ADVERTISEMENT

ಚನ್ನಪಟ್ಟಣ: ಬೊಂಬೆನಾಡು ಗಂಗೋತ್ಸವಕ್ಕೆ ಚಾಲನೆ

ಚನ್ನಪಟ್ಟಣ ಬಾಲಕರ ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 6:29 IST
Last Updated 24 ಜನವರಿ 2026, 6:29 IST
ಚನ್ನಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆರಂಭವಾದ ಮೂರು ದಿನಗಳ ಬೊಂಬೆನಾಡ ಗಂಗೋತ್ಸವ ಕಾರ್ಯಕ್ರಮಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಎಂ.ವಿಶ್ವನಾಥ್ ಚಾಲನೆ ನೀಡಿದರು. ಪಕ್ಷದ ಮುಖಂಡರು ಹಾಜರಿದ್ದರು
ಚನ್ನಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆರಂಭವಾದ ಮೂರು ದಿನಗಳ ಬೊಂಬೆನಾಡ ಗಂಗೋತ್ಸವ ಕಾರ್ಯಕ್ರಮಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಎಂ.ವಿಶ್ವನಾಥ್ ಚಾಲನೆ ನೀಡಿದರು. ಪಕ್ಷದ ಮುಖಂಡರು ಹಾಜರಿದ್ದರು   

ಚನ್ನಪಟ್ಟಣ: ಬೊಂಬೆನಗರಿ ಪ್ರಸಿದ್ಧಿ ಚನ್ನಪಟ್ಟಣದಲ್ಲಿ ಶುಕ್ರವಾರದಿಂದ ಆರಂಭವಾದ ಮೂರು ದಿನಗಳ ಬೊಂಬೆನಾಡು ಗಂಗೋತ್ಸವ ಕಾರ್ಯಕ್ರಮಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಎಂ.ವಿಶ್ವನಾಥ್ ಚಾಲನೆ ನೀಡಿದರು.

ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮಕ್ಕೆ ನಿರ್ಮಾಣವಾಗಿರುವ ವೇದಿಕೆಯಲ್ಲಿ ಶುಕ್ರವಾರ ಬೆಳಗ್ಗೆ ಮೊದಲು ಯೋಗಾಸನ ಸ್ಪರ್ಧೆಗೆ ಚಾಲನೆ ನೀಡಲಾಯಿತು.

ನಂತರ ಬೆಳಗ್ಗೆಯಿಂದ ಸಂಜೆವರೆಗೆ ವಿಜ್ಞಾನ ಮೇಳ, ರಂಗ ಗೀತೆಗಳ ಸ್ಪರ್ಧೆ, ವಾಯ್ಸ್ ಆಪ್ ಬೊಂಬೆನಾಡು, ವೇಷಭೂಷಣ ಸ್ಪರ್ಧೆ, ದಂಪತಿಗೆ ಭಾರತೀಯ ಸಂಪ್ರದಾಯದ ಉಡುಗೆ ತೊಡುಗೆ ಸ್ಪರ್ಧೆ, ಚಲನ ಚಿತ್ರಗೀತೆಗಳ ಸಮೂಹ ನೃತ್ಯ ಕಾರ್ಯಕ್ರಮ ನಡೆಯಿತು.

ADVERTISEMENT

ಶನಿವಾರ (ಜ.24) ಮ್ಯಾರಥಾನ್ ಓಟ, ಕಬಡ್ಡಿ, ವಾಲಿಬಾಲ್, ಷಟಲ್ ಬ್ಯಾಡ್ಮಿಂಟನ್ ಸ್ಪರ್ಧೆಗಳ ಸೆಮಿ ಫೈನಲ್, ಫೈನಲ್ ಪಂದ್ಯ, ಗ್ರಾಮ ದೇವತೆಗಳ ಉತ್ಸವ, ಪ್ರತಿಭಾ ಪುರಸ್ಕಾರ, ಕೇಶ ವಿನ್ಯಾಸ ಸ್ಪರ್ಧೆ, ಜಾನಪದ ಮತ್ತು ದೇಶಭಕ್ತಿ ಗೀತೆಗಳ ಸಮೂಹ ನೃತ್ಯ ಕಾರ್ಯಕ್ರಮ, ಭಾನುವಾರ (ಜ.25) ಗಂಗರ ಕುರಿತು ಉಪನ್ಯಾಸ, ಸಾಧಕರ ಸಮಾವೇಶ, ನೌಕರರ ಸಮಾವೇಶ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ದೇಹದಾರ್ಢ್ಯ ಸ್ಪರ್ಧೆ, ಚಲನಚಿತ್ರ ನಟ–ನಟಿಯರ ರಸಸಂಜೆ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮಕ್ಕೆ ಮೆರಗು ನೀಡುವ ನಿಟ್ಟಿನಲ್ಲಿ ನಗರದ ಬೆಂಗಳೂರು–ಮೈಸೂರು ಹೆದ್ದಾರಿ ಹನುಮಂತನಗರದಿಂದ ಚಿಕ್ಕಮಳೂರುವರೆಗೆ, ಮಹದೇಶ್ವರನಗರದಿಂದ ಎಲೇಕೇರಿವರೆಗೆ ಹಾಗೂ ಅಂಚೆಕಚೇರಿ ರಸ್ತೆ, ಎಂ.ಜಿ ರಸ್ತೆ, ಜೆ.ಸಿ.ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರದ ಜೊತೆಗೆ ಕಾಂಗ್ರೆಸ್ ಮುಖಂಡರು, ಗಣ್ಯರ ಸ್ವಾಗತಕ್ಕೆ ಕಟ್ಟಿರುವ ಬ್ಯಾನರ್ ರಸ್ತೆಯುದ್ಧಕ್ಕೂ ಕಂಡು ಬಂದಿತು.

ತಾಲ್ಲೂಕಿನಲ್ಲಿ ಕಳೆದ ಒಂದು ತಿಂಗಳಿನಿಂದ ಬೊಂಬೆನಾಡ ಗಂಗೋತ್ಸವ ಯಶಸ್ಸಿಗೆ ತಯಾರಿ ನಡೆದಿತ್ತು. ಶಾಸಕ ಸಿ.ಪಿ.ಯೋಗೇಶ್ವರ್ ನೇತೃತ್ವ ಹಾಗೂ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಮಾರ್ಗದರ್ಶನ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಎಂ. ವಿಶ್ವನಾಥ್ ಉಸ್ತುವಾರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ತಾಲ್ಲೂಕಿನ ಜಿಲ್ಲಾ ಪಂಚಾಯಿತಿ ಮಟ್ಟದಿಂದ ತಾಲ್ಲೂಕು ಮಟ್ಟದವರೆಗೆ ಹಲವು ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿತ್ತು. ಈಗ ಮೂರು ದಿನಗಳ ಕಾಲ ಅದ್ಧೂರಿ ಕಾರ್ಯಕ್ರಮ ನಡೆಯುತ್ತಿರುವುದು ವಿಶೇಷವಾಗಿದೆ.

ಬೊಂಬೆನಾಡ ಗಂಗೋತ್ಸವ ಕಾರ್ಯಕ್ರಮದಲ್ಲಿ ವೇಷಭೂಷಣ ಸ್ಪರ್ಧೆಯಲ್ಲಿ ಗಮನ ಸೆಳೆದ ಮಕ್ಕಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.