ADVERTISEMENT

ಮಾಚಿದೇವರ ಗುಡಿಯ ಸುತ್ತ ಸ್ವಚ್ಛತೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 10:25 IST
Last Updated 11 ಫೆಬ್ರುವರಿ 2020, 10:25 IST
ಮಾಗಡಿ ಗೌರಮ್ಮನಕೆರೆ ಬಳಿ ಇರುವ ಮಾಚಿದೇವ ಮಡಿವಾಳರ ಸ್ಮಾರಕ ಸ್ವಚ್ಛತೆಗೊಳಿಸಲಾಯಿತು.
ಮಾಗಡಿ ಗೌರಮ್ಮನಕೆರೆ ಬಳಿ ಇರುವ ಮಾಚಿದೇವ ಮಡಿವಾಳರ ಸ್ಮಾರಕ ಸ್ವಚ್ಛತೆಗೊಳಿಸಲಾಯಿತು.   

ಮಾಗಡಿ: ಕಲ್ಯಾಣ ಕ್ರಾಂತಿಯ ನಂತರ ದಕ್ಷಿಣದ ಕಡೆಗೆ ಸಾಗಿಬಂದು, ಗೌರಮ್ಮ ಕೆರೆಯ ಬಳಿ ನೆಲೆನಿಂತ ನೆನಪಿಗಾಗಿ ನಿರ್ಮಿಸಿದ್ದ ಮಾಚಿದೇವ ಮಡಿವಾಳರ ಗುಡಿಯನ್ನು ದುರಸ್ತಿ ಪಡಿಸಲಾಗುವುದು ಎಂದು ತಾಲ್ಲೂಕು ಮಾಚಿದೇವ ಮಡಿವಾಳರ ಸಂಘದ ಅಧ್ಯಕ್ಷ ಶಿವಣ್ಣ ಕಲ್ಲೂರು ತಿಳಿಸಿದರು.

ಸಂಘದ ವತಿಯಿಂದ ಸೋಮವಾರ ಮಾಚಿದೇವ ದೇವಾಲಯದ ಸುತ್ತ ಬೆಳೆದಿದ್ದ ಮುಳ್ಳಿನ ಪೊದೆ ತೆಗೆದು ಸ್ವಚ್ಛತೆ ನಡೆಸಿ ಅವರು ಮಾತನಾಡಿದರು.

ಮಡಿವಾಳರ ಚಾರಿತ್ರಿಕ ಸ್ಮಾರಕವನ್ನು ಸ್ಥಳೀಯ ಜನಪದರು, ಮಾಚಿದೇವರ ಗದ್ದುಗೆ, ಮಡಿವಾಳರ ಮಡಿಕಟ್ಟೆ, ಎಂದು ಕರೆದು ಪಾವಿತ್ರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ಹೊಯ್ಸಳರ 3 ನೇ ವೀರಬಲ್ಲಾಳರಾಯನ ಆಳ್ವಿಕೆಯಲ್ಲಿ ದೇವಾಲಯದ ದುರಸ್ತಿ ಪಡಿಸಿ, ದೀಪಧೂಪಕ್ಕೆ ಗೌರಮ್ಮನ ಕೆರೆಯ ಕೆಳಗೆ ಎರಡು ಎಕೆರೆ ಭೂದಾನ ಮಾಡಿರುವ ಬಗ್ಗೆ ದಾಖಲೆಗಳು ತಿಳಿಸಿವೆ. ಗಿಡಗಂಟಿ ಮುಳ್ಳಿನ ಪೊದೆ ಬೆಳೆದು ಶಿಥಿಲವಾಗಿದ್ದ ಮಡಿವಾಳರ ಸ್ಮಾರಕವನ್ನು ದುರಸ್ತಿ ಪಡಿಸಿ ಮುಂದಿನ ಪೀಳಗೆಗೆ ಉಳಿಸುವ ಯೋಜನೆ ರೂಪಿಸಲಾಗಿದೆ ಎಂದರು.

ADVERTISEMENT

ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶ್ರೀನಿವಾಸ್‌, ಶ್ರೀನಿವಾಸ ರಾಜು, ಶಿವಣ್ಣ, ಗಿರೀಶ್‌, ಆನಂದು, ಜಿ.ಕೆ. ಚಂದ್ರಶೇಖರ್‌, ಚಂದ್ರು ಮಾಚಿದೇವ ಮಡಿವಾಳರ ಗುಡಿಯ ಮಹತ್ವದ ಬಗ್ಗೆ ತಿಳಿಸಿದರು. ಸಂಘದ ಪದಾಧಿಕಾರಿಗಳು ಇದ್ದರು. ಜೆಸಿಬಿ ಬಳಸಿ, ಸ್ವಚ್ಛಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.