ADVERTISEMENT

ರಾಮನಗರ: ಗಮನ ಸೆಳೆದ ಮಕ್ಕಳ ಸಂತೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2023, 5:11 IST
Last Updated 19 ಡಿಸೆಂಬರ್ 2023, 5:11 IST
ರಾಮನಗರ ತಾಲ್ಲೂಕಿನ ಹೆಬ್ಬಕೋಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಮಕ್ಕಳ ಸಂತೆಯನ್ನು ಗಣ್ಯರು ಉದ್ಘಾಟಿಸಿದರು
ರಾಮನಗರ ತಾಲ್ಲೂಕಿನ ಹೆಬ್ಬಕೋಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಮಕ್ಕಳ ಸಂತೆಯನ್ನು ಗಣ್ಯರು ಉದ್ಘಾಟಿಸಿದರು   

ರಾಮನಗರ: ತಾಲ್ಲೂಕಿನ ಹೆಬ್ಬಕೋಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ, ಶಾಲಾ ಗ್ರಾಹಕರ ಕ್ಲಬ್ ವತಿಯಿಂದ ಮಕ್ಕಳ ಸಂತೆ ಜರುಗಿತು. ವಿದ್ಯಾರ್ಥಿಗಳು ವಿವಿಧ ಬಗೆಯ ತರಕಾರಿ ಹಾಗೂ ಪದಾರ್ಥಗಳನ್ನು ಶಾಲಾವರಣದಲ್ಲಿ ಮಾರಾಟ ಮಾಡುವ ಮೂಲಕ ಗಮನ ಸೆಳೆದರು.

ಶಾಲಾ ಆವರಣದಲ್ಲಿ ನಡೆದ ಸಂತೆಯನ್ನು ಕಣ್ತುಂಬಿಕೊಂಡ ಗ್ರಾಮಸ್ಥರು, ಪಂಚಾಯಿತಿ ಸದಸ್ಯರು, ಎಸ್‌ಡಿಎಂಸಿ ಸದಸ್ಯರು, ಒಲಿಂಪಸ್ ಗ್ರೂಪ್ ಆಫ್ ಹಾಸ್ಪಿಟಲ್ ವೈದ್ಯರು ಹಾಗೂ ಶಾಲಾ ಶಿಕ್ಷಕರು ವಿದ್ಯಾರ್ಥಿಳಿಂದ ತರಕಾರಿ, ಸೊಪ್ಪು, ಹಣ್ಣುಗಳು, ಪಾನಿಪುರಿ, ಚುರುಮುರಿ, ಎಳನೀರು, ಜ್ಯೂಸ್, ಜಾಮೂನು ಸೇರಿದಂತೆ ತರಹೇವಾರಿ ತಿನಿಸುಗಳನ್ನು ಖರೀದಿಸಿ ಸವಿದರು. ಮಕ್ಕಳ ಸಂತೆಯಲ್ಲಿ ಮಾರಾಟಕ್ಕಿದ್ದ ಹಸು, ಮೇಕೆ ಹಾಗೂ ಪಾರಿವಾಳಗಳು ಗಮನ ಸೆಳೆದವು.

‘ಮಕ್ಕಳಿಗೆ ವ್ಯಾಪಾರ–ವಹಿವಾಟು ಹಾಗೂ ಗ್ರಾಮೀಣ ಭಾಗದಲ್ಲಿ ನಡೆಯುವ ಸಂತೆ ಹೇಗಿರುತ್ತದೆ ಎಂಬುದು ಸ್ವತಃ ಅನುಭವವಾಗಬೇಕು ಎಂಬ ಉದ್ದೇಶದಿಂದ ಮಕ್ಕಳ ಸಂತೆ ಆಯೋಜಿಸಲಾಗಿದೆ. ಇಂತಹ ಪ್ರಾಯೋಗಿಕ ಚಟುವಟಿಕೆಗಳಿಂದ ಅವರಲ್ಲಿ ಕಲಿಕಾಸಕ್ತಿ ಹೆಚ್ಚುವ ಜೊತೆಗೆ, ಜ್ಞಾನವೂ ವೃದ್ಧಿಯಾಗುತ್ತದೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಎಚ್‌.ಡಿ. ನಾರಾಯಣ ಹೇಳಿದರು.

ಆಯುರ್ವೇದ ಆಸ್ಪತ್ರೆ ಡಾ. ಕೋಮಲ, ಗ್ರಾಮ ಪಂಚಾಯಿತಿ ಸದಸ್ಯರಾದ ಪುನೀತ್ ಕುಮಾರ್ ಹಾಗೂ ಶಿಕ್ಷಕರ ಮಾರ್ಗದರ್ಶನದ ಮೇರೆಗೆ ಸಂತೆ ಯಶಸ್ವಿಯಾಗಿ ಜರುಗಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.