ADVERTISEMENT

ರಾಮನಗರ: ಪ್ಲಾಸ್ಟಿಕ್ ಅಕ್ಕಿಯೋ, ಸಾರವರ್ಧಿತವೋ?– ಬಿಸಿಯೂಟದಲ್ಲಿ ಬಣ್ಣದ ಅಕ್ಕಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 14:44 IST
Last Updated 25 ಅಕ್ಟೋಬರ್ 2021, 14:44 IST
ಚಿತ್ರ: ಪಾದರಹಳ್ಳಿ ಶಾಲೆಯಲ್ಲಿ ಸೋಮವಾರ ಪತ್ತೆಯಾದ ಅಕ್ಕಿ. ಎಡಭಾಗದಲ್ಲಿ ಸಾಮಾನ್ಯ ಹಾಗೂ ಬಲದಲ್ಲಿ ವಿಭಿನ್ನ ಬಣ್ಣದ ಅಕ್ಕಿ
ಚಿತ್ರ: ಪಾದರಹಳ್ಳಿ ಶಾಲೆಯಲ್ಲಿ ಸೋಮವಾರ ಪತ್ತೆಯಾದ ಅಕ್ಕಿ. ಎಡಭಾಗದಲ್ಲಿ ಸಾಮಾನ್ಯ ಹಾಗೂ ಬಲದಲ್ಲಿ ವಿಭಿನ್ನ ಬಣ್ಣದ ಅಕ್ಕಿ   

ರಾಮನಗರ: ತಾಲ್ಲೂಕಿನ ಪಾದರಹಳ್ಳಿ ಸರ್ಕಾರಿ ಶಾಲೆಯಲ್ಲಿ ಸೋಮವಾರ ಮಕ್ಕಳಿಗೆ ಬಿಸಿಯೂಟ ತಯಾರಿಕೆ ವೇಳೆ ಭಿನ್ನ ಸ್ವರೂಪದ ಅಕ್ಕಿ ದೊರೆತಿದ್ದು, ಪ್ಲಾಸ್ಟಿಕ್ ಅಕ್ಕಿ ಕಲಬೆರಕೆ ಆಗಿದೆ ಎನ್ನುವ ಆತಂಕ ಮೂಡಿದೆ. ಆದರೆ ಇದು ಪ್ಲಾಸ್ಟಿಕ್ ಅಲ್ಲ ‘ಸಾರವರ್ಧಿತ ಅಕ್ಕಿ’ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಶಾಲೆಗೆ ಒಂದು ತಿಂಗಳಿಗೆಂದು ಒಟ್ಟು 395 ಕೆ.ಜಿ. ಅಕ್ಕಿ ಪೂರೈಕೆ ಆಗಿತ್ತು. ಇದರಲ್ಲಿ ಶೇ 10ರಷ್ಟು ಪ್ರಮಾಣದ ಅಕ್ಕಿಯ ಗಾತ್ರ ಮತ್ತು ಬಣ್ಣ ಎರಡೂ ಬದಲಾಗಿತ್ತು. ‘ಅಡುಗೆ ತಯಾರಕರು ಅಕ್ಕಿ ಆರಿಸುವ ಸಂದರ್ಭ ಇದನ್ನು ಪತ್ತೆ ಮಾಡಿದ್ದು, ನಮ್ಮ ಗಮನಕ್ಕೆ ತಂದರು. ಈ ಅಕ್ಕಿಯು ನೀರಿನಲ್ಲಿ ತೇಲುತ್ತಿದ್ದು, ಬೇಯಿಸಿದಾಗ ರಬ್ಬರ್‌ನ ರೀತಿ ಅನುಭವ ಆಗುತ್ತಿತ್ತು. ಸಾಮಾನ್ಯ ಅಕ್ಕಿ ಗಾತ್ರಕ್ಕಿಂತ ಹೆಚ್ಚಿತ್ತು. ಹೀಗಾಗಿ ಈ ಅಂಶವನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಆರ್‌.ಕೆ. ಬೈರಲಿಂಗಯ್ಯ ತಿಳಿಸಿದರು.

’ಅಧಿಕಾರಿಗಳು ಇದು ಸಾರವರ್ಧಿತ ಅಕ್ಕಿ ಎನ್ನುತ್ತಾರೆ. ಆದರೆ ಶಿಕ್ಷಕರಿಗೆ ಈ ಬಗ್ಗೆ ಮಾಹಿತಿ ಇಲ್ಲ. ಈ ಗೊಂದಲ ನಿವಾರಿಸಬೇಕು’ ಎಂದು ಕೋರಿದರು.

ADVERTISEMENT

ಸಾರವರ್ಧಿತ: ಈ ಬಗ್ಗೆ ಅಕ್ಷರ ದಾಸೋಹ ಯೋಜನೆಯ ಅಧಿಕಾರಿ ಪ್ರಸನ್ನ ಪ್ರತಿಕ್ರಿಯೆ ನೀಡಿ ‘ಇದು ಸಾರವರ್ಧಿತ ಅಕ್ಕಿ ಆಗಿದ್ದು, ಸಾಮಾನ್ಯ ಅಕ್ಕಿಯ ಜೊತೆ ಸೇರಿಸಲಾಗುತ್ತಿದೆ. ಇದನ್ನು ಸೇವಿಸುವುದರಿಂದ ಯಾವುದೇ ತೊಂದರೆ ಇಲ್ಲ’ ಎಂದು ಸ್ಪಷ್ಟನೆ ನೀಡಿದರು.

ಎಲ್ಲ ಶಾಲೆಗೂ ಪೂರೈಕೆ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಕ್ರಂ ಪ್ರತಿಕ್ರಿಯೆ ನೀಡಿ ‘ಅಪೌಷ್ಟಿಕ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸುವ ಸಲುವಾಗಿ ಅಕ್ಕಿಗೆ ಹೆಚ್ಚಿನ ಪೌಷ್ಟಿಕ ಅಂಶಗಳನ್ನು ಸೇರಿಸಿ ನೀಡಲಾಗುತ್ತದೆ. ಹಿಂದಿನಿಂದಲೂ ಈ ಯೋಜನೆ ಇದೆ. ಈ ಸಾರವರ್ಧಿತ ಅಕ್ಕಿಯನ್ನು ಸರ್ಕಾರವೇ ಪೂರೈಸುತ್ತಿದೆ. ಆದಾಗ್ಯೂ ಪೋಷಕರಲ್ಲಿನ ಗೊಂದಲ ನಿವಾರಿಸುವ ಸಲುವಾಗಿ ಈ ಅಕ್ಕಿಯನ್ನು ಮಂಗಳವಾರ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಮಕ್ಕಳಿಗಾಗಿ ಸರ್ಕಾರ ಸಾರವರ್ಧಿತ ಅಕ್ಕಿ ನೀಡುತ್ತಿದೆ. ಈ ಬಗ್ಗೆ ಸಂಶಯ ನಿವಾರಿಸಲು ಇಲ್ಲಿ ಪತ್ತೆಯಾದ ಅಕ್ಕಿಯನ್ನು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗುವುದು

ಇಕ್ರಂ, ಸಿಇಒ, ರಾಮನಗರ ಜಿ.ಪಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.