ADVERTISEMENT

ಬಿಸ್ಕೂರು: ಸಂವಿಧಾನ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2024, 4:35 IST
Last Updated 13 ಫೆಬ್ರುವರಿ 2024, 4:35 IST
ಕುದೂರು ಹೋಬಳಿಯ ಬಿಸ್ಕೂರು ಗ್ರಾಮ ಪಂಚಾಯಿತಿಯಲ್ಲಿ ಶನಿವಾರ 75ನೇ ವರ್ಷದ ಅಮೃತ ಮಹೋತ್ಸವದ ಸಂವಿಧಾನ ರಥ ಯಾತ್ರೆಯನ್ನು ಸ್ವಾಗತಿಸಲಾಯಿತು
ಕುದೂರು ಹೋಬಳಿಯ ಬಿಸ್ಕೂರು ಗ್ರಾಮ ಪಂಚಾಯಿತಿಯಲ್ಲಿ ಶನಿವಾರ 75ನೇ ವರ್ಷದ ಅಮೃತ ಮಹೋತ್ಸವದ ಸಂವಿಧಾನ ರಥ ಯಾತ್ರೆಯನ್ನು ಸ್ವಾಗತಿಸಲಾಯಿತು   

ಕುದೂರು: ಹೋಬಳಿಯ ಬಿಸ್ಕೂರು ಗ್ರಾಮ ಪಂಚಾಯಿತಿಯಲ್ಲಿ ಶನಿವಾರ 75ನೇ ವರ್ಷದ ಅಮೃತ ಮಹೋತ್ಸವದ ಸಂವಿಧಾನ ರಥ ಯಾತ್ರೆಯನ್ನು ಸ್ವಾಗತಿಸಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಸ್ವಾಗತ ಕೋರಿದರು. ಬಳಿಕ ಮಾತನಾಡಿದ ಅವರು, ದೇಶದಲ್ಲಿ ಮೇಲು–ಕೀಳು, ಜಾತಿ ಪದ್ಧತಿ ಹೋಗಲಾಡಿಸಲು ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ದೇಶದ ಪ್ರತಿಯೊಬ್ಬರಿಗೂ ಪರಿಚಯಿಸುವ ಕೆಲಸ ಆಗಬೇಕಿದೆ. ಸಂವಿಧಾನವನ್ನು ಅರ್ಥೈಸಿಕೊಂಡರೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬಹುದು ಎಂದು ತಿಳಿಸಿದರು.

ಎಸ್.ಸಿ, ಎಸ್.ಟಿ ಹಿತರಕ್ಷಣಾ ಸಮಿತಿ ನಾಮನಿರ್ದೇಶಿತ ಸದಸ್ಯ ತೊರೆರಾಮನಹಳ್ಳಿ ನರಸಿಂಹಮೂರ್ತಿ ಸಭೆಯಲ್ಲಿ ಸೇರಿದ್ದ ಜನರಿಗೆ ಸಂವಿಧಾನ ಪ್ರಸ್ತಾವನೆಯ ಪ್ರತಿಜ್ಞಾವಿಧಿ ಬೋಧಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ವಿತರಿಸಲಾಯಿತು.

ADVERTISEMENT

ಬಿಸ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಮ್ಮ, ಉಪಾಧ್ಯಕ್ಷ ಶಂಕರಪ್ಪ, ಆರ್.ಐ ರೆಹಮಾನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರೇವತಿ, ಎಸ್ಸಿ. ಎಸ್ಟಿ ಹಿತರಕ್ಷಣಾ ಸಮಿತಿ ನಾಮನಿರ್ದೇಶಿತ ಸದಸ್ಯ ತೊರೆರಾಮನಹಳ್ಳಿ ನರಸಿಂಹಮೂರ್ತಿ, ಸಮಾಜ ಕಲ್ಯಾಣ ಅಧಿಕಾರಿ ಪ್ರಕಾಶ್, ಗ್ರಾ.ಪಂ. ಮಾಜಿ ಸದಸ್ಯ ಬಿ.ಎಸ್ ಸುಹೇಲ್, ಕನ್ನಸಂದ್ರ ರವಿಕುಮಾರ್, ತಟವಾಳ್ ಪ್ರಕಾಶ್, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಹಾಜರಿದ್ದರು.

ಹೋಬಳಿಯ ಹುಲಿಕಲ್ ಗ್ರಾಮದಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದ  ಹಾಪ್ ಕಾಮ್ಸ್ ಮಾಜಿ ನಿರ್ದೇಶಕ ಮಂಜೇಶ್ ಕುಮಾರ್, ಲಕ್ಷಾಂತರ ಮಂದಿಗೆ ಅಕ್ಷರ, ಅನ್ನ ದಾಸೋಹ ನೀಡಿ ಶಿಕ್ಷಣದ ಕ್ರಾಂತಿ ಮೂಡಿಸಿದ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತರತ್ನ ಪ್ರಶಸ್ತಿ ನೀಡದೆ, ಅಡ್ವಾಣಿಗೆ ನೀಡಿರುವುದು ಆ ಪ್ರಶಸ್ತಿಗೆ ಗೌರವ ಕಡಿಮೆಯಾಗಿದೆ ಎಂದರು.

ಕೇಂದ್ರ ಸರ್ಕಾರ ಅಡ್ವಾಣಿಗೆ ಭಾರತ ರತ್ನ ಪ್ರಶಸ್ತಿ ನೀಡಿರುವುದು ದೇಶದ ದುರಂತ. ಇದರ ವಿರುದ್ಧ ವಿಚಾರವಾದಿಗಳು, ಮಠ ಮಂದಿರಗಳ ಸಂತರು, ಚಿಂತಕರು, ಸಾಹಿತಿಗಳು ಹೋರಾಟಗಾರರು ಧ್ವನಿ ಎತ್ತಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.