ಚನ್ನಪಟ್ಟಣ: ಮದ್ದೂರಿನಿಂದ ರಾಮನಗರದವರೆಗೆ ಮನೆಮನೆಗೆ ಅಡುಗೆ ಅನಿಲ ಪೂರೈಸುವ ಯೋಜನೆಗಾಗಿ ತಾಲ್ಲೂಕಿನುದ್ದಕ್ಕೂ ನಡೆದಿರುವ ಅನಿಲ್ ಪೂರೈಕೆ ಪೈಪ್‌ಲೈನ್ ಅಳವಡಿಕೆ ಕಾಮಗಾರಿಯಿಂದ ಬೆಂಗಳೂರು– ಮೈಸೂರು ಹೆದ್ದಾರಿ ಬದಿಯನ್ನು ಅಗೆಯಲಾಗಿದೆ. ಗುಂಡಿಯನ್ನು ಸರಿಯಾಗಿ ಮುಚ್ಚದಿರುವುದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು, ರಸ್ತೆಯ ಅಂದವೂ ಹಾಳಾಗಿದೆ. ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ.
ಮದ್ದೂರು, ಚನ್ನಪಟ್ಟಣ ಹಾಗೂ ರಾಮನಗರದ ಮನೆಗಳಿಗೆ ಅಡುಗೆ ಅನಿಲ ಪೂರೈಸಲು ಈಗಾಗಲೇ ಮೂರು ನಗರಗಳ ಒಳಭಾಗದ ರಸ್ತೆಗಳಲ್ಲಿ ಪೈಪ್‌ಲೈನ್ ಅನ್ನು ಬಹುತೇಕ ಅಳವಡಿಸಲಾಗಿದೆ. ಆದರೆ, ಮದ್ದೂರಿನಿಂದ ರಾಮನಗರದವರೆಗೆ ದೊಡ್ಡ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಹಲವು ತಿಂಗಳುಗಳಿಂದ ನಡೆಯುತ್ತಿದೆ.
ಇದಕ್ಕಾಗಿ ರಾಮನಗರದಿಂದ ಮದ್ದೂರು ನಡುವಣ ಹೆದ್ದಾರಿಯ ಪಕ್ಕದಲ್ಲಿ ರಸ್ತೆಯನ್ನು ಅಗೆದು ಪೈಪ್ ಹಾಕುವ ಕಾಮಗಾರಿ ನಡೆದಿದೆ. ಇದರ ಉಪಗುತ್ತಿಗೆ ಪಡೆದಿರುವ ಪ್ರಥಮ್ ಇಪಿಎಸ್ ಪ್ರಾಜೆಕ್ಟ್ ಖಾಸಗಿ ಕಂಪನಿಯು ಪೈಪ್ ಅಳವಡಿಸಿದ ನಂತರ, ರಸ್ತೆಯನ್ನು ಮುಂಚಿನಂತೆ ದುರಸ್ತಿ ಮಾಡದೆ ಹಾಗೆಯೇ ಬಿಟ್ಟಿರುವ ಕಾರಣ ಹೆದ್ದಾರಿಯು ಹಲವೆಡೆ ಹದಗೆಟ್ಟಿದೆ.
ಬೆಂಗಳೂರು ಕಡೆಯಿಂದ ಮದ್ದೂರು ಕಡೆಗೆ ತೆರಳುವ ಹೆದ್ದಾರಿ, ಸರ್ವೀಸ್ ರಸ್ತೆಯ ಬದಿಯ ಎಡಭಾಗದಲ್ಲಿ ಅನಿಲ ಪೈಪ್‌ಲೈನ್ ಸಂಪರ್ಕಕ್ಕಾಗಿ ಜೆಸಿಬಿಯಿಂದ ಗುಂಡಿಯನ್ನು ತೆಗೆಯಲಾಗುತ್ತಿದೆ. ರಾಮನಗರದಿಂದ ಚನ್ನಪಟ್ಟಣದವರೆಗೆ ಈಗಾಗಲೇ ಪೈಪ್‌ಲೈನ್ ಅಳವಡಿಸಿ ಬಹುತೇಕ ಗುಂಡಿಯನ್ನು ಮುಚ್ಚಿ ಡಾಂಬರ್ ಸಹ ಹಾಕಲಾಗಿದೆ. ಆದರೆ ಅಲ್ಲಲ್ಲಿ ಕೆಲವೆಡೆ ಹೆದ್ದಾರಿಗೆ ಹೊಂದಿಕೊಂಡಂತೆ ಗುಂಡಿಗಳನ್ನು ತೋಡಿ ಹಾಗೆಯೆ ಬಿಡಲಾಗಿದೆ.
ಈಗ ಚನ್ನಪಟ್ಟಣ ನಗರವೂ ಸೇರಿದಂತೆ ಮದ್ದೂರು ಕಡೆಗೆ ಹೆದ್ದಾರಿಯ ಎಡಭಾಗದಲ್ಲಿ ಕಾಮಗಾರಿ ಆರಂಭಿಸಿರುವ ಖಾಸಗಿ ಕಂಪನಿಯು ಉದ್ದಕ್ಕೂ ರಸ್ತೆಯನ್ನು ಅಗೆಯುತ್ತಿದ್ದು, ಕಾಮಗಾರಿ ನಡೆಸಲು ವಾಹನಗಳು, ಜೆಸಿಬಿಗಳು, ಲಾರಿಗಳನ್ನು ನಿಲ್ಲಿಸಿಕೊಂಡಿರುವ ಜೊತೆಗೆ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚದ ಕಾರಣ ವಾಹನ ಸವಾರರು, ಅಕ್ಕಪಕ್ಕದ ನಿವಾಸಿಗಳು, ಅಂಗಡಿಗಳವರು ಮುಜುಗರ ಅನುಭವಿಸುವಂತಾಗಿದೆ.
ವಾಹನ ದಟ್ಟಣೆ ಹೆಚ್ಚು: ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ–275ರಲ್ಲಿ ಆಟೋಗಳು, ಕೃಷಿ ಬಳಕೆಯ ವಾಹನಗಳು, ದ್ವಿಚಕ್ರ ವಾಹನಗಳಿಗೆ ಪ್ರವೇಶವಿಲ್ಲ. ಜೊತೆಗೆ ಟೋಲ್ ದರ, ದುಬಾರಿ ದಂಡದ ಕಾರಣ ಬಹುತೇಕ ವಾಹನಗಳು ಚನ್ನಪಟ್ಟಣ ನಗರವನ್ನು ಹಾದು ಹೋಗುವ ಹಳೆಯ ಹೆದ್ದಾರಿ ಮತ್ತು ಸರ್ವೀಸ್ ರಸ್ತೆಯಲ್ಲಿ ಸಾಗುತ್ತವೆ.
ಕೆಲವೆಡೆ ಹೆದ್ದಾರಿಯು ಚಿಕ್ಕದಾಗಿರುವ ಕಾರಣ ಹೆದ್ದಾರಿಯ ಅರ್ಧ ರಸ್ತೆಯವರೆಗೂ ಗುಂಡಿ ತೋಡಲಾಗಿದೆ. ಇಲ್ಲೆಲ್ಲಾ ವಾಹನ ದಟ್ಟಣೆ ಎದುರಾಗುತ್ತಿದೆ. ಇದರಿಂದ ಸಣ್ಣಪುಟ್ಟ ಅಪಘಾತಗಳಾಗುವ ಜೊತೆಗೆ ಈ ಸ್ಥಳಗಳಲ್ಲಿ ಇರುವ ಮನೆಗಳು, ಕಚೇರಿಗಳು, ಅಂಗಡಿ ಮುಂಗಟ್ಟುಗಳು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿವೆ ಎಂದು ಸ್ಥಳೀಯ ನಿವಾಸಿ ವೀರಭದ್ರ ದೂರಿದರು.
ಕಾಮಗಾರಿಯ ಕಾರಣ ಹೆದ್ದಾರಿ, ಸರ್ವೀಸ್ ರಸ್ತೆ ಹಾಳಾಗುವ ಜೊತೆಗೆ ಮೋರಿಗಳು, ಚರಂಡಿಗಳು ಮುಚ್ಚಿ ಹೋಗುತ್ತಿವೆ. ಮಳೆ ನೀರು ಹಾಗೂ ಗಲೀಜು ನೀರು ರಸ್ತೆಗೆ ಬಂದು ನಿಲ್ಲುವಂತಾಗಿದೆ. ಕಾಮಗಾರಿ ಕಾರಣ ಪಾದಾಚಾರಿಗಳು ಸಾಕಷ್ಟು ಸಮಸ್ಯೆ ಅನುಭವಿಸುವಂತಾಗಿದೆ. ಮಳೆ ಬಂದಾಗ ಮಣ್ಣಿನ ರಾಶಿ ರಸ್ತೆಯನ್ನು ಆವರಿಸಿಕೊಂಡು ಕೆಸರಿನ ರಾಡಿಯಾಗುತ್ತದೆ ಎಂದು ರಾಕೇಶ್ ಪರಿಸ್ಥಿತಿ ಬಿಚ್ಚಿಟ್ಟರು.
ಕಾಮಗಾರಿ ನಡೆಸುವ ಸಲುವಾಗಿ ಜೆಸಿಬಿ, ಟಿಪ್ಪರ್ ಲಾರಿಗಳು, ಟ್ರ್ಯಾಕ್ಟರ್‌ಗಳು, ಯಂತ್ರಗಳು ಹಾಗೂ ಕಾರ್ಮಿಕರು ರಸ್ತೆಯ ಅಕ್ಕಪಕ್ಕದಲ್ಲೆ ಓಡಾಡುವ ಕಾರಣ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಸುಗುಮ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಚನ್ನಪಟ್ಟಣ ಮದ್ದೂರು ನಡುವೆ ಇಪ್ಪತ್ತು ನಿಮಿಷಗಳ ಪ್ರಯಾಣಕ್ಕೆ ಬದಲಾಗಿ ನಲವತ್ತೈದು ನಿಮಿಷ ತೆಗೆದುಕೊಳ್ಳುವಂತಾಗಿದೆ ಎಂದು ವಾಹನ ಸವಾರರಾದ ವಿವೇಕ್, ಶ್ರೀಕಂಠಪ್ಪ, ಚಂದ್ರಣ್ಣ ಹೇಳಿದರು.
ಕೋಟ್ಯಂತರ ರೂಪಾಯಿ ವೆಚ್ಚದ ಅನಿಲ ಪೂರೈಕೆ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಕೈಗೊಂಡಿರುವ ಖಾಸಗಿ ಕಂಪನಿಯು ಹಾಳಾಗುತ್ತಿರುವ ಹೆದ್ದಾರಿಯ ಅಂದವನ್ನು ಕಾಪಾಡಬೇಕು. ಅಲ್ಲಲ್ಲಿ ತೆಗೆದು ಮುಚ್ಚದೇ ಬಿಟ್ಟಿರುವ ಗುಂಡಿಗಳನ್ನು ಮುಚ್ಚಬೇಕು. ವಾಹನ ಸವಾರರು, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು, ಜನಪ್ರತಿನಿಧಿಗಳು ಗಮನ ನೀಡಬೇಕು ಎಂದು ಒತ್ತಾಯಿಸಿದರು.
ಈ ಕುರಿತು ಪ್ರತಿಕ್ರಿಯೆ ಕೇಳಲು ಪ್ರಥಮ್ ಇಪಿಎಸ್ ಪ್ರಾಜೆಕ್ಟ್ ಖಾಸಗಿ ಕಂಪನಿಯ ವ್ಯವಸ್ಥಾಪಕರ ಮೊಬೈಲ್ ಸಂಖ್ಯೆಗೆ ‘ಪ್ರಜಾವಾಣಿ’ ಕರೆ ಮಾಡಿದಾಗ, ಕರೆ ಸ್ವೀಕರಿಸಲಿಲ್ಲ.
ತಾಲ್ಲೂಕಿನ ವಂದಾರಗುಪ್ಪೆಯ ಕುವೆಂಪು ಕಾಲೇಜು ಬಳಿ ಮಾರ್ಚ್ 12ರಂದು ರಾತ್ರಿ ಅನಿಲ್ ಪೈಪ್‌ಲೈನ್ ಮಾರ್ಗದಲ್ಲಿ ದೊಡ್ಡ ಸ್ಪೋಟವೊಂದು ಸಂಭವಿಸಿತ್ತು. ಘಟನೆಯಿಂದಾಗಿ ಸ್ಥಳೀಯ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದರು. ರಾಮನಗರದಿಂದ ಚನ್ನಪಟ್ಟಣದವರೆಗಿನ ಪೈಪ್‌ಲೈನ್ ಪೂರ್ಣಗೊಂಡಿದ್ದ ಹಿನ್ನೆಲೆಯಲ್ಲಿ ಪರೀಕ್ಷಾರ್ಥವಾಗಿ ಪೈಪ್‌ಲೈನ್‌ಗೆ ನೀರು ಹರಿಸಲಾಗಿತ್ತು. ನೀರಿನ ಒತ್ತಡವನ್ನು ತಡೆದುಕೊಳ್ಳಲಾರದೆ ಪೈಪ್‌ಲೈನ್ ಸ್ಪೋಟಗೊಂಡು ಎತ್ತರಕ್ಕೆ ನೀರು ಚಿಮ್ಮಿತ್ತು. ಸ್ಫೋಟದ ತೀವ್ರತೆಗೆ ಕಲ್ಲು–ಮಣ್ಣು ರಸ್ತೆಗೆ ಸಿಡಿದಿತ್ತು. ಇದರಿಂದ ಕೆಲ ವಾಹನಗಳಿಗೆ ಹಾನಿಯಾಗಿತ್ತು. ಇಡೀ ರಸ್ತೆ ಕೆಸರುಮಯವಾಗಿತ್ತು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿರಲಿಲ್ಲ.
ಘಟನೆ ಕುರಿತು ಸ್ಥಳೀಯರು ನೀಡಿದ ದೂರಿನ ಮೇರೆಗೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಾಮಗಾರಿ ಗುತ್ತಿಗೆ ಪಡೆದಿರುವ ಕಂಪನಿ ವ್ಯವಸ್ಥಾಪಕರು ಹಾಗೂ ಮೇಲ್ವಿಚಾರಕರ ವಿರುದ್ಧ ಪ್ರಕರಣ ದಾಖಲಾಗಿತ್ತು. ಸುರಕ್ಷಾ ಕ್ರಮಗಳ ಬಗ್ಗೆ ಮಾಹಿತಿ ನೀಡಲಿ ಅನಿಲ್ ಪೈಪ್‌ಲೈನ್ ಮಾರ್ಗದಲ್ಲಿ ಪರೀಕ್ಷಾರ್ಥವಾಗಿ ನೀರು ಹರಿಸಿದಾಗಲೇ ಸ್ಫೋಟ ಸಂಭವಿಸಿದೆ. ಇನ್ನು ಅನಿಲ ಹರಿಸಿದಾಗ ಸ್ಪೋಟಗೊಂಡರೆ ಈ ಭಾಗದ ಮನೆಗಳು ಸೇರಿದಂತೆ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಹಾನಿ ತಪ್ಪಿದ್ದಲ್ಲ. ಹಾಗಾಗಿ ಸುರಕ್ಷತೆ ಕುರಿತು ಸ್ಥಳೀಯರಲ್ಲಿ ಅನುಮಾನ ಇದ್ದೇ ಇದೆ.
ಕಾಮಗಾರಿ ಪೂರ್ಣಗೊಂಡ ಬಳಿಕ ಕಂಪನಿಯವರು ಪೈಪ್‌ಲೈನ್ ಹಾದು ಹೋಗಿರುವ ಮಾರ್ಗದಲ್ಲಿ ವಾಸಿಸುವ ಸ್ಥಳೀಯರಿಗೆ ಸುರಕ್ಷತೆಯ ಕುರಿತು ಗ್ಯಾರಂಟಿ ನೀಡಬೇಕು. ಜೊತೆಗೆ ತುರ್ತು ಸಂದರ್ಭ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಬೇಕು ಎಂದು ವಂದಾರಗುಪ್ಪೆ ನಿವಾಸಿಗಳು ಒತ್ತಾಯಿಸಿದರು.
ಅನಿಲ ಪೂರೈಕೆಗಾಗಿ ನಡೆಯುತ್ತಿರುವ ಪೈಪ್‌ಲೈನ್ ಕಾಮಗಾರಿಯ ಗುಂಡಿಗಳನ್ನು ಸರಿಯಾಗಿ ಮುಚ್ಚದೆ ಹಾಗೆಯೆ ಬಿಡಲಾಗಿದೆ. ಕೆಲವೆಡೆ ಮುಚ್ಚಿದ್ದರೂ ಸಮರ್ಪಕವಾಗಿ ಕೆಲಸ ನಡೆದಿಲ್ಲ. ಡಾಂಬರು ಸಹ ಹಾಕಿಲ್ಲ. ಗುಂಡಿಯನ್ನು ಸಮರ್ಪಕವಾಗಿ ಮುಚ್ಚದಿರುವ ಕಡೆಗಳಲ್ಲಿ ವಾಹನ ಸವಾರರು ರಸ್ತೆಯ ಸ್ಥಿತಿಯನ್ನು ಅರಿಯದೆ ಹೋಗಿ ಅಪಘಾತಕ್ಕಿಡಾಗಿದ್ದಾರೆ.– ಅಮಿತ್ ಕುಮಾರ್ ಸ್ಥಳೀಯ ನಿವಾಸಿ ಚನ್ನಪಟ್ಟಣ
ಅಭಿವೃದ್ಧಿಯ ಹೆಸರಿನಲ್ಲಿ ಅಂದವಾಗಿದ್ದ ಬೆಂಗಳೂರು– ಮೈಸೂರು ರಸ್ತೆಯ ಎಡಭಾಗವನ್ನು ಅಗೆದು ಹಾಳು ಮಾಡಿ ಅಂದಗೆಡಿಸಲಾಗಿದೆ. ಗುಂಡಿ ತೆಗೆದು ಮುಚ್ಚಿ ಅಲ್ಲಿ ಡಾಂಬರು ಹಾಕಿದರೂ ಅದು ತೇಪೆ ಹಾಕಿದಂತೆ. ದೂರಾಲೋಚನೆ ಇಲ್ಲದೆ ಮಾಡುವ ಇಂತಹ ಕಾಮಗಾರಿಗಳಿಂದ ಎಲ್ಲರಿಗೂ ತೊಂದರೆ. ಇದನ್ನು ಸಂಬಂಧಪಟ್ಟವರು ಅರ್ಥ ಮಾಡಿಕೊಳ್ಳಬೇಕು.– ಸುರೇಂದ್ರ ಉಪನ್ಯಾಸಕ ಚನ್ನಪಟ್ಟಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.