
ಚನ್ನಪಟ್ಟಣ: ನಗರದ ಹಿಂದುಳಿದ ವರ್ಗಗಳ ಮಹಿಳಾ ವಸತಿ ನಿಲಯದಲ್ಲಿ ಶಿಕ್ಷಣ ಫೌಂಡೇಷನ್ ಸ್ವಯಂ ಸೇವಾ ಸಂಸ್ಥೆಯ ವತಿಯಿಂದ ವಿದ್ಯಾರ್ಥಿನಿಯರಿಗಾಗಿ ಹಮ್ಮಿಕೊಳ್ಳಲಾಗಿದ್ದ ಮೂರು ದಿನಗಳ ಕೌಶಲ್ಯ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭವು ಗುರುವಾರ ನಡೆಯಿತು.
ಸಾಹಿತಿ ಡಾ. ವಿಜಯ್ ರಾಂಪುರ ಮಾತನಾಡಿ, ‘ಇಂದಿನ ಸ್ಮರ್ಧಾತ್ಮಕ ಯುಗದಲ್ಲಿ ಕುಶಲತೆ ಮತ್ತು ಸೂಕ್ಷ್ಮ ಕಲಿಕೆಯಲ್ಲಿ ಆಸಕ್ತಿ ಬೆಳೆಸಿಕೊಂಡರೆ ಮಾತ್ರ ವಿದ್ಯಾರ್ಥಿಗಳ ಭವಿಷ್ಯದ ಬದುಕು ಉಜ್ವಲವಾಗುತ್ತದೆ’ ಎಂದು ಪ್ರತಿಪಾದಿಸಿದರು.
ಇಂದು ಕೌಶಲ್ಯಾಧಾರಿತ ಹಾಗೂ ತಾಂತ್ರಿಕ ಶಿಕ್ಷಣ ಮಹತ್ವ ಪಡೆದುಕೊಳ್ಳುತ್ತಿದೆ. ಈ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗಿವೆ. ವಿದ್ಯಾರ್ಥಿಗಳು ಕೌಶಲ್ಯ ತರಬೇತಿ ಪಡೆದುಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಇಂತಹ ತರಬೇತಿಗಳನ್ನು ವಿದ್ಯಾರ್ಥಿನಿಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸಂಸ್ಥೆಯ ಜಿಲ್ಲಾ ಸಂಯೋಜಕ ಯೋಗೇಶ್ ದ್ಯಾವಪಟ್ಟಣ ಮಾತನಾಡಿ, ಪ್ರಸ್ತುತ ಕೌಶಲ್ಯ ವೃದ್ಧಿಗಾಗಿ ವಿದ್ಯಾರ್ಥಿನಿಯರಿಗೆ ಗುಂಪು ಚರ್ಚೆ, ಕಾರ್ಯಾಗಾರ, ಬುದ್ಧಿ ಪ್ರದರ್ಶನ ಮತ್ತು ಕೈಚಳಕ ತರಬೇತಿಗಳ ಮೂಲಕ ಅನುಭವಾತ್ಮಕ ಕಲಿಕೆ ಒದಗಿಸಲಾಯಿತು. ಉದ್ಯಮಶೀಲತೆ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದರು.
ಸಂಸ್ಥೆಯ ತರಬೇತುದಾರ ಎಂ.ಎ. ಸುದರ್ಶನ್, ವಸತಿ ನಿಲಯದ ಮೇಲ್ವಿಚಾರಕಿ ಪ್ರಭಾವತಿ ಹಾಜರಿದ್ದರು. ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಪಿಯುಸಿ ಹಾಗೂ ಪದವಿ ಹಂತದ 70 ವಿದ್ಯಾರ್ಥಿನಿಯರಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.