ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪ್ರಾಧ್ಯಾಪಕ, ಸಾಹಿತಿ ಹಾಗೂ ನಟ ಡಾ. ಹನಿಯೂರು ಚಂದ್ರೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಕಾಂಗ್ರೆಸ್, ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ನಡುವಣ ಸಂಭವನೀಯ ಅಭ್ಯರ್ಥಿಗಳ ಕುರಿತ ಚರ್ಚೆ ಜೋರಾಗಿರುವ ಸಂದರ್ಭದಲ್ಲಿ, ಸಾಹಿತಿಯೊಬ್ಬರು ಚುನಾವಣಾ ಅಖಾಡಕ್ಕಿಳಿಯಲು ಮುಂದಾಗಿದ್ದಾರೆ.
ಸ್ಪರ್ಧೆ ಕುರಿತು ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಂದ್ರೇಗೌಡ, ‘ರಾಜಕೀಯ ನಿಂತ ನೀರಾಗದೆ ಹರಿಯುವ ಜಲಧಾರೆಯಾಗಬೇಕು. ಸ್ವಾರ್ಥಪರ, ಪಟ್ಟಭದ್ರ ರಾಜಕಾರಣಿಗಳು ರಾಜಕೀಯವನ್ನು ನಿಂತ ನೀರು ಮಾಡಿ ಗಬ್ಬೆಬ್ಬಿಸಿದ್ದಾರೆ. ಇದರ ವಿರುದ್ಧ ಭಿನ್ನ ದನಿಗಳು ಎದ್ದಾಗಲೇ ಪ್ರಜಾಪ್ರಭುತ್ವದ ಬೇರುಗಳು ಗಟ್ಟಿಯಾಗುತ್ತವೆ. ಅದೇ ಕಾರಣಕ್ಕೆ ಸ್ಪರ್ಧೆಗೆ ತೀರ್ಮಾನಿಸಿದ್ದೇನೆ’ ಎಂದರು.
‘ಚುನಾವಣೆಗೆ ಸ್ಪರ್ಧಿಸುವ ನನ್ನ ನಿರ್ಧಾರ ಗಮನಿಸಿ ಕೆಲ ಪಕ್ಷಗಳು ಟಿಕೆಟ್ ನೀಡುವ ಇಚ್ಛೆ ವ್ಯಕ್ತಪಡಿಸಿವೆ. ಆದರೆ, ಸ್ವತಂತ್ರವಾಗಿಯೇ ಸ್ಪರ್ಧಿಸಲು ಇಚ್ಛಿಸಿದ್ದೇನೆ. ಎಚ್.ಡಿ. ಕುಮಾರಸ್ವಾಮಿ ಅವರ ಅಧಿಕಾರ ದಾಹದಿಂದಾಗಿ ಒಂದೇ ವರ್ಷಕ್ಕೆ ಕ್ಷೇತ್ರದಲ್ಲಿ ಉಪ ಚುನಾವಣೆ ಎದುರಾಗಿದೆ. ಇಂತಹ ಸ್ವಾರ್ಥದ ನಡೆಗೆ ಮತದಾರರು ತಕ್ಕ ಉತ್ತರ ನೀಡಬೇಕಿದೆ’ ಎಂದು ಹೇಳಿದರು.
‘ಪಕ್ಷದ ಜಾತ್ಯತೀತ ಸಿದ್ಧಾಂತವನ್ನು ಗಾಳಿಗೆ ತೂರಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಎಚ್‌ಡಿಕೆ ಅಭಿವೃದ್ಧಿ ರಾಜಕೀಯ ಮಾಡಿದವರಲ್ಲ. ಬದಲಿಗೆ, ಕುಟುಂಬ ರಾಜಕಾರಣವನ್ನು ಜಿಲ್ಲೆಯಲ್ಲಿ ಪೋಷಿಸಿಕೊಂಡು ಬಂದಿದ್ದಾರೆ. ಅವರ ಕುಟುಂಬದಿಂದ ಅಪ್ಪ, ಸೊಸೆ, ಮಗ, ಬಾಮೈದ ಬೆಳೆದರೇ ವಿನಾ ಮತ್ಯಾರನ್ನೂ ಬೆಳೆಸಿಲ್ಲ’ ಎಂದು ವಾಗ್ದಾಳಿ ನಡೆಸಿದರು.
‘ಇಷ್ಟು ವರ್ಷ ಚನ್ನಪಟ್ಟಣದ ಕಡೆ ತಲೆ ಹಾಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಈಗ ಕ್ಷೇತ್ರದ ಮೇಲೆ ತೋರಿಸುತ್ತಿರುವ ಪ್ರೀತಿಯ ಹಿಂದಿನ ಮರ್ಮವನ್ನು ಅರಿಯದಷ್ಟು ಮತದಾರರು ದಡ್ಡರಲ್ಲ. ಅವರ ಅಧಿಕಾರ ದಾಹಕ್ಕೆ ಜನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಬಿಜೆಪಿಯ ಯೋಗೇಶ್ವರ್ ಅವರು ಅಧಿಕಾರವಿದ್ದಾಗ ಒಂದು ರೀತಿ, ಇಲ್ಲದಿದ್ದಾಗ ಒಂದು ರೀತಿಯ ನಡವಳಿಕೆಗಳಿಂದ ಜನರಿಂದ ದೂರಾಗಿದ್ದಾರೆ’ ಎಂದರು.
‘ಎಚ್‌ಡಿಕೆ ಮತ್ತು ಡಿಕೆಶಿ ಇಬ್ಬರೂ ಹೊರಗಿನವರಾಗಿದ್ದಾರೆ. ಸಿಪಿವೈಗೆ ಟಿಕೆಟ್ ಸಿಗುವುದು ಅನುಮಾನವಿದೆ. ಹೀಗಾಗಿ, ಸ್ಥಳೀಯರಾದ ನನ್ನಂತವರು ಚುನಾವಣೆಗೆ ಸ್ಪರ್ಧಿಸುವ ಮೂಲಕ, ನಮ್ಮ ಸ್ಥಳೀಯ ಅಸ್ಮಿತೆಯನ್ನು ತೋರಿಸಬೇಕಿದೆ. ಸೋಲು–ಗೆಲುವು ಇದ್ದಿದ್ದೆ. ಆದರೆ, ನಮ್ಮನ್ನು ಎದುರಿಸುವವರು ಹಾಗೂ ಪ್ರಶ್ನೆ ಮಾಡುವವರು ಇದ್ದಾರೆಂಬ ಸಂದೇಶವನ್ನು ಮುಟ್ಟಿಸಬೇಕಿದೆ. ಅದೇ ಕಾರಣಕ್ಕೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.