ADVERTISEMENT

ಚನ್ನಪಟ್ಟಣ: ಸೋಲಾರ್ ವಿದ್ಯುತ್ ಕಂಬ ಅಳವಡಿಕೆ; ರೈತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 2:40 IST
Last Updated 28 ಫೆಬ್ರುವರಿ 2026, 2:40 IST
ಚನ್ನಪಟ್ಟಣ ತಾಲ್ಲೂಕಿನ ಮಂಕುಂದ ಗ್ರಾಮದ ಕೃಷಿಭೂಮಿಯಲ್ಲಿ ಸೋಲಾರ್ ವಿದ್ಯುತ್ ಕಂಬಗಳನ್ನು ಅಳವಡಿಸುತ್ತಿರುವುದನ್ನು ವಿರೋಧಿಸಿ ಖಾಸಗಿ ಕಂಪನಿಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ರೈತರು
ಚನ್ನಪಟ್ಟಣ ತಾಲ್ಲೂಕಿನ ಮಂಕುಂದ ಗ್ರಾಮದ ಕೃಷಿಭೂಮಿಯಲ್ಲಿ ಸೋಲಾರ್ ವಿದ್ಯುತ್ ಕಂಬಗಳನ್ನು ಅಳವಡಿಸುತ್ತಿರುವುದನ್ನು ವಿರೋಧಿಸಿ ಖಾಸಗಿ ಕಂಪನಿಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ರೈತರು   

ಚನ್ನಪಟ್ಟಣ: ಖಾಸಗಿ ಕಂಪನಿಯೊಂದು ರೈತರ ಕೃಷಿ ಭೂಮಿಯಲ್ಲಿ ಸೋಲಾರ್ ವಿದ್ಯುತ್ ಕಂಬಗಳನ್ನು ಅಳವಡಿಸುತ್ತಿರುವುದನ್ನು ವಿರೋಧಿಸಿ ತಾಲ್ಲೂಕಿನ ಮಂಕುಂದ ಗ್ರಾಮದ ರೈತರು ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಕಾನೂನಾತ್ಮಕ ಭೂಸ್ವಾಧೀನ ಪ್ರಕ್ರಿಯೆ ನಡೆಸದೆ, ರೈತರ ಅನುಮತಿ ಪಡೆಯದೆ ಕೃಷಿ ಭೂಮಿಯಲ್ಲಿ ಸೋಲಾರ್ ವಿದ್ಯುತ್ ಕಂಬಗಳನ್ನು ಅಕ್ರಮವಾಗಿ ಅಳವಡಿಸಲಾಗುತ್ತಿದೆ ಎಂದು ಆರೋಪಿಸಿ ಸ್ಥಳದಲ್ಲಿ ಜಮಾಯಿಸಿದ ಗ್ರಾಮದ ರೈತರು, ಕಾಮಗಾರಿಯನ್ನು ತಡೆದು ಸೋಲಾರ್ ವಿದ್ಯುತ್ ಕಂಬಗಳನ್ನು ನೆಡುತ್ತಿದ್ದ ಕಂಪನಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಕಾಮಗಾರಿ ನಡೆಸಲು ಸರ್ಕಾರದಿಂದ ಪಡೆದಿರುವ ಆದೇಶ ಪ್ರತಿ ತೋರಿಸಿ ಎಂದು ಪಟ್ಟು ಹಿಡಿದರು. ಆದರೆ ಕಂಪನಿಯ ಸಿಬ್ಬಂದಿ ಯಾವುದೇ ದಾಖಲೆ ನೀಡಲು ವಿಫಲರಾದರು. ಆನಂತರ ರೈತರ ಆಕ್ರೋಶ ತೀವ್ರಗೊಂಡ ಕಾರಣ ಸಿಬ್ಬಂದಿ ಸ್ಥಳದಿಂದ ಕಾಲ್ಕಿತ್ತರು.

ADVERTISEMENT

ತಾಲ್ಲೂಕಿನ ಗುಡ್ಡೆ ತಿಮ್ಮಸಂದ್ರ ಗ್ರಾಮದಿಂದ ಬೈರಾಪಟ್ಟಣ ಗ್ರಾಮದವರೆಗೆ ಮೆಗಾ ಫರ್ಸ್ ಖಾಸಗಿ ಕಂಪನಿ ಸೋಲಾರ್ ವಿದ್ಯುತ್ ಮಾರ್ಗಕ್ಕಾಗಿ ಕಂಬಗಳನ್ನು ಅಳವಡಿಸುತ್ತಿದೆ. ಈ ಪ್ರಕ್ರಿಯೆಯಲ್ಲಿ ರೈತರ ಜಮೀನಿನ ಮಧ್ಯೆ ಕಂಬಗಳನ್ನು ನೆಡುವುದರಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗಲಿದೆ ಎಂದು ರೈತರು ತಿಳಿಸಿದರು.

ಈ ಬಗ್ಗೆ ತಾಲ್ಲೂಕಿನ ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಕಂದಾಯ ಇಲಾಖೆ, ಬೆಸ್ಕಾಂ ಇಲಾಖೆಗೆ ವಿಚಾರ ತಿಳಿಸಲಾಗಿದೆ. ಆದರೆ ರೈತರ ಅಹವಾಲು ಕೇಳಲು ಯಾರೂ ಸ್ಥಳಕ್ಕೆ ಬಂದಿಲ್ಲ ಎಂದು ರೈತರು ಆರೋಪಿಸಿದರು. ತಾಲ್ಲೂಕು ಆಡಳಿತ ಕೂಡಲೇ ಗಮನಹರಿಸಿ ಈ ಅಕ್ರಮಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.