
ಚನ್ನಪಟ್ಟಣ: ಸರ್ಕಾರವು ಮೈಸೂರು ಸಿಲ್ಕ್ ಸಂಸ್ಥೆ ಮುಚ್ಚಲು ಮುಂದಾದರೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ ಎಚ್ಚರಿಕೆ ನೀಡಿದರು.
ಚನ್ನಪಟ್ಟಣದ ಸ್ಪನ್ ಸಿಲ್ಕ್ ಮಿಲ್‌ಗೆ ಶುಕ್ರವಾರ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಶತಮಾನದ ಭವ್ಯ ಇತಿಹಾಸ ಹೊಂದಿರುವ ಮೈಸೂರು ಸಿಲ್ಕ್ ಸಂಸ್ಥೆ ಮೈಸೂರು ಮಹಾರಾಜರು ಸ್ಥಾಪಿಸಿದ ಸಂಸ್ಥೆ. ಕರ್ನಾಟಕದ ಸ್ವಾಭಿಮಾನದ ಶಕ್ತಿ. ಮೈಸೂರು ಸಿಲ್ಕ್ ಕನ್ನಡ ನಾಡಿನ ಪರಂಪರೆಯ ಸಂಕೇತ. ಸಾವಿರಾರು ಕುಟುಂಬಗಳ ಬದುಕು. ಆದರೆ, ಕಾಂಗ್ರೆಸ್ ಸರ್ಕಾರಕ್ಕೆ ಪರಂಪರೆಯ ಬೆಲೆಯೂ ಗೊತ್ತಿಲ್ಲ. ರೈತರ ನೋವೂ ಅರ್ಥವಾಗುತ್ತಿಲ್ಲ. ಕಾಂಗ್ರೆಸ್ ಸರ್ಕಾರದ ದುರಾಡಳಿತದ ಪರಿಣಾಮ ವಿಶ್ವವಿಖ್ಯಾತ ಸಂಸ್ಥೆಗೆ ಮುಚ್ಚುವ ಪರಿಸ್ಥಿತಿ ಎದುರಾಗಿದೆ ಎಂದರು.
ಮೈಸೂರಿನ ಟಿ. ನರಸೀಪುರದಲ್ಲಿ ರೇಷ್ಮೆ ನೂಲು ತಯಾರಿಸುವ ಕಾರ್ಖಾನೆಯನ್ನು ಹಂತ, ಹಂತವಾಗಿ ಮುಚ್ಚುವ ಕುತಂತ್ರವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಈ ಸಂಸ್ಥೆ ಉಳಿಸಲು, ನೇಕಾರರ ಹಿತ ಕಾಯಲು ಬಿಜೆಪಿ ಹೋರಾಟ ನಡೆಸಲಿದೆ ಎಂದರು.
ಈ ಸರ್ಕಾರಿ ಸ್ವಾಮ್ಯದ ಸಂಸ್ಥೆ ಅಂದಾಜು ₹96 ಕೋಟಿ ಲಾಭದಲ್ಲಿದೆ. ಕಾರ್ಮಿಕರಿಗೆ ತರಬೇತಿ ಅವಧಿಯಲ್ಲಿ ತಿಂಗಳಿಗೆ ಕೇವಲ ₹3 ಸಾವಿರ ವೇತನ, ನಂತರದಲ್ಲಿ ₹18 ಸಾವಿರ ನೀಡಲಾಗುತ್ತಿದೆ. ಇವರಿಂದ ದುಡಿಸಿಕೊಂಡು ಲಾಭವನ್ನು ಜೇಬಿಗೆ ಹಾಕಿಕೊಂಡು ಫ್ಯಾಕ್ಟರಿ ಮುಚ್ಚವುದಕ್ಕೆ ಹೊರಟಿರುವುದು ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದರು.
ಮೈಸೂರು ರೇಷ್ಮೆ ನಂಬಿ ಬದುಕುತ್ತಿರುವ ಸಾವಿರಾರು ನೇಕಾರರ ಕುಟುಂಬಗಳು ಇಂದು ಆತಂಕದಲ್ಲಿವೆ. ರೇಷ್ಮೆ ಬೆಳೆಗಾರರಿಗೆ ಸಿಗಬೇಕಾದ ಪ್ರೋತ್ಸಾಹದ ಧನ ಎಲ್ಲಿ? ನೇಕಾರರ ಶ್ರಮಕ್ಕೆ ಬೆಲೆ ಎಲ್ಲಿ? ಕೆಎಸ್‌ಐಸಿ ಸಂಸ್ಥೆಯನ್ನು ಹಳ್ಳ ಹಿಡಿಸುತ್ತಿರುವುದು ಯಾರ ಲಾಭಕ್ಕಾಗಿ? ಗ್ಯಾರಂಟಿ ಹೆಸರಲ್ಲಿ ಬೊಕ್ಕಸ ಖಾಲಿ ಮಾಡಿ, ಈಗ ರಾಜ್ಯದ ಹೆಮ್ಮೆಯ ಸಾರ್ವಜನಿಕ ಉದ್ಯಮಗಳನ್ನು ಮಾರಾಟಕ್ಕಿಟ್ಟಿದ್ದೀರಾ ಎಂದು ಪ್ರಶ್ನೆ ಮಾಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಆನಂದಸ್ವಾಮಿ, ಹುಲುವಾಡಿ ದೇವರಾಜು, ಕೆಲಗೆರೆ ಜಯರಾಮು, ಮಾಳಗಾಳು ರಾಜಪ್ಪ, ಸಿದ್ದನಹಳ್ಳಿ ಸಿದ್ದೇಗೌಡ, ರಾಜುಗೌಡ, ಮಂಗಳವಾರಪೇಟೆ ಸಂತೋಷ್ ಹಾಗೂ ಕೆಎಸ್‌ಐಸಿ ಅಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.