ADVERTISEMENT

ರಾಮನಗರ: ಮಕ್ಕಳ ನಾಪತ್ತೆ, ‘ಪೋಕ್ಸೊ’ ತಡೆಗೆ ಒತ್ತು

ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯಿಂದ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 2:17 IST
Last Updated 12 ಜುಲೈ 2025, 2:17 IST
<div class="paragraphs"><p>ರಾಮನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ಜರುಗಿತು.</p></div>

ರಾಮನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ಜರುಗಿತು.

   

ರಾಮನಗರ: ‘ಮಹಿಳೆಯರು ಮತ್ತು ಮಕ್ಕಳ ನಾಪತ್ತೆ, ಅಪಹರಣ ಹಾಗೂ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕಿದೆ. ಈ ನಿಟ್ಟಿನಲ್ಲಿ ರಾಜಧಾನಿಗೆ ಹೊಂದಿಕೊಂಡಂತಿರುವ ಬೆಂಗಳೂರು ದಕ್ಷಿಣ ಜಿಲ್ಲೆಗೆ ಸಂಬಂಧಿಸಿದಂತೆ, ಪ್ರಗತಿ ಪರಿಶೀಲನೆ ಸಭೆ ನಡೆಸಿ ಅಗತ್ಯ ಸಲಹೆ–ಸೂಚನೆ ನೀಡಲಾಯಿತು’ ಎಂದು ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎನ್.ಎಚ್. ಕೋನರಡ್ಡಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಮಿತಿಯು ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಪಹರಣ ಜಾಲಕ್ಕೆ ಬ್ರೇಕ್‌ ಹಾಕಿ ಮಹಿಳಾ ದೌರ್ಜನ್ಯ ತಗ್ಗಿಸಬೇಕಿದೆ. ತಳಮಟ್ಟದಲ್ಲೇ ಇದಕ್ಕೆ ಕಾರ್ಯತಂತ್ರ ರೂಪಿಸಿ ಕಾರ್ಯಾಚರಣೆ ನಡೆಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು’ ಎಂದರು.

ADVERTISEMENT

‘ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕರ ನೇಮಕಾತಿ, ಸ್ವಂತ ನಿವೇಶನಲ್ಲಿ ಅಂಗನವಾಡಿ ನಿರ್ಮಾಣ, ತೆರೆದ ಮನೆ ಕಾರ್ಯಕ್ರಮಗಳನ್ನು ಆಯೋಜಿಸಿ ವಿದ್ಯಾರ್ಥಿನಿಯರಲ್ಲಿ ಜಾಗೃತಿ ಮೂಡಿಸುವ ಬಗ್ಗೆ, ಅಪಹರಣ ಪ್ರಕರಣಗಳನ್ನು ಪೊಲೀಸರು ಶೀಘ್ರ ಪತ್ತೆ ಮಾಡುವ ಬಗ್ಗೆ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ’ ಎಂದು ತಿಳಿಸಿದರು.

‘ಗೃಹಲಕ್ಷ್ಮಿ ಯೋಜನೆ ಅನುಷ್ಠಾನಕ್ಕಾಗಿ ಸಂಬಂಧಿಸಿದ ಇಲಾಖೆಗೆ ರಾಜ್ಯ ಸರ್ಕಾರ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ನೀಡುತ್ತಿದೆ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಈ ಇಲಾಖೆ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದಾರೆ. ಇಲಾಖೆಯನ್ನು ಮತ್ತಷ್ಟು ಬಲಪಡಿಸಲು ಸಮಿತಿಯು ಅಗತ್ಯವಾದ ಸಲಹೆಗಳನ್ನು ನೀಡುವ ಕೆಲಸ ಮಾಡುತ್ತಿದೆ. ಪೌಷ್ಠಿಕ ಆಹಾರ ಪೂರೈಕೆ, ಬಾಲವಿಕಾಸ ಮಂದಿರ, ಅನಾಥಾಶ್ರಮಗಳು ಇಲಾಖೆಯ ವ್ಯಾಪ್ತಿಗೆ ಬರುತ್ತವೆ. ಈ ಕುರಿತು ಸಮಗ್ರವಾಗಿ ಚರ್ಚಿಸಿ ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಲಿದೆ’ ಎಂದರು.

‘ಜಿಲ್ಲೆಯಲ್ಲಿ 104 ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿವೆ. ಕಾಣೆಯಾದವರ ಪ್ರಕರಗಳನ್ನು ಪೊಲೀಸರು ಬಹುತೇಕ ಪತ್ತೆ ಹಚ್ಚಿದ್ದಾರೆ. ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆಯು ಪರಸ್ಪರ ಸಹಯೋಗದಲ್ಲಿ ಶಾಲಾ– ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

‘ಸ್ಥಳೀಯ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರ ಕೋರಿಕೆ ಮೇರೆಗೆ ಜಿಲ್ಲೆಯಲ್ಲಿ ಸಮಿತಿ ಸಭೆ ನಡೆಸಲಾಯಿತು. ಜಿಲ್ಲಾ ಮಟ್ಟದಲ್ಲಿ ನಡೆದಿರುವ ಮೊದಲ ಸಭೆ ಇದಾಗಿದ್ದು, ಮುಂದೆ ಬೇರೆ ಜಿಲ್ಲೆಗಳಲ್ಲೂ ಸಮಿತಿ ಸಭೆ ನಡೆಸಲಿದೆ’ ಎಂದು ಪ್ರಶ್ನೆಯೊಂದಕ್ಕೆ ಕೋನರಡ್ಡಿ ಪ್ರತಿಕ್ರಿಯಿಸಿದರು.

ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್ ಜೈನ್, ಕೇಂದ್ರ ವಲಯದ ಐಜಿಪಿ ಲಾಭೂ ರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶಿವಕುಮಾರ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮುನೇಗೌಡ ಸೇರಿದಂತೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

ಸಮಿತಿ ಸಭೆಯಲ್ಲಿ ನಡೆದ ಚರ್ಚೆ ಆಧರಿಸಿ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣ ಹಾಗೂ ರಕ್ಷಣೆ ಕುರಿತು ಸರ್ಕಾರಕ್ಕೆ ಕೆಲ ಶಿಫಾರಸುಗಳನ್ನು ಮಾಡಲಾಗುವುದು. ಜೊತೆಗೆ ಇಲಾಖೆ ಸಚಿವರೊಂದಿಗೂ ಸಭೆ ನಡೆಸಲಾಗುವುದು
ಎನ್.ಎಚ್. ಕೋನರಡ್ಡಿ ಅಧ್ಯಕ್ಷ ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ

ಸಭೆಗೆ 11 ಸದಸ್ಯರ ಗೈರು:

ಜಿಲ್ಲಾ ಮಟ್ಟದಲ್ಲಿ ನಡೆದ ಮೊದಲ ಸಭೆಗೆ ಸಮಿತಿಯ 20 ಸದಸ್ಯರ ಪೈಕಿ 11 ಮಂದಿ ಗೈರಾದರು. ಸಮಿತಿ ಅಧ್ಯಕ್ಷರೂ ಆದ ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಸದಸ್ಯರಾದ ರಾಮನಗರ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಚಿಕ್ಕಪೇಟೆಯ ಉದಯ ಬಿ. ಗರುಡಾಚಾರ್ ಕೋಲಾರದ ಕೊತ್ತೂರು ಜಿ. ಮಂಜುನಾಥ್ ದೇವದುರ್ಗದ ಕರೆಮ್ಮ ನಾಯ್ಕ ಗುರುಮಿಠಕಲ್‌ನ ಶರಣಗೌಡ ಕಂದಕೂರು ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಪಾಟೀಲ ಶಾಂತರಾಮ ಬುಡ್ನಸಿದ್ದಿ ಕೆ. ವಿವೇಕಾನಂದ ಸೇರಿ 9 ಮಂದಿ ಮಾತ್ರ ಸಭೆಯಲ್ಲಿ ಭಾಗವಹಿಸಿದ್ದರು. ಉಳಿದ ಸದಸ್ಯರಾದ ಮೂಡುಬಿದಿರೆ ಶಾಸಕ ಉಮನಾಥ್ ಎ. ಕೋಟ್ಯಾನ್ ಮಂಗಳೂರು ಉತ್ತರದ ಡಾ. ವೈ. ಭರತ್ ಶೆಟ್ಟಿ ಮೂಡಿಗೆರೆಯ ನಯನಾ ಮೋಟಮ್ಮ ಚಿಕ್ಕಬಳ್ಳಾಪುರದ ಪ್ರದೀಪ್ ಈಶ್ವರ್ ಬೇಲೂರಿನ ಎಚ್.ಕೆ. ಸುರೇಶ್ (ಹುಲ್ಲಳ್ಳಿ ಸುರೇಶ್) ಮಹದೇವಪುರದ ಮಂಜುಳಾ ಅರವಿಂದ ಲಿಂಬಾವಳಿ ಕೆ.ಆರ್‌. ನಗರದ ಡಿ. ರವಿಶಂಕರ್ ಸಿಂದಗಿಯ ಅಶೋಕ ಮನಗೂಳಿ ಕುಡಚಿಯ ಮಹೇಂದ್ರ ಕಲ್ಲಪ್ಪ ತಮ್ಮಣ್ಣನವರ ಹಾಗೂ ವಿಧಾನ ಪರಿಷತ್ ಸದಸ್ಯರಾದ ಶರಣಗೌಡ ಭಯ್ಯಾಪುರ ವೈ.ಎಂ. ಸತೀಶ್ ಸೇರಿ 11 ಮಂದಿ ಸಭೆಗೆ ಗೈರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.