ADVERTISEMENT

ಸಾಧನೆಗೆ ನಿರಂತರ ಪ್ರಯತ್ನ ಮುಖ್ಯ: ಪ್ರೊ. ಮೊಹಮ್ಮದ್ ಫಾರೂಕ್

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 5:54 IST
Last Updated 23 ಏಪ್ರಿಲ್ 2024, 5:54 IST
ರಾಮನಗರದ ಎಂ.ಎಚ್ ಕಾಲೇಜಿನಲ್ಲಿ ನಡೆದ ಪದವಿ ಪ್ರದಾನ ಸಮಾರಂಭವನ್ನು  ಪ್ರೊ. ಮೊಹಮ್ಮದ್ ಫಾರೂಕ್ ಪಾಷಾ ಉದ್ಘಾಟಿಸಿದರು. ಕಾಲೇಜಿನ ಮುಖ್ಯಸ್ಥ ಚಂದ್ರಶೇಖರ್, ಎಂ.ಎಚ್. ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಅಮಿತಾ ಎಚ್.ಸಿ, ಪ್ರಾಂಶುಪಾಲ ಮಹೇಶ್ ಬಿ.ಎನ್ ಇದ್ದಾರೆ 
ರಾಮನಗರದ ಎಂ.ಎಚ್ ಕಾಲೇಜಿನಲ್ಲಿ ನಡೆದ ಪದವಿ ಪ್ರದಾನ ಸಮಾರಂಭವನ್ನು  ಪ್ರೊ. ಮೊಹಮ್ಮದ್ ಫಾರೂಕ್ ಪಾಷಾ ಉದ್ಘಾಟಿಸಿದರು. ಕಾಲೇಜಿನ ಮುಖ್ಯಸ್ಥ ಚಂದ್ರಶೇಖರ್, ಎಂ.ಎಚ್. ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಅಮಿತಾ ಎಚ್.ಸಿ, ಪ್ರಾಂಶುಪಾಲ ಮಹೇಶ್ ಬಿ.ಎನ್ ಇದ್ದಾರೆ    

ರಾಮನಗರ: ‘ವಿದ್ಯಾರ್ಥಿಗಳು ತಮ್ಮ ಆಸಕ್ತಿ ಇರುವ ಕ್ಷೇತ್ರದಲ್ಲಿ ನಿರಂತರ ಶ್ರಮ ಹಾಕಿದಾಗ ಮಾತ್ರ ಅದರಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯ. ಮೂರು ವರ್ಷದ ಹಿಂದೆ ವಿದ್ಯಾರ್ಥಿಯಾಗಿ ಬಂದವರು, ಇಂದು ಪದವಿ ಪಡೆದು ಜವಾಬ್ದಾರಿಯುತ ನಾಗರಿಕರಾಗಿ ಹೊರಗಡೆ ಹೋಗುತ್ತಿದ್ದೀರಿ. ಮುಂದಿನ ದಿನಗಳಲ್ಲಿ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸುವ ಶಕ್ತಿ ನಿಮ್ಮದಾಗಲಿ’ ಎಂದು ಪ್ರೊ. ಮೊಹಮ್ಮದ್ ಫಾರೂಕ್ ಪಾಷಾ ಹೇಳಿದರು.

ನಗರದ ಎಂ.ಎಚ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಪ್ರಾಮಾಣಿಕವಾದ ಪ್ರಯತ್ನವು ಎಂದಿಗೂ ವ್ಯರ್ಥವಾಗುವುದಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಅದು ನಮಗೆ ನೆರವಿಗೆ ಬರುತ್ತದೆ. ಮುಂದಿನ ದಿನಗಳಲ್ಲಿ ನೀವು ಎಂ.ಕಾಂ, ಎಂ.ಬಿ.ಎ, ಸಿ.ಎ ಮುಂತಾದ ವಿಭಾಗಗಳಲ್ಲದೆ ರಾಜಕೀಯ ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಕೊಂಡು ಸಾಧನೆಯನ್ನು ತೋರಬಹುದು’ ಎಂದರು.

‘ವಿವಿಧ ರೀತಿಯ ವ್ಯವಹಾರಗಳಲ್ಲಿ ತೊಡಗಿಸಿಕೊಂಡು ಎಷ್ಟೋ ಜನರಿಗೆ ಕೆಲಸ ಕೊಡುವ ಸಾಧನೆಯನ್ನು ಮಾಡಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಿ ಇಷ್ಟಬಂದ ಉದ್ಯೋಗಕ್ಕೆ ಹೋಗಬಹುದು. ಕಣ್ಣೆದುರಿಗಿರುವ ಅವಕಾಶಗಳನ್ನು ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಬಳಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

ಕಾಲೇಜಿನ ಮುಖ್ಯಸ್ಥ ಚಂದ್ರಶೇಖರ್ ಮಾತನಾಡಿ, ‘‌ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾದದ್ದು. ಪದವಿ ಪ್ರಮಾಣಪತ್ರಕ್ಕಿಂತಲೂ ಮೌಲ್ಯಯುತವಾದುದು ನಮ್ಮ ವ್ಯಕ್ತಿತ್ವ ಮತ್ತು ಜ್ಞಾನ. ಅವೆರಡೂ ಇದ್ದಾಗ ನಾವು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಪ್ರಾಂಶುಪಾಲರಾದ ಮಹೇಶ್ ಬಿ.ಎನ್, ಎಂ.ಎಚ್. ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಅಮಿತಾ ಎಚ್.ಸಿ, ಉಪನ್ಯಾಸಕರಾದ ರಮೇಶ್ ಸಿ. ಹೊಸದೊಡ್ಡಿ, ನದೀಮ್, ಸುಭಾಷ್, ಭವ್ಯ ಹಾಗೂ ಇತರರುಇದ್ದರು. 60 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.