಶುದ್ಧೀಕರಣಗೊಂಡಲ್ಲಿ ಈ ಭಾಗದ ಜನರ ಬವಣೆ ತಪ್ಪಲಿದೆ. ಒಂದು ಕಾಲದಲ್ಲಿ ಕುಡಿಯುವ ನೀರಿನ ಆಗರವಾಗಿದ್ದ ಈ ಕೆರೆ ಕಾಲಾನಂತರದಲ್ಲಿ ಬೆಂಗಳೂರಿನ ಕೊಳಚೆ ನೀರಿನ ಸಂಗ್ರಹಾಕಾರವಾಗಿ ಮಾರ್ಪಟ್ಟಿದೆ. ಪರಿಣಾಮವಾಗಿ ಇಲ್ಲಿನ ನೆಲ–ಜಲ ಹಾಳಾಗಿದೆ. ಅಂತರ್ಜಲವೂ ಕಲುಷಿತಗೊಂಡಿದೆ. ಜನರಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಲೇ ಇವೆ.

“ಕಳೆದ ಕೆಲವು ದಶಕಗಳಿಂದ ಈ ಭಾಗದ ಜನರು ಅನುಭವಿಸುತ್ತಿರುವ ಕಷ್ಟ ಹೇಳತೀರದು. ಹೀಗಾಗಿ ಸಂಸದ ಡಿ.ಕೆ. ಸುರೇಶ್‌ ಆಸಕ್ತಿಯಿಂದ ಈ ಯೋಜನೆಗೆ ಚಾಲನೆ ದೊರೆತಿದೆ. ಒಮ್ಮೆ ಜಲಾಶಯ ಶುದ್ಧೀಕರಣಗೊಂಡ ಬಳಿಕ ಜನರ ಸಮಸ್ಯೆಗಳು ಒಂದೊಂದೇ ಬಗೆಹರಿಯಲಿವೆ. ಜನರ ಜೀವನ ಮಟ್ಟವೂ ಸುಧಾರಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ರಾಮನಗರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಾಣಕಲ್‌ ನಟರಾಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.