ADVERTISEMENT

ರಸ್ತೆ ಮಧ್ಯೆ ಹೊತ್ತಿ ಉರಿದ ಕಾರು; ತಪ್ಪಿದ ಅನಾಹುತ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 4:16 IST
Last Updated 18 ನವೆಂಬರ್ 2025, 4:16 IST
ಮಾಗಡಿ-ಗುಡೆಮಾರನಹಳ್ಳಿ ಮುಖ್ಯರಸ್ತೆಯಲ್ಲಿ ಹೊತ್ತಿ ಉರಿದ ಕಾರು
ಮಾಗಡಿ-ಗುಡೆಮಾರನಹಳ್ಳಿ ಮುಖ್ಯರಸ್ತೆಯಲ್ಲಿ ಹೊತ್ತಿ ಉರಿದ ಕಾರು   

ಮಾಗಡಿ: ಅಣ್ಣಯ್ಯನ ಪಾಳ್ಯದ ಬಳಿ ಸೋಮವಾರ ಸಂಜೆ ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ರಸ್ತೆ ಮಧ್ಯಯೇ ಕಾರು ಸಂಪೂರ್ಣ ಸುಟ್ಟು ಹೋಗಿದೆ. ಕಾರಿನಲ್ಲಿದ್ದ ಯಾರಿಗೂ ಯಾವುದೇ ರೀತಿಯ ಅಪಾಯವಾಗಿಲ್ಲ.

ಎಲ್ಲರೂ ಸುರಕ್ಷಿತವಾಗಿ ಪಾರಾಗಿದ್ದಾರೆ. ಆದರೆ, ಈ ಘಟನೆಯಿಂದ ಸ್ಥಳದಲ್ಲಿ ಕೆಲವು ತಾಸು ಆತಂಕದ ವಾತಾವರಣ ನಿರ್ಮಾಣವಾಗಿತ್ತು.  

ಮಾಗಡಿ-ಗುಡೇಮಾರನಹಳ್ಳಿ ಮುಖ್ಯರಸ್ತೆಯ ಟೋಲ್ ಸಮೀಪ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಕಾರಿನಲ್ಲಿದ್ದವರು ಕೆಳಗೆ ಇಳಿದಿದ್ದಾರೆ.

ADVERTISEMENT

ನೋಡ, ನೋಡುತ್ತಿದ್ದಂತೆಯೇ ಬೆಂಕಿಯ ಕೆನ್ನಾಲಿಗೆ ಕಾರನ್ನು ಆವರಿಸಿದೆ. ಕ್ಷಣಾರ್ಧದಲ್ಲಿ ರಸ್ತೆ ಮಧ್ಯದಲ್ಲಿಯೇ ಕಾರು ಧಗಧಗನೇ ಉರಿದು ಸುಟ್ಟು ಹೋಗಿದೆ. ಅಸ್ಥಿ ಪಂಜರ ಮಾತ್ರ ಉಳಿದುಕೊಂಡಿದೆ. 

ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕಾರಿನಲ್ಲಿದ್ದ ಹವಾನಿಯಂತ್ರಿತ ವ್ಯವಸ್ಥೆಯಲ್ಲಿ ಸಮಸ್ಯೆ ಉಂಟಾಗಿ ಬೆಂಕಿ ಹತ್ತಿಕೊಂಡಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ. 

ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಆಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರೂ ಕಾರು ಬಹುತೇಕ ಸುಟ್ಟು ಹೋಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.