ADVERTISEMENT

‘ವೈಫಲ್ಯ ಮರೆ ಮಾಚಲು ಮೋದಿ ತಂತ್ರ’

ಪ್ರಧಾನಿ ಭಾಷಣಕ್ಕೆ ಕಾಂಗ್ರೆಸ್‌ ಮುಖಂಡರ ಟೀಕೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2020, 13:19 IST
Last Updated 3 ಜನವರಿ 2020, 13:19 IST
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾನೂನು ಘಟಕದ ವಕ್ತಾರ ಅಹಮ್ಮದ್ ಮಾತನಾಡಿದರು
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾನೂನು ಘಟಕದ ವಕ್ತಾರ ಅಹಮ್ಮದ್ ಮಾತನಾಡಿದರು   

ರಾಮನಗರ: ಪ್ರಧಾನಿ ನರೇಂದ್ರ ಮೋದಿ ತಮ್ಮ ಆಡಳಿತ ವೈಫಲ್ಯ ಮರೆ ಮಾಚಲು ಪಾಕಿಸ್ತಾನವನ್ನು ಎಳೆದು ತರುತ್ತಿದ್ದಾರೆ ಎಂದು ಕೆಪಿಸಿಸಿ ಕಾನೂನು ಘಟಕದ ವಕ್ತಾರ ಅಹಮ್ಮದ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ತುಮಕೂರಿನ ಸಿದ್ಧಗಂಗಾ ಮಠದ ಆವರಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮೋದಿ ರಾಜಕೀಯ ಭಾಷಣ ಮಾಡುವ ಮೂಲಕ ಧಾರ್ಮಿಕ ಸ್ಥಳವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಮೂಲಕ ಧಾರ್ಮಿಕ ಪರಂಪರೆ ಮತ್ತು ಸಂಸ್ಕೃತಿಗೆ ಅವಮಾನ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಧಾನಿ ತಮ್ಮ ಭಾಷಣದ ಉದ್ದಕ್ಕೂ ನೆರೆ ಪರಿಹಾರದ ಕುರಿತು ಒಂದು ಮಾತು ಹೇಳಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಡಿದ ಮನವಿಗೂ ಸ್ಪಂದಿಸಿಲ್ಲ. ಇದು ರಾಜ್ಯದ 6 ಕೋಟಿ ಜನತೆಗೆ ಮಾಡಿದ ಅಪಮಾನ. ರಾಜ್ಯದ ಜನತೆ 25 ಸಂಸದರನ್ನು ಇಲ್ಲಿಂದ ಆರಿಸಿ ಕಳುಹಿಸಿದ್ದಾರೆ. ಈ ಸಂಸದರೂ ನೆರೆ ಪರಿಹಾರ ಸಂಬಂಧ ಸಂಸತ್‌ನಲ್ಲಿ ಧ್ವನಿ ಎತ್ತಿಲ್ಲ. ಅವರಿಗೆ ತಾಕತ್ತಿದ್ದರೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಕೆಪಿಸಿಸಿ ಕಾನೂನು ಘಟಕದ ಕಾರ್ಯದರ್ಶಿ ಸೂರ್ಯ ಮುಕುಂದರಾಜು ಮಾತನಾಡಿ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ವಿವಿಧ ವಿಶ್ವವಿದ್ಯಾಲಯಗಳಿಗೆ ನೇಮಕಗೊಂಡಿದ್ದ ಸಿಂಡಿಕೇಟ್‌ ಸದಸ್ಯರ ಸದಸ್ಯತ್ವವನ್ನು ಈಗಿನ ಸರ್ಕಾರ ರದ್ದು ಮಾಡಿ ಹೊಸಬರನ್ನು ನೇಮಕ ಮಾಡಿದೆ. ವಿಶ್ವವಿದ್ಯಾಲಯದ ನಿಯಮಾವಳಿ ಪ್ರಕಾರ ಒಮ್ಮೆ ವಿ.ವಿ.ಗೆ ಸಿಂಡಿಕೇಟ್‌ ಸದಸ್ಯರ ನೇಮಕವಾದ ನಂತರ ಅವಧಿ ಮುಗಿಯುವ ತನಕ ಮತ್ತೊಬ್ಬರನ್ನು ನೇಮಿಸುವಂತೆ ಇಲ್ಲ. ಆದರೆ ನಿಯಮವನ್ನು ಗಾಳಿಗೆ ತೂರಿ ಮೈಸೂರು ವಿ.ವಿ.ಗೆ ಸಿ.ಎಂ. ಸುರೇಶ್‌ರನ್ನು ನೇಮಕ ಮಾಡಲಾಗಿದೆ ಎಂದು ದೂರಿದರು.

ವಿವಿಧ ಹುದ್ದೆಗಳಿಗೆ ನೇಮಕಾತಿ ಬಳಿಕ ಆಯ್ಕೆ ಪ್ರಕ್ರಿಯೆ ಬಗ್ಗೆ ಎಸಿಬಿ ಹಾಗೂ ರಾಜ್ಯಪಾಲರಿಗೆ ದೂರು ನೀಡಲಾಗಿದೆ. ಇದರ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಅವರ ಪಿತೂರಿ ಇದೆ. ಒಬ್ಬರನ್ನೇ ಪುನಃ ಆಯ್ಕೆ ಮಾಡಿದ್ದು, ಸಚಿವರಿಗೆ ಹಣ ಸಂದಾಯವಾಗಿದೆ ಎಂದು ದೂರಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌. ಗಂಗಾಧರ್, ಪವಿತ್ರಮ್ಮ, ವಿ.ಎಚ್‌. ರಾಜು ಇದ್ದರು.

***

"ನೋಟು ಅಮಾನ್ಯೀಕರಣದಿಂದಾಗಿ ದೇಶಕ್ಕೆ ಎಷ್ಟು ಕಪ್ಪು ಹಣ ಹರಿದು ಬಂತು ಎಂಬುದನ್ನು ಪ್ರಧಾನಿ ಮೋದಿ ಸಂಸತ್‌ಗೆ ತಿಳಿಸಬೇಕು"

ಅಹಮ್ಮದ್‌ ಕೆಪಿಸಿಸಿ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.