ADVERTISEMENT

ಅಸಂಘಟಿತ ಕಾರ್ಮಿಕರ ನೆರವಿಗೆ ಬದ್ಧ

ಮುಂದಿನ ವಾರ ದಿನಸಿ ಕಿಟ್‌ ವಿತರಣೆ: ಶಾಸಕ ಎ. ಮಂಜುನಾಥ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 30 ಮೇ 2021, 3:37 IST
Last Updated 30 ಮೇ 2021, 3:37 IST
ಮಾಗಡಿ ಪಟ್ಟಣದ 7ನೇ ವಾರ್ಡಿನ ನಿವಾಸಿಗಳಿಗೆ ಶಾಸಕ ಎ. ಮಂಜುನಾಥ್‌ ದಿನಸಿ ಕಿಟ್‌ ವಿತರಿಸಿದರು. ಮುಖಂಡ ಅನಿಲ್‌ಕುಮಾರ್‌ ಇದ್ದರು
ಮಾಗಡಿ ಪಟ್ಟಣದ 7ನೇ ವಾರ್ಡಿನ ನಿವಾಸಿಗಳಿಗೆ ಶಾಸಕ ಎ. ಮಂಜುನಾಥ್‌ ದಿನಸಿ ಕಿಟ್‌ ವಿತರಿಸಿದರು. ಮುಖಂಡ ಅನಿಲ್‌ಕುಮಾರ್‌ ಇದ್ದರು   

ಮಾಗಡಿ: ‘ಅಸಂಘಟಿತ ಕಾರ್ಮಿಕರು, ಚಾಲಕರು, ಧ್ವನಿವರ್ಧಕ, ಶಾಮಿಯಾನ, ಡೆಕೋರೇಟರ್ಸ್, ಸವಿತಾ ಸಮಾಜದವರಿಗೆ ಮುಂದಿನ ವಾರ ದಿನಸಿ ಕಿಟ್ ವಿತರಿಸಲಾಗುವುದು’ ಎಂದು ಶಾಸಕ ಎ. ಮಂಜುನಾಥ್ ತಿಳಿಸಿದರು.

ಪಟ್ಟಣದ 7ನೇ ವಾರ್ಡ್‌ನಲ್ಲಿ ಶನಿವಾರ ಮಹದೇವಶಾಸ್ತ್ರಿ ಕೊಡಮಾಡಿರುವ ದಿನಸಿ ಕಿಟ್ ವಿತರಿಸಿ ಅವರು ಮಾತನಾಡಿದರು.

ಕಾಟಾಚಾರಕ್ಕೆ ಸಹಾಯ ಮಾಡುವುದು ಬೇಡ. ಕೈಗಾರಿಕೋದ್ಯಮಿಗಳು, ಕಾರ್ಮಿಕ ಇಲಾಖೆ, ಇತರೆ ದಾನಿಗಳ ನೆರವಿನಿಂದ ಲಾಕ್‌ಡೌನ್ ಸಂಕಟಕ್ಕೆ ಸಿಲುಕಿರುವ ಎಲ್ಲರಿಗೂ ಗೌರವಯುತವಾಗಿ ಸಹಾಯ ಮಾಡುತ್ತೇವೆ. ಟೊಯೊಟಾ, ಕೋಕೊಕೊಲಾ ಕಂಪನಿ ಈಗಾಗಲೇ ಶುದ್ಧ ಕುಡಿಯುವ ನೀರಿನ ಬಾಟಲ್‌ಗಳನ್ನು ನೀಡಿದೆ. ಜ್ಯೂಸ್ ನೀಡುವುದಾಗಿಯೂ ತಿಳಿಸಿದೆ. ಬ್ರಿಟಾನಿಯಾ ಕಂಪನಿ ಬಿಸ್ಕತ್ ನೀಡಿದೆ. ಸೋಂಕಿತರಿಗೆ ಮತ್ತು ಸಂಕಟದಲ್ಲಿ ಇರುವವರಿಗೆ ನೆರವು ನೀಡಲಾಗುವುದು ಎಂದರು.

ADVERTISEMENT

ಈಗಾಗಲೇ ಪಕ್ಷಾತೀತವಾಗಿ ಸಮಾಜ ಸೇವಕ ಕೆ. ಬಾಗೇಗೌಡ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಂಗಧಾಮಯ್ಯ, ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ, ಎಚ್.ಎಂ. ಕೃಷ್ಣಮೂರ್ತಿ, ಸಾಮ್ರಾಟ್ ಗೌಡ, ಶ್ರೀಪತಿಹಳ್ಳಿ ಮಂಜುನಾಥ್ ಆಂಬುಲೆನ್ಸ್ ಮತ್ತು ದಿನಸಿ ಕಿಟ್‌ ನೀಡಿದ್ದಾರೆ. ದಾನಿಗಳೆಲ್ಲರ ಸಹಕಾರವನ್ನು ಸ್ವಾಗತಿಸುತ್ತೇನೆ ಎಂದರು.

‘ರಾಜ್ಯದಲ್ಲಿಯೇ ಮೊದಲ ಬಾರಿಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಮಾಡ್ಯೂಲರ್ ಐಸಿಯು ಮತ್ತು ಅಧಿಕ ಆಮ್ಲಜನಕ ಸಾಂದ್ರಕಗಳನ್ನು ನೀಡಿದ್ದಾರೆ. ತಿಪ್ಪಸಂದ್ರ ಮತ್ತು ಕುದೂರು ಹೋಬಳಿಯ ಕೋವಿಡ್‌ ಕೇಂದ್ರಗಳಿಗೆ 6 ಆಮ್ಲಜನಕ ಸಾಂದ್ರಕಗಳನ್ನು ನೀಡಿದ್ದೇನೆ’ ಎಂದು ತಿಳಿಸಿದರು.

ಎಲ್ಲಾ ಗ್ರಾಮ ಪಂಚಾಯಿತಿ ಪಿಡಿಒಗಳ ಸಭೆ ಕರೆಯಲಾಗಿದೆ. ಕೋವಿಡ್ ಟೆಸ್ಟ್ ಮಾಡಿಸಿ ಮಾಸ್ಕ್, ಸ್ಯಾನಿಟೈಸರ್, ಔಷಧಿ ವಿತರಿಸುವ ವ್ಯವಸ್ಥೆ ಮಾಡಿದ್ದೇನೆ. ಮುಂದಿನ ವಾರ ಮಾಡಬಾಳ್ ಮತ್ತು ಕಸಬಾ ಹೋಬಳಿ ಪಂಚಾಯಿತಿ ಪಿಡಿಒಗಳ ಸಭೆ ಕರೆದು ಕೋವಿಡ್ ನಿಯಂತ್ರಣಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದರು.

‘ಪ್ರಚಾರಕ್ಕಾಗಿ ಕೆಲವರು ಇಂದಿರಾ ಕ್ಯಾಂಟೀನ್‌ನಲ್ಲಿ ಊಟ, ತಿಂಡಿ ಸರಿಯಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಮೊದಲ ದಿನ ವಾಟ್ಸ್‌ಆ್ಯಪ್‌ನಲ್ಲಿ ಊಟ, ತಿಂಡಿ ಸರಿಯಿಲ್ಲ ಎಂದರು. ಮಾರನೆ ದಿನವೇ ಊಟ, ತಿಂಡಿ ಸರಿ ಇದೆ ಎಂದು ಪ್ರಚಾರಕ್ಕಾಗಿ ಹೇಳಿದರು. ನನ್ನ ಸಂಬಂಧಿಕರಿಗೆ ಟೆಂಡರ್ ಕೊಡಿಸಿಲ್ಲ. ಪಾರದರ್ಶಕವಾಗಿ ಸಮಸ್ಯೆ ಹೇಳಬೇಕು. ಪುರಸಭೆ ಮುಖ್ಯಾಧಿಕಾರಿಗಳಿಗೆ ತಿಳಿಸಿದ್ದು, ಮಾಹಿತಿ ಕೇಳಿದ್ದೇನೆ’ ಎಂದರು.

ಹೂವು, ಹಣ್ಣು, ತರಕಾರಿ, ಸೊಪ್ಪು ಮಾರುಕಟ್ಟೆಗೆ ಸಾಗಿಸುವ ರೈತರಿಗೆ ಪಾಸ್ ಅಗತ್ಯವಿಲ್ಲ. ರೈತ ಸಂಘದವರು ಗೊಂದಲ ಬೇಡ ಎಂದರು.

ಪುರಸಭೆ ಸದಸ್ಯ ಅನಿಲ್‌ಕುಮಾರ್‌ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷ ರಹಮತ್, ಸದಸ್ಯ ಅನಿಲ್‌ಕುಮಾರ್‌ ರೇಣುಕಪ್ಪ, ಮಾಜಿ ಸದಸ್ಯರಾದ ನಯಾಜ್, ರೂಪೇಶ್, ಮುಖಂಡರಾದ ಗಣೇಶಪ್ಪ, ಲೋಕೇಶ್, ನವೀನ್, ವಿಜಯಸಿಂಹ, ಜವರೇಗೌಡ, ಗಣಪತಿ ಶಿಲ್ಪಿಗಳಾದ ಹೇಮಂತ್, ಗಣೇಶ್, ಗೌತಮ್, ವಿಜಯ್ ಇದ್ದರು. ಬಳಿಕ ಶಾಸಕರು ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.