
ಚನ್ನಪಟ್ಟಣ ತಾಲ್ಲೂಕಿನ ಕೆಂಗಲ್ ಆಂಜನೇಯಸ್ವಾಮಿ ದನಗಳ ಜಾತ್ರೆ
ಚನ್ನಪಟ್ಟಣ: ಸುಗ್ಗಿಹಬ್ಬ ಸಂಕ್ರಾಂತಿ ಆಚರಣೆ ಮಾರನೇ ದಿನದಿಂದ ಆರಂಭವಾಗುವ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕೆಂಗಲ್ ಆಂಜನೇಯಸ್ವಾಮಿ ದನಗಳ ಜಾತ್ರೆ ಶುಕ್ರವಾರ ವೈಭವದಿಂದ ಆರಂಭಗೊಂಡಿದೆ.
ಗ್ರಾಮೀಣ ಭಾಗದ ಜನರ ಬಾಯಲ್ಲಿ ಐಯ್ಯನಗುಡಿ ದನಗಳ ಜಾತ್ರೆ ಎಂದೇ ಪ್ರಸಿದ್ಧ. ತಾಲ್ಲೂಕಿನ ಜನ-ಜಾನುವಾರು ಅತಿದೊಡ್ಡ ಜಾತ್ರೆಯಾಗಿರುವ ಕೆಂಗಲ್ ಆಂಜನೇಯಸ್ವಾಮಿ ಜಾತ್ರೆಯಲ್ಲಿ ದೇವಾಲಯದ ಮುಂಭಾಗ, ಬಲಭಾಗ ಮತ್ತು ಎಡಭಾಗದ ವಿಶಾಲ ಪ್ರದೇಶವಿದೆ. ಬೆಂಗಳೂರು–ಮೈಸೂರು ಹೆದ್ದಾರಿ ಇಕ್ಕೆಲ ಸೇರಿದಂತೆ ಅಲ್ಲಲ್ಲಿ ಗುಂಪುಗುಂಪಾಗಿ ಜಮಾಯಿಸಿರುವ ಎತ್ತು, ಹಸುಗಳನ್ನು ಕೊಳ್ಳುವ ಭರಾಟೆ ಭರದಿಂದ ಸಾಗಿದೆ.
ಸಂಕ್ರಾಂತಿ ಆಚರಣೆ ಬಳಿಕ ತಮ್ಮ ರಾಸುಗಳನ್ನು ಈ ಜಾತ್ರೆಗೆ ವ್ಯಾಪಾರಕ್ಕಾಗಿ ತರುವ ರೈತರು ತಮ್ಮ ಜಾನುವಾರು ವ್ಯಾಪಾರ ಮಾಡಿ ತಮಗೆ ಬೇಕಾದ ಉತ್ತಮ ರಾಸು ಖರೀದಿಸುವುದು ಇಲ್ಲಿನ ಪದ್ಧತಿ. ಕಳೆದ ಕೆಲವು ವರ್ಷಗಳಿಂದ ಜಾತ್ರೆ ಕಳೆಗುಂದಿತ್ತು. ಕೋವಿಡ್ ಹಾಗೂ ಕಾಲುಬಾಯಿ ಜ್ವರದ ಸಂದರ್ಭದಲ್ಲಿ ದನಗಳ ಜಾತ್ರೆಯನ್ನು ಜಿಲ್ಲಾಡಳಿತ ನಿಷೇಧಿಸಿತ್ತು. ಆ ನಂತರ ಕಳೆಗುಂದಿದ್ದ ದನಗಳ ಜಾತ್ರೆ ಈ ವರ್ಷ ಮತ್ತೆ ಕಳೆಗಟ್ಟಿದೆ.
ವಿವಿಧ ತಾಲ್ಲೂಕುಗಳಿಂದ ಆಗಮನ: ಚನ್ನಪಟ್ಟಣ, ರಾಮನಗರ ಮಾತ್ರವಲ್ಲದೆ ಕನಕಪುರ, ಮಾಗಡಿ, ಮದ್ದೂರು, ಕುಣಿಗಲ್, ತುಮಕೂರು, ಆನೇಕಲ್, ದೊಡ್ಡಬಳ್ಳಾಪುರ, ನೆಲಮಂಗಲ, ಕೋಲಾರ, ತುರುವೇಕೆರೆ, ತಿಪಟೂರು ತಾಲ್ಲೂಕು ಸೇರಿದಂತೆ ವಿವಿಧ ತಾಲ್ಲೂಕುಗಳ ಜಾನುವಾರು ಹಾಗೂ ಹೊರರಾಜ್ಯಗಳ ಜಾನುವಾರುಗಳು ಸಹ ಆಗಮಿಸಿವೆ.
ತಮ್ಮ ಜಾನುವಾರುಗಳನ್ನು ಅತ್ಯುತ್ತಮ ಜೋಡಿ ಎತ್ತುಗಳನ್ನು ಜಾತ್ರೆಗೆ ಕರೆ ತರುವಾಗ ರೈತರು ತಮಟೆ ವಾದ್ಯ, ಪೂಜಾ ಕುಣಿತದೊಂದಿಗೆ ಮೆರವಣಿಗೆ ಮಾಡಿಕೊಂಡು ಕರೆ ತರುವ ವಾಡಿಕೆಯೂ ಇಲ್ಲಿದೆ. ಕೆಲವರು ಪೆಂಡಾಲ್ ಹಾಕಿಸಿ ತಮ್ಮ ಎತ್ತುಗಳನ್ನು ಅದರ ಕೆಳಗೆ ಕಟ್ಟಿ, ವಿಶೇಷ ಆಕರ್ಷಣೆ ಸಹ ಮಾಡಿಸಿದ್ದಾರೆ.
ವಿವಿಧ ರಾಜ್ಯಗಳ ಗ್ರಾಹಕರು: ಜಾನುವಾರು ಖರೀದಿಗೆ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ವಿವಿಧ ಜಿಲ್ಲೆಯ ವ್ಯಾಪಾರಸ್ಥರು ಆಗಮಿಸುತ್ತಾರೆ. ಜತೆಗೆ ಜಾನುವಾರು ಬೆಲೆಯೂ ಗಗನಕ್ಕೆರುತ್ತದೆ. ಒಂಟಿ ಹಸುಗಳಿಗೆ ₹50 ಸಾವಿರದಿಂದ ₹2 ಲಕ್ಷದವರೆಗೆ ಬೆಲೆ ಇದ್ದರೆ, ಜೋಡಿಯಾಗುವ ಒಂಟಿ ಕರುಗಳಿಗೆ ₹80 ಸಾವಿರದಿಂದ ಒಂದೂವರೆ ಲಕ್ಷದವರೆಗೆ, ಜೋಡಿ ಎತ್ತುಗಳಿಗೆ ₹3 ಲಕ್ಷದಿಂದ ₹5ಲಕ್ಷದವರೆಗೆ ಬೆಲೆ ಇದೆ. ಇಷ್ಟಿದ್ದರೂ ವ್ಯಾಪಾರಸ್ಥರು ಜಾನುವಾರು ಖರೀದಿಸಲು ಆಸಕ್ತಿ ತೋರುವುದು ಇಲ್ಲಿಯ ವಿಶೇಷವಾಗಿದೆ.
ಕೆಂಗಲ್ ದನಗಳ ಜಾತ್ರೆಯಲ್ಲಿ ಜನ ಜಾನುವಾರುಗಳಿಗೆ ಜಿಲ್ಲಾಡಳಿತ ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯ ಆಯೋಜಿಸಿದೆ. ಮೂರ ನಾಲ್ಕು ದಿನಗಳ ಕಾಲ ನಡೆಯುವ ದನಗಳ ಜಾತ್ರೆಯಲ್ಲಿ ಪ್ರತಿದಿನ ಭಕ್ತರು ಹಾಗೂ ರೈತರು, ವ್ಯಾಪಾರಸ್ಥರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ವಿ.ಬಿ.ಚಂದ್ರು ತಿಳಿಸಿದರು.
ಅತ್ಯುತ್ತಮ ರಾಸುಗಳಿಗೆ ಚಿನ್ನದ ಪದಕ
ಜಾತ್ರೆಯಲ್ಲಿ ಭಾಗವಹಿಸುವ ಅತ್ಯುತ್ತಮ ರಾಸುಗಳಿಗೆ ಕೆಂಗಲ್ ಅಯ್ಯನಗುಡಿ ದನಗಳ ಜಾತ್ರಾ ಸೇವಾ ಟ್ರಸ್ಟ್ ವತಿಯಿಂದ ಪ್ರತಿವರ್ಷ ಆಕರ್ಷಕ ಬಹುಮಾನ ನೀಡಲಾಗುತ್ತದೆ. ಜ.18ರಂದು ಉತ್ತಮ ರಾಸುಗಳ ರಾಜ್ಯಮಟ್ಟದ ಸ್ಪರ್ಧೆ ನಡೆಯಲಿದೆ. ಜಾತ್ರೆಯಲ್ಲಿರುವ ಅತ್ಯುತ್ತಮ ರಾಸು ಅತ್ಯುತ್ತಮ ಹೋರಿ ಕರುವಿಗೆ ಅತ್ಯುತ್ತಮ ಹೆಣ್ಣು ಕರುವಿಗೆ ತಲಾ ಒಂದು ಚಿನ್ನದ ಪದಕ ಪ್ರಶಸ್ತಿ ಪತ್ರ ನೀಡಲಾಗುತ್ತದೆ. ಜಾತ್ರೆಗೆ ಬರುವ ಜಾನುವಾರು ರೈತರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಬಹುಮಾನ ನೀಡಲಾಗುತ್ತಿದೆ. ಜಾತ್ರೆಯಲ್ಲಿ ಮೈಸೂರು ಭಾಗದ ಹಳ್ಳಿಕಾರ್ ತಳಿ ಜಾನುವಾರುಗಳಿಗೆ ಬೇಡಿಕೆ ಇದೆ. ಉತ್ತಮ ಹಳ್ಳಿಕಾರ್ ಜಾನುವಾರು ಕರೆ ತಂದಿರುವ ರೈತರು ಬಹುಮಾನಕ್ಕೆ ಸ್ಪರ್ಧೆ ಮಾಡುತ್ತಾರೆ. ಕೆಲ ರೈತರು ಆಕರ್ಷಣೆಗಾಗಿ ಜಾತ್ರೆಗೆ ಜಾನುವಾರು ಕರೆ ತಂದು ಕಟ್ಟುವುದು ಇಲ್ಲಿಯ ವಿಶೇಷವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.