ADVERTISEMENT

ಚನ್ನಪಟ್ಟಣ: ಪಾಳು ಬಿದ್ದ ಶತಮಾನದ ಕುಶಲಕರ್ಮಿ ತರಬೇತಿ ಸಂಸ್ಥೆ

ಪುನಶ್ಚೇತನಕ್ಕಾಗಿ ಕಾದಿದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಆರಂಭಿಸಿದ್ದ ಸಂಸ್ಥೆ; ಸಂಸ್ಥೆ ಮುಚ್ಚಿ ಜಾಗ ಹಸ್ತಾಂತರಕ್ಕೆ ನಡೆದಿದೆ ತಯಾರಿ

ಎಚ್.ಎಂ.ರಮೇಶ್
Published 1 ಡಿಸೆಂಬರ್ 2025, 4:55 IST
Last Updated 1 ಡಿಸೆಂಬರ್ 2025, 4:55 IST
ಚನ್ನಪಟ್ಟಣದಲ್ಲಿ ಶಿಥಿಲಾವಸ್ಥೆ ತಲುಪಿರುವ ಕುಶಲಕರ್ಮಿ ತರಬೇತಿ ಸಂಸ್ಥೆಯ ಶತಮಾನದ ಕಟ್ಟಡ
ಚನ್ನಪಟ್ಟಣದಲ್ಲಿ ಶಿಥಿಲಾವಸ್ಥೆ ತಲುಪಿರುವ ಕುಶಲಕರ್ಮಿ ತರಬೇತಿ ಸಂಸ್ಥೆಯ ಶತಮಾನದ ಕಟ್ಟಡ   

ಚನ್ನಪಟ್ಟಣ: ಶತಮಾನದ ಹಿಂದೆ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗದ ತರಬೇತಿ ನೀಡುವ ಮಹತ್ವಕಾಂಕ್ಷೆಯಿಂದ ನಗರದಲ್ಲಿ ಆರಂಭಿಸಿದ್ದ ಕುಶಲಕರ್ಮಿ ತರಬೇತಿ ಸಂಸ್ಥೆ ಕಳೆದ ಹತ್ತು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ನಿರ್ಲಕ್ಷ್ಯದಿಂದ ಸಂಸ್ಥೆ ಅವನತಿಯ ಹಾದಿ ಹಿಡಿದಿದೆ.

ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1912ರಲ್ಲಿ ಸಂಸ್ಥೆ ಆರಂಭಿಸಿದ್ದರು. ಅಂದಿನಿಂದ ಇಲ್ಸಿ ಆಟಿಕೆ ತಯಾರಿಕೆ, ಆಟೋಮೊಬೈಲ್, ಕಾರ್ಪೆಂಟಿಂಗ್, ಕಮ್ಮಾರಿಕೆ, ಬಾಯ್ಲರ್ ಯೂನಿಟ್, ಜನರಲ್ ಎಂಜಿನಿಯರಿಂಗ್ ಸೇರಿದಂತೆ ಹಲವು ವಿಭಾಗಗಳಲ್ಲಿ ನಿರುದ್ಯೋಗಿ ಯುವಕ– ಯುವತಿಯರಿಗೆ ತರಬೇತಿ ನೀಡಲಾಗುತ್ತಿತ್ತು.

ಸಾವಿರಾರು ಮಂದಿಗೆ ಬದುಕು: ಇಲ್ಲಿ ತರಬೇತಿ ಪಡೆದು ಸಾವಿರಾರು ನಿರುದ್ಯೋಗಿಗಳು ನಂತರ ಬದುಕು ಕಟ್ಟಿಕೊಂಡಿದ್ದಾರೆ. ಆರಂಭದಿಂದಲೂ ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿತ್ತು. ಕಾಲಾನಂತರ ಅನುದಾನದ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯ, ಸೌಲಭ್ಯಗಳ ಕೊರತೆ, ನಿರುದ್ಯೋಗಿಗಳ ನಿರುತ್ಸಾಹದಿಂದಿಂದಾಗಿ ಸಂಸ್ಥೆ ಅವನತಿಯ ಹಾದಿ ಹಿಡಿದಿದೆ.

ADVERTISEMENT

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸುಪರ್ದಿಯಲ್ಲಿದ್ದ ಸಂಸ್ಥೆಯನ್ನು 1987ರಲ್ಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಸೇರಿಸಲಾಯಿತು. ನಂತರ ನಿರೀಕ್ಷಿತ ಮಟ್ಟದಲ್ಲಿ ಅನುದಾನ ಸಿಗದೆ, ಇದೀಗ ಸಂಸ್ಥೆ ಮುಚ್ಚುವ ಹಂತಕ್ಕೆ ತಲುಪಿದೆ. ಸುಮಾರು ಹತ್ತು ವರ್ಷಗಳಿಂದ ತರಬೇತಿ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ.

ಶಿಷ್ಯವೇತನಕ್ಕೆ ಬ್ರೇಕ್: ತರಬೇತಿ ಸಮಯದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಸಂಸ್ಥೆಯಿಂದ ನೀಡುತ್ತಿದ್ದ ಶಿಷ್ಯವೇತನಕ್ಕೆ ಜಿಲ್ಲಾ ಪಂಚಾಯಿತಿಯಿಂದ ಅಗತ್ಯ ಅನುದಾನ ನೀಡದಿರುವುದು, ಇಂದಿಗೂ ಹಳೆಕಾಲದ ಶಿಷ್ಯವೇತನ ನಿಗದಿ, ಬದಲಾದ ಆಧುನಿಕತೆಗೆ ತಕ್ಕಂತೆ ಹೊಸ ತರಬೇತಿಗಳನ್ನು ನೀಡದಿರುವುದು ಸಹ ಪ್ರಶಿಕ್ಷಣಾರ್ಥಿಗಳು ಸಂಸ್ಥೆಯತ್ತ ಸುಳಿಯದಿರಲು ಪ್ರಮುಖ ಕಾರಣವಾಗಿದೆ.

ತರಬೇತಿ ನಂತರ ಸ್ವಯಂ ಉದ್ಯೋಗ ಮಾಡಲು ಸರ್ಕಾರ ಅಥವಾ ಬ್ಯಾಂಕುಗಳ ಸಹಾಯಹಸ್ತ ಸಿಗದಿರುವುದು ಸಹ ಸಂಸ್ಥೆಯ ಗ್ರಹಣಕ್ಕೆ ಕಾರಣವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

ಕೇಂದ್ರದ ಯೋಜನೆಯೂ ಸ್ಥಗಿತ: ಕೇಂದ್ರ ಸರ್ಕಾರ ಪ್ರಾಯೋಜಿತ ಪ್ರಧಾನಮಂತ್ರಿ ರೋಜ್‌ಗಾರ್ ಯೋಜನೆಯಡಿ ವಾರ್ಷಿಕ 100ಕ್ಕೂ ಹೆಚ್ಚು ಮಂದಿಗೆ ತರಬೇತಿ ನೀಡಿ ಸಹಾಯಧನ ನೀಡಲು ಹಿಂದೆ ಸಂಸ್ಥೆಯಲ್ಲಿ ಅವಕಾಶವಿತ್ತು ಎಂದು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಅಧಿಕಾರಿಯೊಬ್ಬರು ತಿಳಿಸಿದರು.

ಯೋಜನೆಯನ್ನು ಪಿಎಂಎಜಿ ಎಂದು ಬದಲಾವಣೆ ಮಾಡಿ ಒಂದು ವಿಭಾಗಕ್ಕೆ ಕೇವಲ ನಾಲ್ಕೈದು ಮಂದಿಗೆ ಮಾತ್ರ ಸಹಾಯಧನ ನಿಗಧಿಗೊಳಿಸಿದ್ದರಿಂದ ಪ್ರಶಿಕ್ಷಣಾರ್ಥಿಗಳ ದಾಖಲಾತಿ ಕಡಿಮೆಯಾಗಿ ಸಂಸ್ಥೆಗೆ ಹಿನ್ನಡೆಯಾಗಿದೆ ಎಂದು ಹೇಳಿದರು.

ಜೊತೆಗೆ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ತನ್ನದೇ ಕೂಸಾದ ತರಬೇತಿ ಸಂಸ್ಥೆಯನ್ನು ನಿರ್ಲಕ್ಷ್ಯಿಸಿತು. ತರಬೇತಿ ಸಂಸ್ಥೆಗೆ ಪ್ರತ್ಯೇಕ ಅನುದಾನ ಮೀಸಲಿಡದೆ, ಜಿ.ಪಂ. ವ್ಯಾಪ್ತಿಗೆ ಸೇರಿಸಿ ಕೈ ತೊಳೆದುಕೊಂಡಿದ್ದು ಸಂಸ್ಥೆಯ ಅವನತಿಗೆ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.

ಮುಚ್ಚಲು ತಯಾರಿ: ಬದಲಾದ ಆಧುನಿಕ ಕಾಲಕ್ಕೆ ತಕ್ಕಂತೆ ಕೌಶಲಗಳ ಬಗ್ಗೆ ತರಬೇತಿ ನೀಡುವುದು, ಸ್ವ ಉದ್ಯೋಗ ಕಲ್ಪಿಸಿಕೊಳ್ಳಲು ಸಹಾಯಧನ ನೀಡುವುದು ಹಾಗೂ ಶಿಷ್ಯವೇತನವನ್ನು ಪರಿಷ್ಕರಿಸುವ ಗೋಜಿಗೆ ಹೋಗದ ಇಲಾಖೆ, ಬಹುರಾಷ್ಟ್ರೀಯ ಕಂಪನಿಗಳು, ಕೈಗಾರಿಕೆಗಳಿಗೆ ಮಣೆ ಹಾಕುತ್ತಾ, ತರಬೇತಿ ಸಂಸ್ಥೆಯಿಂದ ತನಗೇನು ಪ್ರಯೋಜನ ಎಂಬಂತೆ ಸಂಸ್ಥೆಯನ್ನು ಮುಚ್ಚುವ ನಿರ್ಧಾರ ಮಾಡಲಾಗಿದೆ ಎಂದು ಇಲ್ಲಿ ತರಬೇತಿ ಪಡೆದಿರುವ ಹಿರಿಯ ಪ್ರಶಿಕ್ಷಣಾರ್ಥಿಗಳು ಆರೋಪಿಸಿದರು.

ಸಂಸ್ಥೆಯನ್ನು ಮುಚ್ಚಿ, ಆ ಜಾಗವನ್ನು ಬೇರೆ ಉದ್ದೇಶಕ್ಕೆ ನೀಡಲು ಇಲಾಖೆ ಉತ್ಸುಕವಾಗಿದೆ. ಇಲ್ಲಿಯ ತರಬೇತಿ ಪರಿಕರಗಳು, ಯಂತ್ರಗಳನ್ನು ಹರಾಜು ಹಾಕಲು ವೇದಿಕೆ ಸಿದ್ದವಾಗುತ್ತಿದೆ. ಈಗಾಗಲೇ ಪಾಳು ಬಂಗಲೆಯಂತಾಗಿರುವ ಸಂಸ್ಥೆಯು ಮುಂದಿನ ದಿನಗಳಲ್ಲಿ ಪಳೆಯುಳಿಕೆಯಾಗುವುದು ನಿಶ್ಚಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮುಚ್ಚುವ ಹಂತ ತಲುಪಿರುವ ಶತಮಾನದ ಸಂಸ್ಥೆಗೆ ಕಾಯಕಲ್ಪ ನೀಡಿ ನಿರುದ್ಯೋಗಿಗಳಿಗೆ ವಿವಿಧ ತರಬೇತಿಯನ್ನು ನೀಡಿ, ಸಂಸ್ಥೆಗೆ ಮರುಜೀವ ನೀಡಲು ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಮುಂದಾಗಬೇಕು ಎಂಬುದು ಇಲ್ಲಿ ತರಬೇತಿ ಪಡೆದು ಬದುಕು ಕೊಟ್ಟಿಕೊಂಡಿರುವವರು ಹಾಗೂ ಸಾರ್ವಜನಿಕರ ಒತ್ತಾಯ.

ಕುಶಲಕರ್ಮಿ ತರಬೇತಿ ಸಂಸ್ಥೆಯಲ್ಲಿ ತುಕ್ಕು ಹಿಡಿಯುತ್ತಿರುವ ಕಾರ್ಪೆಂಟರಿ ಯಂತ್ರಗಳು
ಕುಶಲಕರ್ಮಿ ತರಬೇತಿ ಸಂಸ್ಥೆಯಲ್ಲಿರುವ ಗೊಂಬೆ ತಯಾರಿಕಾ ಯಂತ್ರಗಳು
ಕೆ.ಕರ್ಣ ಪೇಟೆಚೇರಿ ಬೊಂಬೆನಾಡು ಕಾರ್ಮಿಕರ ಸಂಘದ ಅಧ್ಯಕ್ಷ ಚನ್ನಪಟ್ಟಣ‌
ಎಚ್.ಕೆ. ಗಿರೀಶ್ ಚನ್ನಪಟ್ಟಣ

ನಾಲ್ವಡಿ ಕೃಷ್ಣರಾಜ ಒಡೆಯರ್ 1912ರಲ್ಲಿ ಆರಂಭಿಸಿದ ತರಬೇತಿ ಸಂಸ್ಥೆ ಸಂಸ್ಥೆಯಿಂದ ಬದುಕು ಕಟ್ಟಿಕೊಂಡಿರುವ ಸಾವಿರಾರು ನಿರುದ್ಯೋಗಿಗಳು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸುಪರ್ದಿಯಲ್ಲಿದ್ದ ತರಬೇತಿ ಸಂಸ್ಥೆ ತರಬೇತಿ ಸಂಸ್ಥೆಯು 1987ರಲ್ಲಿ ಜಿಲ್ಲಾ ಪಂಚಾಯಿತಿಗೆ ಸುಪರ್ದಿಗೆ

ಟಾಯ್ಸ್ ಪ್ರೊಡ್ಯೂಸರ್ ಕಂಪನಿಗೆ ಕಟ್ಟಡ

ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್ ಜೈನ್ ಅವರು ಇತ್ತೀಚೆಗೆ ಸಂಸ್ಥೆಗೆ ಭೇಟಿ ನೀಡಿ ಕೇಂದ್ರದಲ್ಲಿರುವ ಯಂತ್ರಗಳು ಹಾಗೂ ಜಾಗದ ಪರಿಶೀಲನೆ ನಡೆಸಿದ್ದಾರೆ. ಶತಮಾನದ ಸಂಸ್ಥೆಯು ಅವನತಿ ಹಿಡಿಯುವ ಬದಲು ಅದಕ್ಕೆ ಮರುಜೀವ ನೀಡಬೇಕು ಎಂಬ ಉದ್ದೇಶದಿಂದ ಸದ್ಯ ತರಬೇತಿ ಸಂಸ್ಥೆಯ ಕಟ್ಟಡವನ್ನು ಚನ್ನಪಟ್ಟಣ ಟಾಯ್ಸ್ ಪ್ರೊಡ್ಯೂಸರ್ ಕಂಪೆನಿಗೆ ಬಾಡಿಗೆ ಆಧಾರದಲ್ಲಿ ನೀಡಿ ಸ್ತ್ರೀಶಕ್ತಿ ಸಂಘಗಳ ಸದಸ್ಯರಿಗೆ ಗೊಂಬೆಗಳ ಉತ್ಪಾದನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಇಲ್ಲಿನ ಮಹಿಳಾ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಡಿಯಲ್ಲಿ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಸ್ವಉದ್ಯೋಗ ಕಲ್ಪಿಸಲು ಗೊಂಬೆ ತಯಾರಿಕೆಗೆ ಅವಕಾಶ ನೀಡಲಾಗಿದೆ. ತಾಲ್ಲೂಕಿನ ಹೊಂಗನೂರು ವಂದಾರಗುಪ್ಪೆ ತಗಚಗೆರೆ ನೀಲಸಂದ್ರ ಗ್ರಾಮಗಳ ಸ್ವಸಹಾಯ ಸಂಘಗಳ ಮಹಿಳೆಯರು ಈಗ ಗೊಂಬೆ ತಯಾರಿಕೆ ಆರಂಭಿಸಿದ್ದಾರೆ. ಆದರೆ ಈ ಕಂಪನಿ ಕೇವಲ ಬಾಡಿಗೆ ಆಧಾರದಲ್ಲಿ ನಡೆಯುತ್ತಿರುವ ಕಾರಣ ಮುಂದಿನ ದಿನಗಳಲ್ಲಿಯೂ ಹೀಗೆಯೇ ಕಾರ್ಯನಿರ್ವಹಿಸುತ್ತದೆ ಎಂಬ ಗ್ಯಾರಂಟಿ ಇಲ್ಲ ಎಂದು ಹೇಳಿದರು.

ತಾಯಿ– ಮಕ್ಕಳ ಆಸ್ಪತ್ರೆ ನಿರ್ಮಾಣ?

ಕುಶಲಕರ್ಮಿ ತರಬೇತಿ ಸಂಸ್ಥೆಯು ಕಾರ್ಯನಿರ್ವಹಿಸದ ಕಾರಣ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಪಕ್ಕದಲ್ಲೇ ಇರುವ ಹಾಗೂ ಚನ್ನಪಟ್ಟಣದ ಮುಖ್ಯರಸ್ತೆ ಎಂ.ಜಿ. ರಸ್ತೆಗೆ ಹೊಂದಿಕೊಂಡಂತಿರುವ  ಸಂಸ್ಥೆಯ ಕಟ್ಟಡವನ್ನು ಕೆಡವಿ ಇಲ್ಲೊಂದು ಸುಸಜ್ಜಿತ ತಾಯಿ (ಹೆರಿಗೆ) ಹಾಗೂ ಮಕ್ಕಳ ಆಸ್ಪತ್ರೆ ನಿರ್ಮಿಸಲು ಶಾಸಕ ಸಿ.ಪಿ. ಯೋಗೇಶ್ವರ್ ಅವರು ಕಾರ್ಯಯೋಜನೆ ರೂಪಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಜಾಗವು ಈಗಲೂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಹೆಸರಿನಲ್ಲಿದೆ. ಕಟ್ಟಡದ ಉಸ್ತುವಾರಿ ಮಾತ್ರ ಜಿಲ್ಲಾ ಪಂಚಾಯಿತಿ ಸುಪರ್ದಿಯಲ್ಲಿದೆ. ಹಲವು ವರ್ಷಗಳಿಂದ ಉಪಯೋಗಕ್ಕೆ ಬಾರದಂತಿರುವ ಕಟ್ಟಡ ಶತಮಾನದ ಹಿಂದೆಯೆ ನಿರ್ಮಾಣವಾಗಿರುವ ಕಾರಣ ಶಿಥಿಲಾವಸ್ಥೆ ತಲುಪಿದೆ. ಇದಲ್ಲದೆ ಈ ಜಾಗವು ನಗರದ ಹೃದಯ ಭಾಗದಲ್ಲಿದೆ. ಇಂತಹ ಒಳ್ಳೆಯ ಜಾಗವನ್ನು ಸುಸಜ್ಜಿತ ತಾಯಿ ಹಾಗೂ ಮಕ್ಕಳ ಆಸ್ಪತ್ರೆ ನಿರ್ಮಿಸಲು ಬಳಸಿಕೊಳ್ಳುವುದು ಸೂಕ್ತ ಎಂದು ಶಾಸಕ ಯೋಗೇಶ್ವರ್ ಯೋಜಿಸಿದ್ದಾರೆ ಎಂದು ಅವರ ಆಪ್ತ ವಲಯದವರು ಹೇಳುತ್ತಾರೆ.

ಶತಮಾನದ ಸಂಸ್ಥೆಗೆ ಮರುಜೀವ ನೀಡಿ

ನಿರುದ್ಯೋಗಿಗಳ ಪಾಲಿಗೆ ಸಂಜೀವಿನಿಯಂತಿದ್ದ ಕುಶಲಕರ್ಮಿ ತರಬೇತಿ ಸಂಸ್ಥೆಯನ್ನು ಮುಚ್ಚುವುದು ಸೂಕ್ತವಲ್ಲ. ತಾಲ್ಲೂಕಿನಲ್ಲಿ ಸಾವಿರಾರು ನಿರುದ್ಯೋಗಿಗಳಿದ್ದಾರೆ. ಸಂಸ್ಥೆಗೆ ಮರುಜೀವ ನೀಡಿ ನಿರುದ್ಯೋಗಿಗಳಿಗೆ ಅವರ ಇಷ್ಟದ ಅನುಸಾರ ತರಬೇತಿ ನೀಡಿ ಹಣಕಾಸಿನ ಸೌಲಭ್ಯ ಒದಗಿಸಿದರೆ ಅವರಿಗೆ ಸ್ವಉದ್ಯೋಗ ಕಲ್ಪಿಸಿದಂತಾಗುತ್ತದೆ. ಜನಪ್ರತಿನಿಧಿಗಳು ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಈ ಬಗ್ಗೆ ಕ್ರಮ ಕೈಗೊಳ್ಳಬೇಕು.

– ಕೆ.ಕರ್ಣ ಪೇಟೆಚೇರಿ ಬೊಂಬೆನಾಡು ಕಾರ್ಮಿಕರ ಸಂಘದ ಅಧ್ಯಕ್ಷ

ಚನ್ನಪಟ್ಟಣ‌ ಗೊಂಬೆ ತಯಾರಿಕೆ ತರಬೇತಿಗೆ ಬಳಸಿಕೊಳ್ಳಿ ಶತಮಾನದಿಂದ ಇರುವ ಸಂಸ್ಥೆಯನ್ನು ಮುಚ್ಚಿ ಅದರ ಜಾಗವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳುವುದರ ಬದಲು ತರಬೇತಿ ಸಂಸ್ಥೆಗೆ ಕಾಯಕಲ್ಪ ನೀಡುವುದು ಸೂಕ್ತ. ಇದರಿಂದ ತಾಲ್ಲೂಕಿನ ಹಲವಾರು ಯುವಕ– ಯುವತಿಯರಿಗೆ ಅನುಕೂಲವಾಗುತ್ತದೆ. ಜೊತೆಗೆ ಚನ್ನಪಟ್ಟಣ ಗೊಂಬೆ ತಯಾರಿಕೆಗೆ ಪ್ರಸಿದ್ಧಿಯಾಗಿರುವ ಕಾರಣ  ಯುವಜನರಿಗೆ ಗೊಂಬೆ ತಯಾರಿಕೆಯಲ್ಲಿ ತರಬೇತಿ ನೀಡಲು ಬಳಸಿಕೊಳ್ಳಬಹುದು.

– ಎಚ್.ಕೆ. ಗಿರೀಶ್ ಚನ್ನಪಟ್ಟಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.