ಚನ್ನಪಟ್ಟಣ: ಸಮಾಜದ ಪ್ರಗತಿಯಲ್ಲಿ ಹಿರಿಯರ ಜೀವನಾನುಭವ ಅವಶ್ಯ. ಹಿರಿಯರು ನಿವೃತ್ತಿ ನಂತರ ತೆರೆಮರೆಗೆ ಸರಿಯುವ ಬದಲು ತಮ್ಮ ಅನುಭವವನ್ನು ಸಮಾಜದ ಉನ್ನತಿಗೆ ವ್ಯಯ ಮಾಡಬೇಕು ಎಂದು ಗ್ರೇಡ್-2 ತಹಶೀಲ್ದಾರ್ ಲಕ್ಷ್ಮಿದೇವಮ್ಮ ಅಭಿಪ್ರಾಯಪಟ್ಟರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ತಾಲ್ಲೂಕು ಘಟಕ ಹಾಗೂ ಸಿಂ.ಲಿಂ.ನಾಗರಾಜು ಪ್ರತಿಷ್ಠಾನ ಟ್ರಸ್ಟ್ ಸಹಯೋಗದೊಂದಿಗೆ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಹಾಗೂ 80ವರ್ಷ ಮೇಲ್ಪಟ್ಟ ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾರ್ವಜನಿಕ ಸೇವೆ ಸಲ್ಲಿಸಿ ಸರ್ಕಾರಿ ವೃತ್ತಿಯಿಂದ ನಿವೃತ್ತಿಯಾದ ನಂತರ ತನ್ನ ಸೇವೆ ಮುಗಿಯಿತು ಎಂದು ಸುಮ್ಮನಾಗದೆ ಕೈಲಾದಷ್ಟು ಜನ ಸೇವೆ ಮಾಡಬೇಕು. ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಹಿರಿಯ ನಾಗರಿಕರ ಸೇವೆ ಸಮಾಜಕ್ಕೆ ಅಗತ್ಯವಾಗಿದೆ ಎಂದರು.
ಹಿರಿಯ ಪತ್ರಕರ್ತ ಸು.ತ.ರಾಮೇಗೌಡ ಮಾತನಾಡಿ, ಸರ್ಕಾರಿ ನೌಕರರು ವಯಸ್ಸಿನ ಆಧಾರದಲ್ಲಿ ನಿವೃತ್ತಿ ಆಗುವುದು ಸಹಜ. ಆದರೆ, ನಿವೃತ್ತಿ ಎನ್ನುವ ಯೋಚನೆ ಬದಿಗೊತ್ತಿ ಉತ್ಸಾಹದಿಂದ ಸಾರ್ವಜನಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು. ತಾಲ್ಲೂಕಿನಲ್ಲಿ ಸರ್ಕಾರಿ ನಿವೃತ್ತ ನೌಕರರ ಸಂಘ ಉತ್ತಮವಾದ ಕಾರ್ಯ ಮಾಡುತ್ತಾ ಇತರರಿಗೆ ಮಾದರಿಯಾಗಿದೆ ಎಂದರು.
80ವರ್ಷ ಮೇಲ್ಪಟ್ಟ ನಿವೃತ್ತ ಹಿರಿಯ ನೌಕರರಾದ ವಿವಿಧ ಇಲಾಖೆ ಬಿ.ಎನ್.ಕಾಡಯ್ಯ, ರಾಮಯ್ಯ, ನಾಗರಾಜು, ಅಂಕುಗೌಡ, ವೆಂಕಟೇಗೌಡ, ಗಿರಿಗೌಡ, ಶಿವರಾಮು, ಅಚ್ಯುತಮೂರ್ತಿ, ಪಾರ್ಥಸಾರಥಿ, ಇತರರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಡಾ.ಜೆ.ಪ್ರಜ್ವಲ್ ಗೌಡ ಹಿರಿಯ ನಾಗರಿಕರ ಆರೋಗ್ಯ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿದರು.
ಸಿಂ.ಲಿಂ.ನಾಗರಾಜು ಪ್ರತಿಷ್ಠಾನದ ಅಧ್ಯಕ್ಷ ಶಂಭೂಗೌಡ ನಾಗವಾರ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ಸಿ.ಮಲ್ಲಯ್ಯ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಸುಧೀಂದ್ರ, ಭಾರತ ವಿಕಾಸ ಪರಿಷತ್ ರಾಜ್ಯ ಪ್ರಾಂತ್ಯದ ವಸಂತಕುಮಾರ್, ಖಜಾಂಚಿ ಎಚ್.ಶಿವಣ್ಣ, ಮುಖಂಡ ಬಿ.ಸಿದ್ದೇಗೌಡ, ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.