ADVERTISEMENT

‘ಸಹಕಾರ ಬ್ಯಾಂಕ್‌ಗಳ ಉತ್ತಮ ಸೇವೆ’

ಬರಡನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 14:20 IST
Last Updated 15 ಫೆಬ್ರುವರಿ 2020, 14:20 IST
ಬರಡನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗಿರೀಶ್‌, ಉಪಾಧ್ಯಕ್ಷೆ ಸಾವಿತ್ರಮ್ಮ ಮತ್ತು ನಿರ್ದೇಶಕರು ಇದ್ದರು
ಬರಡನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗಿರೀಶ್‌, ಉಪಾಧ್ಯಕ್ಷೆ ಸಾವಿತ್ರಮ್ಮ ಮತ್ತು ನಿರ್ದೇಶಕರು ಇದ್ದರು   

ಕನಕಪುರ: ಕೃಷಿ ಆಧಾರಿತ ಸಾಲ ಮತ್ತು ಸವಲತ್ತುಗಳನ್ನು ರೈತರಿಗೆ ತಲುಪಿಸಲು ಪ್ರಾರಂಭಗೊಂಡು ಸಹಕಾರ ಸಂಘಗಳು ಇಂದು ಬ್ಯಾಂಕ್‌ಗಳಾಗಿ ಅಭಿವೃದ್ಧಿಯಾಗುತ್ತಿವೆ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ ಹೇಳಿದರು.

ಇಲ್ಲಿನ ಬರಡನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಶನಿವಾರ ನಡೆದ ಸಂಘದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಆರ್ಥಿಕ ಮುಗ್ಗಟ್ಟಿನಿಂದ ಸಂಕಷ್ಟಕ್ಕೆ ಸಿಲುಕಿದ್ದ ಸಹಕಾರ ಸಂಘಗಳು ನಿಧಾನವಾಗಿ ಚೇತರಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿಯಾಗುತ್ತಿವೆ. ಸ್ತ್ರೀಶಕ್ತಿ ಗುಂಪುಗಳಿಗೆ ಸಾಲ, ಕಿಸಾನ್‌ ಸಾಲ, ಗೃಹಲಕ್ಷ್ಮಿ ಯೋಜನೆಯಡಿ ಒಡವೆ ಸಾಲ, ಸಾಲ ಯೋಜನೆಯ ಮೂಲಕ ಸಂಘವು ಅಭಿವೃದ್ದಿಯಾಗುತ್ತಿವೆ ಎಂದರು.

ADVERTISEMENT

ರೈತರು ಅಲ್ಪಾವಧಿ ಸಾಲವನ್ನು ಪಹಣಿ ಮೇಲೆ ಪಡೆಯುವಾಗ ತಮ್ಮ ಎಲ್ಲ ಭೂಮಿಯ ಪಹಣಿಯನ್ನು ಕೊಟ್ಟರೆ ಬೆಳೆ ಸಾಲದ ಜತೆಗೆ ಒಡವೆ ಸಾಲವನ್ನು ಶೇಕಡ 3 ರ ಬಡ್ಡಿದರದಲ್ಲಿ ಪಡೆಯಬಹುದಾಗಿದೆ. ಸ್ತ್ರೀ ಶಕ್ತಿ ಸಂಘಕ್ಕೆ ₹10 ಲಕ್ಷದವರೆಗೂ ಸಾಲ ದೊರೆಯುತ್ತದೆ. ಇದರಲ್ಲಿ ಶೂನ್ಯ ಬಡ್ಡಿಯಲ್ಲಿ ₹5 ಲಕ್ಷ, ಉಳಿದ ₹5 ಲಕ್ಷ ವಾರ್ಷಿಕ 12ರ ಬಡ್ಡಿದರದಲ್ಲಿ ಪಡೆಯಬಹುದಾಗಿದೆ ಎಂದರು.

ಸಹಕಾರ ಸಂಘಕ್ಕೆ 5 ವರ್ಷಗಳ ಅವಧಿಗೆ ಆಯ್ಕೆಯಾಗಿ ಬಂದಿರುವ ನೂತನ ಆಡಳಿತ ಮಂಡಳಿ ಮತ್ತು ಹೊಸದಾಗಿ ಆಯ್ಕೆಯಾಗಿರುವ ಅಧ್ಯಕ್ಷ-ಉಪಾಧ್ಯಕ್ಷರು ಉತ್ತಮವಾಗಿ ಕೆಲಸ ಮಾಡಿ, ರೈತರಿಗೆ ಸಾಲ ಸೌಲಭ್ಯಗಳನ್ನು ಕೊಡಿಸಿ ರೈತರಿಗೆ ನೆರವಾಗಿ ಎಂದು ಕಿವಿಮಾತು ಹೇಳಿದರು.

ನೂತನ ಅಧ್ಯಕ್ಷ ಗಿರೀಶ್‌ ಮಾತನಾಡಿ, ಈ ಸಹಕಾರ ಸಂಘವನ್ನು ಉತ್ತಮವಾಗಿ ಅಭಿವೃದ್ಧಿಪಡಿಸುತ್ತಿದ್ದು ಜವನಮ್ಮನದೊಡ್ಡಿ ಸರ್ಕಲ್‌ನಲ್ಲಿ ಸಂಘದ ಮತ್ತೊಂದು ಶಾಖೆಯನ್ನು ತೆರೆದು ಅಲ್ಲಿ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಮಾಡಲಾಗಿದೆ. ಸಂಘದಲ್ಲಿ ಇರುವ ಹಣವನ್ನು ಅಡಮಾನ ಸಾಲವಾಗಿ ರೈತರಿಗೆ ಕೊಡಲಾಗುತ್ತಿದೆ ಎಂದರು.

ಅವಶ್ಯ ಇರುವ ರೈತರಿಗೆ ವಾರ್ಷಿಕವಾಗಿ ಶೇ 3ರ ಬಡ್ಡಿದರದಲ್ಲಿ ಒಡವೆ ಸಾಲವನ್ನು ಕೊಡಲಾಗುತ್ತಿದೆ. 2ನೇ ಅವಧಿಗೆ ನಿರ್ದೇಶಕರನ್ನಾಗಿ ಆಯ್ಕೆಮಾಡಿ ಅಧ್ಯಕ್ಷರನ್ನಾಗಿ ಮಾಡಿದ ಎಲ್ಲರಿಗೂ ಅಭಿನಂದನೆ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಉಷಾ ರವಿ, ಸದಸ್ಯೆ ಭಾಗ್ಯ ಶಾಂತಕುಮಾರ್‌, ಕಾಂಗ್ರೆಸ್‌ ಮುಖಂಡರಾದ ಮಹೇಶ್‌, ಚೀರಣಕುಪ್ಪೆ ರವಿ, ಬರಡನಹಳ್ಳಿ ಶೇಖರ್‌, ಕುಂತಿಕಲ್‌ದೊಡ್ಡಿ ಬಸವರಾಜು, ಹಳ್ಳಾಸಂದ್ರ ಧನಂಜಯ, ತಿಮ್ಮೇಗೌಡ, ನಾರಾಯಣಗೌಡ, ಕೋಳಿಫಾರಂ ಶಿವರಾಜು ಹಾಗೂ ಸಂಘದ ನಿರ್ದೇಶಕರು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.

ಆಯ್ಕೆ: ಸಂಘದ ಅಧ್ಯಕ್ಷರಾಗಿ ಗಿರೀಶ್‌, ಉಪಾಧ್ಯಕ್ಷರಾಗಿ ಸಾವಿತ್ರಮ್ಮ ಅವಿರೋಧವಾಗಿ ಆಯ್ಕೆಯಾದರು. ಪ್ರೇಮಾನಂದ ಬಿ.ಪಿ ಚುನಾವಣಾಧಿಕಾರಿಯಾಗಿದ್ದರು. ಸಂಘದ 11 ನಿರ್ದೇಶಕರು ಪಾಲ್ಗೊಂಡಿದ್ದರು. ವಿಶೇಷ ಅಧಿಕಾರಿ ಶಿವಸ್ವಾಮಿ, ಮುಖ್ಯ ಕಾರ್ಯನಿರ್ವಾಹಕ ಮಂಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.