ADVERTISEMENT

ಚಿಕ್ಕಮುದುವಾಡಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2022, 7:23 IST
Last Updated 24 ಏಪ್ರಿಲ್ 2022, 7:23 IST
ಚಿಕ್ಕಮುದುವಾಡಿ ಗ್ರಾಮದಲ್ಲಿ ಶನಿವಾರ ಶ್ರೀಲಕ್ಷ್ಮಿನರಸಿಂಹಸ್ವಾಮಿ ರಥೋತ್ಸವ ನಡೆಯಿತು
ಚಿಕ್ಕಮುದುವಾಡಿ ಗ್ರಾಮದಲ್ಲಿ ಶನಿವಾರ ಶ್ರೀಲಕ್ಷ್ಮಿನರಸಿಂಹಸ್ವಾಮಿ ರಥೋತ್ಸವ ನಡೆಯಿತು   

ಕನಕಪುರ: ತಾಲ್ಲೂಕಿನ ಕಸಬಾ ಹೋಬಳಿಯ ಚಿಕ್ಕಮುದುವಾಡಿ ಗ್ರಾಮದಲ್ಲಿ ಶ್ರೀಲಕ್ಷ್ಮಿನರಸಿಂಹಸ್ವಾಮಿ ಜಾತ್ರಾ ಮಹೋತ್ಸವ ಮತ್ತು ಬ್ರಹ್ಮ ರಥೋತ್ಸವ ಶನಿವಾರ ವಿಜೃಂಭಣೆಯಿಂದ ನೆರವೇರಿತು.

ಈ ಜಾತ್ರೆಗೆ ಐತಿಹಾಸಿಕ ಹಿನ್ನೆಲೆ ಇದೆ. ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನತೆ ಜೊತೆಗೂಡಿ ಜಾತ್ರಾ ಮಹೋತ್ಸವ ಆಚರಿಸುತ್ತಾರೆ. ಮಹೋತ್ಸವದಲ್ಲಿ ರಥೋತ್ಸವ, ಬಸವೇಶ್ವರಸ್ವಾಮಿ ಕೊಂಡೋತ್ಸವ, ಗ್ರಾಮ ದೇವತೆ ಮಾರಮ್ಮ ದೇವಿ ಉತ್ಸವ ನಡೆಯಿತು.

ಮಧ್ಯಾಹ್ನ ಶಾಲಾ ಆವರಣದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಚಿಕ್ಕಮುದುವಾಡಿ ಗ್ರಾಮಸ್ಥರಿಂದ ಸಾಮೂಹಿಕವಾಗಿ ಅಡುಗೆ ತಯಾರಿಸಿ ಬಂದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಭಕ್ತರೊಬ್ಬರು ಲಾಡುಗಳನ್ನು ವಿತರಿಸಿದರು.

ADVERTISEMENT

ಡೊಳ್ಳುಕುಣಿತ, ವೀರಗಾಸೆ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಸಾಂಸ್ಕೃತಿಕ ವೈಭವದೊಂದಿಗೆ ಕಲಾ ಪದರ್ಶನ ನಡೆಸಿದವು. ಜಾತ್ರೆ ಅಂಗವಾಗಿ ದೇವಾಲಯ, ಮಹಾತೇರು, ಮಹಾದ್ವಾರಕ್ಕೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು.

ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ದೇವರ ಒಕ್ಕಲು ಜನರು ತೇರಿಗೆ ಬಾಳೆಹಣ್ಣು, ಜವನ ಎಸೆದು ಭಕ್ತಿ ಸಮರ್ಪಿಸಿದರು.ರಸ್ತೆಯುದ್ದಕ್ಕೂ ಅಂಗಡಿ ಮುಂಗಟ್ಟುಗಳನ್ನು ಜೋಡಿಸಿದ್ದು ವರ್ತಕರು ಭರ್ಜರಿ ವ್ಯಾಪಾರ ಮಾಡಿದರು. ಹರಕೆ ಹೊತ್ತ ಭಕ್ತರು ಅರವಟಿಗೆ ತೆರೆದು ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಿದರು.

ಭಾನುವಾರ ರಾತ್ರಿ ಶ್ರೀಲಕ್ಷ್ಮಿನರಸಿಂಹಸ್ವಾಮಿ, ಬಸವೇಶ್ವರಸ್ವಾಮಿ, ಸಿದ್ದಲಿಂಗೇಶ್ವರ ಸ್ವಾಮಿಯ ಹೂವಿನ ಪಲ್ಲಕ್ಕಿ ಉತ್ಸವ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.