ADVERTISEMENT

ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಮೇ 2024, 5:01 IST
Last Updated 3 ಮೇ 2024, 5:01 IST
ಕುದೂರು ಪಟ್ಟಣದ ಸಿಸಿ ಕ್ಯಾಮೆರಾಗಳ ಅವಶ್ಯಕತೆ ಹೆಚ್ಚಾಗಿರುವ ಸಂತೆ ಸರ್ಕಲ್.
ಕುದೂರು ಪಟ್ಟಣದ ಸಿಸಿ ಕ್ಯಾಮೆರಾಗಳ ಅವಶ್ಯಕತೆ ಹೆಚ್ಚಾಗಿರುವ ಸಂತೆ ಸರ್ಕಲ್.   

ಕುದೂರು: ಮಾಗಡಿ ತಾಲ್ಲೂಕಿನ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿರುವ ಕುದೂರು ಪಟ್ಟಣದಲ್ಲಿ ಅಪರಾಧ ಪ್ರಕರಣ ಹಾಗೂ ಕಳ್ಳತನಕ್ಕೆ ಕಡಿವಾಣ ಹಾಕಲು ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸಬೇಕು ಎಂದು ಹಲವು ಸಭೆಗಳಲ್ಲಿ ಪ್ರಸ್ತಾಪ ಮಾಡಿದ್ದರೂ ಗ್ರಾಮ ಪಂಚಾಯಿತಿಯವರಾಗಲಿ, ಪೊಲೀಸ್ ಇಲಾಖೆಯವರಾಗಲಿ ಗಮನಹರಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪಟ್ಟಣದ ಪ್ರಮುಖ ವೃತ್ತಗಳಾದ ಬಸ್ ನಿಲ್ದಾಣ, ಸಂತೆ ಸರ್ಕಲ್, ಶಿವಗಂಗೆ ಸರ್ಕಲ್, ನಾಡಪ್ರಭು ಕೆಂಪೇಗೌಡರ ಸರ್ಕಲ್, ಚೌಡೇಶ್ವರಿ ಸರ್ಕಲ್, ತುಮಕೂರು ಬೈಪಾಸ್ ರಸ್ತೆಗಳಲ್ಲಿ ಸಿ.ಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇತ್ತೀಚೆಗೆ ಪಟ್ಟಣದಲ್ಲಿ ವಾಹನ ಹಾಗೂ ಜನದಟ್ಟಣೆ ಹೆಚ್ಚಾಗುತ್ತಿದೆ. ನೆಲಮಂಗಲ, ಕುಣಿಗಲ್, ಮಾಗಡಿ, ತುಮಕೂರು, ಬೆಂಗಳೂರು, ದಾಬಸ್ ಪೇಟೆ ಇನ್ನೂ ಮುಂತಾದ ಕಡೆಗಳಿಂದ ಪ್ರತಿನಿತ್ಯ ಹತ್ತಾರು ಬಸ್‌ಗಳು, ವಾಹನಗಳು ಸಂಚರಿಸುತ್ತವೆ. ನೂರಾರು ಜನರು ಬಂದು ಇಲ್ಲಿ ವ್ಯವಹರಿಸುತ್ತಾರೆ.

ADVERTISEMENT

ಪಟ್ಟಣವು ದಿನೇ ದಿನೇ ಬೆಳೆಯುತ್ತಿದ್ದು ಬೇರೆ ಬೇರೆ ಜಿಲ್ಲೆಗಳಿಂದಲೂ ಬಹಳಷ್ಟು ಮಂದಿ ಇಲ್ಲಿಗೆ ಬಂದು ಹೋಗುತ್ತಾರೆ. ಆದ್ದರಿಂದ ಅವರ ಚಲನವಲನಗಳ ಕುರಿತು ಗಮನಹರಿಸುವುದರ ಜೊತೆಗೆ ಕಳ್ಳತನ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುವವರ ಮೇಲೆ ನಿಗಾವಹಿಸಲು ಕ್ಯಾಮೆರಾ ಅನುಕೂಲವಾಗಲಿದೆ ಎಂಬುದು ಸ್ಥಳೀಯ ನಿವಾಸಿ ಮಂಜುನಾಥ್ ಅವರ ಅಭಿಪ್ರಾಯ.

ಈಚೆಗೆ ಕುದೂರು ಮುಖ್ಯ ರಸ್ತೆಯಲ್ಲಿ ಸರಣಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮುಖ್ಯರಸ್ತೆಯ ಆಯಕಟ್ಟಿನ ಜಾಗಗಳಲ್ಲಿ ಎಚ್‌.ಡಿ ಗುಣಮಟ್ಟದ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಅವಶ್ಯಕತೆ ಇದೆ ಎನ್ನುತ್ತಾರೆ ಅಂಗಡಿಯೊಂದರ ಮಾಲೀಕ ಗಂಗರಾಜು.

ವಿವಿಧ ಕೆಲಸಗಳ ನಿಮಿತ್ತ ಹೊರಗೆ ಹೋಗಿರುವವರು, ಕಾರ್ಖಾನೆಗಳಿಗೆ, ಕೆಲಸಕ್ಕೆ ಹೋಗುವವರು ತಡವಾಗಿ ಇಲ್ಲಿಗೆ ಬರುತ್ತಾರೆ. ಈ ವೇಳೆ ಜನರ ಓಡಾಟ ವಿರಳವಾಗಿರುವುದರಿಂದ, ಸಾರ್ವಜನಿಕರು ಭಯದ ವಾತಾವರಣದಲ್ಲಿ ಮನೆಗಳಿಗೆ ಹೋಗಬೇಕಾದಂತಹ ಸ್ಥಿತಿಯಿದೆ.

ಮುಖ್ಯರಸ್ತೆ ಬದಿಗಳಲ್ಲಿ ತ್ಯಾಜ್ಯ ಸುರಿಯುವವರ ಮೇಲೆ ಕಠಿಣ ಕ್ರಮಕೈಗೊಳ್ಳಲು ಸಿ.ಸಿ ಟಿವಿ ಕ್ಯಾಮೆರಾ ಅಳವಡಿಕೆ ಸಹಕಾರಿಯಾಗಲಿದೆ ಎನ್ನುತ್ತಾರೆ ಇಲ್ಲಿನನಾಗರಿಕರು.

ಈ ಸಂಬಂಧ ಪಿಡಿಒ ಪುರುಷೋತ್ತಮ್ ಅವರ ಹೇಳಿಕೆ ಪಡೆಯಲು ಮೂರು ಬಾರಿ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ.

ಕುದೂರು ಪಟ್ಟಣದ ಸಿಸಿ ಕ್ಯಾಮೆರಾಗಳ ಅವಶ್ಯಕತೆ ಹೆಚ್ಚಾಗಿರುವ ಸಂತೆ ಸರ್ಕಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.