ADVERTISEMENT

ಚನ್ನಪಟ್ಟಣ | ವಿವಾದಿತ ಪ್ರದೇಶ: ಸರ್ಕಾರಿ ಜಾಗ ಘೋಷಣೆ

ಎಸ್‌.ಪಿ ಶ್ರೀನಿವಾಸ್ ಗೌಡ, ತಹಶೀಲ್ದಾರ್ ಬಿ.ಎನ್.ಗಿರೀಶ್ ನೇತೃತ್ವದಲ್ಲಿ ಸಭೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 6:24 IST
Last Updated 24 ಜನವರಿ 2026, 6:24 IST
ಚನ್ನಪಟ್ಟಣ ತಾಲ್ಲೂಕಿನ ದೇವರಹೊಸಹಳ್ಳಿಯಲ್ಲಿ ಎರಡು ಸಮುದಾಯದ ಜನರ ನಡುವೆ ಉಂಟಾಗಿದ್ದ ಜಾಗಕ್ಕೆ ಎಸ್ಪಿ ಹಾಗೂ ತಹಶೀಲ್ದಾರ್ ಭೇಟಿ ನೀಡಿದ ವೇಳೆ ಜಮಾಯಿಸಿದ್ದ ಗ್ರಾಮಸ್ಥರು
ಚನ್ನಪಟ್ಟಣ ತಾಲ್ಲೂಕಿನ ದೇವರಹೊಸಹಳ್ಳಿಯಲ್ಲಿ ಎರಡು ಸಮುದಾಯದ ಜನರ ನಡುವೆ ಉಂಟಾಗಿದ್ದ ಜಾಗಕ್ಕೆ ಎಸ್ಪಿ ಹಾಗೂ ತಹಶೀಲ್ದಾರ್ ಭೇಟಿ ನೀಡಿದ ವೇಳೆ ಜಮಾಯಿಸಿದ್ದ ಗ್ರಾಮಸ್ಥರು   

ಚನ್ನಪಟ್ಟಣ: ಎರಡು ಸಮುದಾಯದ ಜನರ ನಡುವೆ ವಿವಾದ ಉಂಟಾಗಿದ್ದ ತಾಲ್ಲೂಕಿನ ದೇವರಹೊಸಹಳ್ಳಿ ಹಳೆ ಅರಳಿಕಟ್ಟೆ ಜಾಗಕ್ಕೆ ಶುಕ್ರವಾರ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಹಾಗೂ ತಹಶೀಲ್ದಾರ್ ಬಿ.ಎನ್.ಗಿರೀಶ್ ಇದು ಸರ್ಕಾರಿ ಜಾಗ ಎಂದು ಗುರುತಿಸಿ ಆ ಜಾಗಕ್ಕೆ ಬೇಲಿ ಹಾಕಿಸುವ ನಿರ್ಧಾರ ಕೈಗೊಂಡರು.

ಗ್ರಾಮದ ಹಳೆ ಅರಳೀಕಟ್ಟೆ ಜಾಗದಲ್ಲಿ ಒಂದು ಸಮುದಾಯದ ಜನರು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಾಗ ನೀಡುವಂತೆ ಕೋರಿದ್ದರು. ಅದೇ ಗ್ರಾಮದ ಮತ್ತೊಂದು ಸಮುದಾಯದ ಜನ ಅಲ್ಲಿ ನಾಗರಕಲ್ಲು ಪ್ರತಿಷ್ಠಾಪನೆ ಮಾಡಲು ಮುಂದಾಗಿದ್ದರು. ಈ ವಿಚಾರದಲ್ಲಿ ಎರಡು ಸಮುದಾಯದರ ನಡುವೆ ಗುರುವಾರ ಮಾತಿನ ಚಕಮಕಿ ನಡೆದಿತ್ತು.

ಶೀಘ್ರ ಬೇಲಿ ಹಾಕಿ, ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಜತೆಗೆ ಈ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡಿದರೆ ಪ್ರಕರಣ ದಾಖಲು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ADVERTISEMENT

ಘಟನೆ ವಿವರ: ತಾಲ್ಲೂಕಿನ ದೇವರಹೊಸಹಳ್ಳಿ ಈ ಹಿಂದೆ ಅರಳಿಕಟ್ಟೆ ಇದ್ದ ಸರ್ವೆ ನಂಬರ್ 116 ರಲ್ಲಿನ 4 ಗುಂಟೆ (ತಿಪ್ಪೆಗುಂಡಿ) ಸರ್ಕಾರಿ ಜಾಗವನ್ನು ಈ ಹಿಂದೆ ಗ್ರಾಮಸ್ಥರು ಸಾರ್ವಜನಿಕ ಸಭೆ ಸಮಾರಂಭಗಳಿಗೆ ಹಾಗೂ ಜಾತ್ರೆ ಉಪಯೋಗಕ್ಕೆ ಬಳಸುತ್ತಿದ್ದರು. ಆದರೆ, ಕಳೆದ ನಾಲ್ಕೈದು ತಿಂಗಳ ಹಿಂದೆ ಗ್ರಾಮದಲ್ಲಿ ದಲಿತ ಸಮುದಾಯದವರು ಈ ಜಾಗದಲ್ಲಿ ಅಂಬೇಡ್ಕರ್ ಹಬ್ಬ ಕಾರ್ಯಕ್ರಮ ನಡೆಸಿ, ನಂತರ ಅಂಬೇಡ್ಕರ್ ಯುವಕರ ಸಂಘದ ಬೋರ್ಡ್ ಹಾಕಿ, ಈ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಾಗ ನೀಡುವಂತೆ ತಾಲ್ಲೂಕು ಆಡಳಿತವನ್ನು ಒತ್ತಾಯಿಸಿದ್ದರು.

ಮತ್ತೊಂದು ಸಮುದಾಯದ ಜನರು ಈ ಜಾಗದಲ್ಲಿ ನಾಗರಕಲ್ಲು ನಿರ್ಮಾಣ ಮಾಡಿ ಶನಿವಾರ ನಾಗರ ಕಲ್ಲುಗಳ ಪ್ರತಿಷ್ಠಾಪನೆ ಕಾರ್ಯಕ್ರಮ ಆಯೋಜಿಸಿದ್ದರು. ಗುರುವಾರ ಸಂಜೆ ನಾಗರಕಲ್ಲು ಪ್ರತಿಷ್ಠಾಪನೆಗೆ ಚಪ್ಪರ ಹಾಕುತ್ತಿದ್ದ ವೇಳೆ ಗ್ರಾಮಸ್ಥರು ಮತ್ತು ದಲಿತ ಸಮುದಾಯದ ಕೆಲವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದು ವಿವಾದದ ರೂಪ ಪಡೆಯುವ ಹಂತ ತಲುಪಿತ್ತು. ಹಾಗಾಗಿ ಶುಕ್ರವಾರ ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ಏರ್ಪಡಿಸಲಾಗಿತ್ತು.

ತಹಶೀಲ್ದಾರ್, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಿಬ್ಬಂದಿ ಮೊದಲು ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿದರು. ಆದರೆ, ಮಹಿಳೆಯರೂ ಸೇರಿದಂತೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಈ ವೇಳೆ ಪರಿಸ್ಥಿತಿ ನಿಯಂತ್ರಣಕ್ಕೆ ತಂದ ಪೊಲೀಸರು ಆ ನಂತರ ಜಾಗವನ್ನು ಸರ್ಕಾರಿ ಜಾಗ ಎಂದು ಘೋಷಿಸಿ ಬಂದೋಬಸ್ತ್ ಮಾಡಿದರು.

ಈ ಜಾಗವನ್ನು ಯಾರಿಗೂ ನೀಡಿಲ್ಲ. ಈ ಜಾಗದ ವಿವಾದ ಬಗೆಹರಿಯುವರೆಗೆ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಈ ಜಾಗದ ಸುತ್ತ ಪೆನ್ಸಿಂಗ್ ಹಾಕಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಯಾರೇ ಅಕ್ರಮ ಪ್ರವೇಶ ಮಾಡಿದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಮೈಕ್ ಮೂಲಕ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.