ADVERTISEMENT

ರಾಮನಗರ| ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿ: ಕೆ.ಎನ್. ನಾಗಣ್ಣ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 2:27 IST
Last Updated 18 ಅಕ್ಟೋಬರ್ 2025, 2:27 IST
ರಾಮನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ಎನ್. ನಾಗಣ್ಣ ಮಾತನಾಡಿದರು. ಸದಸ್ಯ ಎಸ್. ಮಂಜು, ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಇದ್ದಾರೆ
ರಾಮನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ಎನ್. ನಾಗಣ್ಣ ಮಾತನಾಡಿದರು. ಸದಸ್ಯ ಎಸ್. ಮಂಜು, ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಇದ್ದಾರೆ   

ರಾಮನಗರ: ‘ಮಕ್ಕಳು ದೇಶದ ಆಸ್ತಿ. ಅವರ ರಕ್ಷಣೆ ಪ್ರತಿಯೊಬ್ಬರ ಹೊಣೆ. ಗ್ರಾಮ ಮಟ್ಟದಿಂದಲೇ ಮಕ್ಕಳ ರಕ್ಷಣೆಗೆ ಕ್ರಮ ಕೈಗೊಳ್ಳಲು ಎಲ್ಲಾ ಇಲಾಖೆಗಳು ಕೈಜೋಡಿಸಿ, ಸಮನ್ವಯತೆಯಿಂದ ಕೆಲಸ ಮಾಡಬೇಕು’ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ಎನ್. ನಾಗಣ್ಣ ನಿರ್ದೇಶನ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಗದ ವತಿಯಿಂದ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಸಾಮಾಜಿಕ-ಶೈಕ್ಷಣಿಕವಾಗಿ ಮುಂದುವರಿದ, ಆರೋಗ್ಯಯುತ, ಉತ್ತಮ ಮೌಲ್ಯಗಳನ್ನು ಹೊಂದಿರುವ ಮಕ್ಕಳನ್ನು ಸಮಾಜಕ್ಕೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ’ ಎಂದರು.

‘ಇತ್ತೀಚೆಗೆ ಮಕ್ಕಳು ಸೈಬರ್ ಕ್ರೈಂ, ಆನ್‌ಲೈನ್ ಲೈಂಗಿಕ ದೌರ್ಜನ್ಯ, ಹದಿಹರೆಯದಲ್ಲೇ ಗರ್ಭ ಧರಿಸುವಿಕೆ, ಮಾದಕ ವ್ಯಸನಗಳಿಗೆ ಒಳಗಾಗುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇವುಗಳನ್ನು ತಡೆಗಟ್ಟಲು ಮಕ್ಕಳಿಗೆ ಉತ್ತಮ ಸಂಸ್ಕಾರ ಹಾಗೂ ಮೌಲ್ಯಗಳನ್ನು ಮನೆ ಮತ್ತು ಶಾಲಾ–ಕಾಲೇಜುಗಳಲ್ಲಿ ಕಲಿಸಬೇಕು’ ಎಂದರು.

ADVERTISEMENT

‘ಸಾರ್ವಜನಿಕ-ಖಾಸಗಿ-ಸಹಭಾಗಿತ್ವದ ಮಾದರಿಯಲ್ಲಿ ಅಳವಡಿಸಿಕೊಂಡು ಸಿಎಸ್‌ಆರ್ ಅನುದಾನದಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಕ್ರಮ ವಹಿಸಬೇಕು. 2009ರ ಶಿಕ್ಷಣ ಹಕ್ಕು ಕಾಯ್ದೆಯನ್ವಯ ಖಾಸಗಿ ಶಾಲೆಗಳು ಸರ್ಕಾರದ ವ್ಯಾಪ್ತಿಗೆ ಬರಲಿದೆ’ ಎಂದು ತಿಳಿಸಿದರು.

‘ಶಿಕ್ಷಣ ಇಲಾಖೆಯ ಅಧಿಕಾರಿಗಳು ಖಾಸಗಿ ಶಾಲೆಗಳಿಗೆ ನಿರಂತರವಾಗಿ ಭೇಟಿ ನೀಡಿ, ಮಕ್ಕಳ ಸುರಕ್ಷತೆಗೆ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಬೇಕು. ಸರ್ಕಾರಿ ಶಾಲೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಶಿಕ್ಷಕರನ್ನು ನೇಮಿಸಿಕೊಳ್ಳುವಾಗ ಮಕ್ಕಳ ಸುರಕ್ಷತಾ ದೃಷ್ಠಿಯಿಂದ, ಶಿಕ್ಷಕರು ಕಡ್ಡಾಯವಾಗಿ ಪೊಲೀಸರಿಂದ ಪರಿಶೀಲನೆ ಪ್ರಮಾಣಪತ್ರ ಪಡೆದ ನಂತರವೇ ಶಿಕ್ಷಕರ ಹುದ್ದೆಗೆ ನೇಮಿಸಿಕೊಳ್ಳಬೇಕು’ ಎಂದು ಸೂಚಿಸಿದರು.

‘ಇತ್ತೀಚೆಗೆ ಮಕ್ಕಳು ಮೊಬೈಲ್ ಗೀಳಿಗೆ ಒಳಗಾಗಿದ್ದಾರೆ. ಅಪರಾದ ಕೃತ್ಯಗಳಲ್ಲೂ ಭಾಗಿಯಾಗುತ್ತಿದ್ದಾರೆ. ಮಕ್ಕಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಮಕ್ಕಳಲ್ಲಿ ಆತ್ಮಸ್ಥೈರ್ಯ ಕುಂಠಿತವಾಗುತ್ತಿದೆ. ಆಪ್ತ ಸಮಾಲೋಚನೆ ಮೂಲಕ ಈ ಸಮಸ್ಯೆಗಳನ್ನು ನಾವು ಪರಿಹರಿಸಬೇಕಿದೆ’ ಎಂದು ತಿಳಿಸಿದರು.

ಆಯೋಗದ ಸದಸ್ಯ ಎಸ್. ಮಂಜು ಮಾತನಾಡಿ, ‘ಶಾಲಾ-ಕಾಲೇಜುಗಳು, ಹಾಸ್ಟೆಲ್‌ಗಳು, ಅಂಗನವಾಡಿ ಕಟ್ಟಡಗಳ ಮೇಲೆ ವಿದ್ಯುತ್ ತಂತಿ ಹಾದುಹೋದಲ್ಲಿ ಶೀಘ್ರವಾಗಿ ತೆರವುಗೊಳಿಸಲು ಬೆಸ್ಕಾಂ ಕ್ರಮ ವಹಿಸಬೇಕು. ಕೆರೆಗಳು, ನಾಲೆಗಳ ಬದಿಯಲ್ಲಿ ಅಂಗನವಾಡಿ ಕೇಂದ್ರಗಳು, ಶಾಲೆಗಳಿದ್ದಲ್ಲಿ ಸುರಕ್ಷತಾ ಕ್ರಮ ಅನುಸರಿಸಬೇಕು’ ಎಂದರು.

‘ಶಾಲೆಗಳು, ಹಾಸ್ಟೆಲ್‌ಗಳಲ್ಲಿ ಕಡ್ಡಾಯವಾಗಿ ಸಲಹಾ ಪೆಟ್ಟಿಗೆಗಳನ್ನು ಇರಿಸಬೇಕು. ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು ಸ್ಯಾನಿಟರಿ ಪ್ಯಾಡ್‌ಗಳನ್ನು ಕಡ್ಡಾಯವಾಗಿ ನೀಡಬೇಕು. ನಿರಂತರವಾಗಿ ಶಾಲೆಗೆ ಗೈರು ಹಾಜರಾದ ಮಕ್ಕಳ ಮನೆಗೆ ಭೇಟಿ ನೀಡಿ ಕಾರಣ ಪತ್ತೆ ಹಚ್ಚಿ ಮತ್ತೆ ಶಾಲೆಗೆ ಕರೆತರಲು ಕ್ರಮ ವಹಿಸಬೇಕು’ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಧನರಾಜ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಚಂದ್ರಯ್ಯ, ಡಿವೈಎಸ್‌ಪಿ ಬಿ.ಎನ್. ಶ್ರೀನಿವಾಸ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಜಿನಿ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

‘ಹಕ್ಕುಗಳ ಜಾಗೃತಿಗೆ ತೆರೆದ ಮನೆ ಆಯೋಜಿಸಿ’

ಮಕ್ಕಳ ಹಕ್ಕುಗಳು ಹಾಗೂ ಪೋಕ್ಸೊ ಕಾಯ್ದೆ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಲು ಶಾಲೆಗಳಲ್ಲಿ ಪ್ರತಿ ಗುರುವಾರ ತೆರೆದ ಮನೆ ಕಾರ್ಯಕ್ರಮ ಆಯೋಜಿಸಬೇಕು. ಶಾಲಾ-ಕಾಲೇಜುಗಳು ಹಾಸ್ಟೆಲ್‌ಗಳು ಅಂಗನವಾಡಿಗಳು ಆಸ್ಪತ್ರೆಗಳು ಗ್ರಾಮ ಪಂಚಾಯಿತಿ ಕಚೇರಿಗಳು ಸರ್ಕಾರಿ ಕಚೇರಿಗಳು ಸರ್ಕಾರಿ ಬಸ್‌ಗಳಲ್ಲಿ ನಿಲ್ದಾಣಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ–1098 ಭಿತ್ತಿಪತ್ರಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕವು 2016ರಲ್ಲಿ ಮಕ್ಕಳ ಸುರಕ್ಷತಾ ನೀತಿ ಜಾರಿಗೆ ತಂದಿದೆ. ಆದರೆ ಇಂದಿಗೂ ಕಾಯ್ದೆ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕು’ ಎಂದು ಕೆ.ಎನ್. ನಾಗಣ್ಣ ಸೂಚನೆ ನೀಡಿದರು. ನವೆಂಬರ್‌ನಲ್ಲೇ ಮಕ್ಕಳ ಗ್ರಾಮಸಭೆ ನವೆಂಬರ್ ತಿಂಗಳಿನಲ್ಲಿಯೇ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಮಕ್ಕಳ ಗ್ರಾಮ ಸಭೆ ಆಯೋಜಿಸಬೇಕು. ಗ್ರಾಮಮಟ್ಟದ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿ ಆಯೋಜಿಸಬೇಕು. ಗ್ರಾಮ ಪಂಚಾಯಿತಿ ಅನುದಾನದಲ್ಲಿ ಶೇ 5ರಷ್ಟು ಅನುದಾನವನ್ನು ಅಂಗವಿಲಕ ಮಕ್ಕಳ ಅಭಿವೃದ್ಧಿಗೆ ಬಳಸಬೇಕು. ಶೇ 2ರಷ್ಟು ಅನುದಾನವನ್ನು ಮಕ್ಕಳ ಕ್ರೀಡಾ ಚಟುವಟಿಕೆಗಳಿಗೆ ಬಳಸಬೇಕು ಎಂದು ಜಿಲ್ಲಾ ಪಂಚಾಯತಿ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ನಾಗಣ್ಣ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.