ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ
ರಾಮನಗರ: ಚನ್ನಪಟ್ಟಣ ಕೇವಲ ಬೊಂಬೆಗಷ್ಟೇ ಅಲ್ಲದೆ, ರಾಜಕೀಯ ಪ್ರತಿಷ್ಠೆಗಾಗಿ ನಡೆದ ಉಪ ಚುನಾವಣೆಗಳ ಮೂಲಕವೂ ರಾಜ್ಯದ ಗಮನ ಸೆಳೆದಿದೆ. ಈಗ ಎದುರಾಗಿರುವ ಉಪ ಚುನಾವಣೆ ಸೇರಿದಂತೆ, ಕ್ಷೇತ್ರವು ಕಳೆದ 16 ವರ್ಷಗಳಲ್ಲಿ 3 ಉಪ ಚುನಾವಣೆಗಳಿಗೆ ಸಾಕ್ಷಿಯಾಗಿದೆ. ಮೊದಲ ಎರಡು ಉಪ ಸಮರಗಳ ಅಂತರ ಕೇವಲ ಎರಡೇ ವರ್ಷ!
ವಿಶೇಷವೆಂದರೆ, ಸದ್ಯ ಬಿಜೆಪಿ–ಜೆಡಿಎಸ್ ಮೈತ್ರಿ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿರುವ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಹಿಂದಿನ 2 ಉಪ ಚುನಾವಣೆಗಳಲ್ಲೂ ಅಭ್ಯರ್ಥಿಯಾಗಿದ್ದರು. ಈ ಸಲವು ಅವರ ಸ್ಪರ್ಧೆ ಖಚಿತವಾಗಿರುವುದರಿಂದ 3 ಉಪ ಚುನಾವಣೆಗಳಲ್ಲೂ ಸ್ಪರ್ಧಿಸಿದ ಏಕೈಕ ರಾಜಕಾರಣಿ ಅವರಾಗಲಿದ್ದಾರೆ.
‘ಸೈನಿಕ’ನಿಂದಲೇ ಶುರು: ಕ್ಷೇತ್ರದಲ್ಲಿ ಉಪ ಚುನಾವಣೆ ಪರ್ವ ಶುರುವಾಗಿದ್ದೆ ಯೋಗೇಶ್ವರ್ ಅವರಿಂದ. 2008ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸಿಪಿವೈ ಗೆದ್ದಿದ್ದರು. ಆಗ ಅತ್ಯಧಿಕ ಸ್ಥಾನಗಳನ್ನು ಪಡೆದ ಬಿಜೆಪಿಯು ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚಿಸಿತ್ತು. ಜೊತೆಗೆ ತನ್ನ ಬುಡ ಬಲಪಡಿಸಿಕೊಳ್ಳಲು ‘ಆಪರೇಷನ್ ಕಮಲ’ಕ್ಕೆ ಕೈ ಹಾಕಿತು.
ಆ ಅಲೆಗೆ ಸಿಲುಕಿದ ಯೋಗೇಶ್ವರ್, ಒಂದೇ ವರ್ಷಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರು. ಇದರಿಂದಾಗಿ 2009ರ ಆಗಸ್ಟ್‌ನಲ್ಲಿ ಕ್ಷೇತ್ರದಲ್ಲಿ ಮೊದಲ ಉಪ ಚುನಾವಣೆ ನಡೆಯಿತು. ಆಗ ಕಮಲದಿಂದಲೇ ಕಣಕ್ಕಿಳಿದಿದ್ದ ಯೋಗೇಶ್ವರ್, ಜೆಡಿಎಸ್ ಅಭ್ಯರ್ಥಿ ಎಂ.ಸಿ. ಅಶ್ವಥ್ ವಿರುದ್ಧ ಕೇವಲ 2,282 ಮತಗಳ ಅಂತರದಿಂದ ಸೋತರು. ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಮಾಜಿ ಸಚಿವ ವೆಂಕಟಪ್ಪ ಅವರ ಮೊಮ್ಮಗ ಟಿ.ಕೆ. ಯೋಗೇಶ್ ಮೂರನೇ ಸ್ಥಾನ ಪಡೆದರು.
ಎಂ.ಸಿ. ಅಶ್ವಥ್, ಕಾಂಗ್ರೆಸ್ ಮುಖಂಡ
ಉಪ ಚುನಾವಣೆಯಲ್ಲಿ ಗೆದ್ದಿದ್ದ ಅಶ್ವಥ್ ಸಹ ಒಂದೇ ವರ್ಷದ ಬಳಿಕ 2010ರಲ್ಲಿ ‘ಆಪರೇಷನ್ ಕಮಲ’ದ ಮೂಲಕ ಬಿಜೆಪಿಗೆ ಬಂದರು. ಇದರಿಂದಾಗಿ 2011ರ ಏಪ್ರಿಲ್‌ನಲ್ಲಿ ಎರಡನೇ ಉಪ ಚುನಾವಣೆ ಎದುರಾಗುತ್ತದೆ. ಆಗ ಮತ್ತೆ ಬಿಜೆಪಿಯಿಂದ ಅದೃಷ್ಟ ಪರೀಕ್ಷೆಗಿಳಿದ ಯೋಗೇಶ್ವರ್, ಜೆಡಿಎಸ್‌ನ ಸಿಂ.ಲಿಂ. ನಾಗರಾಜು ವಿರುದ್ಧ 17,803 ಮತಗಳ ಅಂತರದಿಂದ ಗೆದ್ದರು. ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ರಘುನಂದನ್ ರಾಮಣ್ಣ ಮೂರನೇ ಸ್ಥಾನ ಗಳಿಸಿದರು.
2023ರ ಸಾರ್ವತ್ರಿಕ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಗೆದ್ದಿದ್ದ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ, 2024ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಸ್ಪರ್ಧಿಸಿ ಗೆದ್ದ ಬಳಿಕ ತಮ್ಮ ಶಾಸಕ ಸ್ಥಾನಕ್ಕೆ ಜೂನ್ 14ರಂದು ರಾಜೀನಾಮೆ ಕೊಟ್ಟರು. ಅವರಿಂದ ತೆರವಾಗಿರುವ ಕ್ಷೇತ್ರವೀಗ ಮೂರನೇ ಉಪ ಚುನಾವಣೆಗೆ ಸಾಕ್ಷಿಯಾಗಿದೆ.
ಕ್ಷೇತ್ರಕ್ಕೆ 2009 ಮತ್ತು 2011ರಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಬಿಜೆಪಿ–ಜೆಡಿಎಸ್ ನಡುವೆಯೇ ಪ್ರಬಲ ಪೈಪೋಟಿ ಏರ್ಪಟ್ಟಿದೆ. ಒಮ್ಮೆ ಜೆಡಿಎಸ್ ಮತ್ತೊಮ್ಮೆ ಬಿಜೆಪಿ ಗೆದ್ದಿದೆ. ಈಗ ಎದುರಾಗಿರುವ ಚುನಾವಣೆಯಲ್ಲಿ ‘ಮೈತ್ರಿ’ಯಿಂದ ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯುವುದು ಬಹುತೇಕ ಅಂತಿಮವಾಗಿದೆ. ಹಾಗಾಗಿ ಯೋಗೇಶ್ವರ್ ಬಿಜೆಪಿಯಲ್ಲಿದ್ದರೂ ಟಿಕೆಟ್ ಸಿಗದೆ ಸ್ವತಂತ್ರ ಅಭ್ಯರ್ಥಿಯಾಗುವುದು ಖಚಿತವಾಗಿದ್ದು ಘೋಷಣೆಯಷ್ಟೇ ಬಾಕಿ ಇದೆ. ಇದರಿಂದಾಗಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.