ADVERTISEMENT

ರಾಮನಗರ | ಒಂದೇ ದಿನ 13 ಪ್ರಕರಣ ಪತ್ತೆ: ಮತ್ತೊಂದು ಸಾವು

ಕೊರೊನಾಘಾತ

​ಪ್ರಜಾವಾಣಿ ವಾರ್ತೆ
Published 17 ಜೂನ್ 2020, 13:31 IST
Last Updated 17 ಜೂನ್ 2020, 13:31 IST
   

ರಾಮನಗರ: ಜಿಲ್ಲೆಯಲ್ಲಿ ಕೋವಿ‌ಡ್‌-19 ಸೋಂಕಿಗೆ ಮತ್ತೊಬ್ಬರು ಸಾವನ್ನಪ್ಪಿದ್ದಾರೆ. ಬುಧವಾರ ಒಂದೇ ದಿನ 13 ಮಂದಿಯಲ್ಲಿ ಸೋಂಕು ತಗುಲಿರುವುದು ಆತಂಕ ಹುಟ್ಟಿಸಿದೆ.

ಚನ್ನಪಟ್ಟಣ ತಾಲ್ಲೂಕಿನ ಶ್ಯಾನುಭೋಗನಹಳ್ಳಿ ಗ್ರಾಮ ಸೋಂಕಿತರ ಹಾಟ್‌ ಸ್ಪಾಟ್‌ ಆಗಿದ್ದು, ಅದೇ ಗ್ರಾಮದ 8 ಮಂದಿಗೆ ಒಂದೇ ದಿನ ಸೋಂಕು ಧೃಢಪಟ್ಟಿದೆ. ಇದೇ ಊರಿನವರಾದ 25 ವರ್ಷದ ಜೈಲು ಸಿಬ್ಬಂದಿ P-4337ಗೆ ಮೊದಲು ಸೋಂಕು ತಗುಲಿತ್ತು. ಈತನ ಜೊತೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದ 24 ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಅವರಲ್ಲಿ ಈ ಹಿಂದೆ ಮೂವರಿಗೆ ಸೋಂಕು ಧೃಢಪಟ್ಟಿತ್ತು. ಈಗ ಮತ್ತೆ ಎಂಟು ಮಂದಿಗೆ ಸೋಂಕು ಕಾಣಿಸಿಕೊಂಡಿರುವುದು ಜನರ ನಿದ್ದೆಕೆಡಿಸಿದೆ. ಗ್ರಾಮವನ್ನು ತಾಲ್ಲೂಕು ಆಡಳಿತ ಈಗಾಗಲೇ ಸೀಲ್‌ಡೌನ್ ಮಾಡಿದೆ. ಹೊಸತಾಗಿ ಸೋಂಕು ಪತ್ತೆಯಾದವರು ಕ್ವಾರಂಟೈನ್‌ನಲ್ಲಿ ಇದ್ದ ಕಾರಣ ಮತ್ತಷ್ಟು ಮಂದಿಗೆ ಸೋಂಕು ಹರಡುವುದು ತಪ್ಪಿದೆ.

ಚನ್ನಪಟ್ಟಣ ತಾಲ್ಲೂಕಿನ ದೇವರಹೊಸಹಳ್ಳಿಯ ಪಿ-6856 ಸೋಂಕಿತನ ಸಂಪರ್ಕದಲ್ಲಿ ಇದ್ದ ತಾಯಿ ಹಾಗೂ ಇಬ್ಬರು ಸಹೋದರರಿಗೂ ಸೋಂಕು ತಗುಲಿದೆ. ಇವರನ್ನೂ ಈ ಮೊದಲೇ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಈ ಗ್ರಾಮ ಸಹ ಸೀಲ್‌ಡೌನ್‌ ಆಗಿದೆ. ಮಾಗಡಿಯಲ್ಲಿ ಬುಧವಾರ ಮತ್ತೊಂದು ಪ್ರಕರಣ ಧೃಡವಾಗಿದೆ.

ADVERTISEMENT

ಕನಕಪುರ ತಾಲ್ಲೂಕಿನ ಮರಳವಾಡಿ ಹೋಬಳಿಯ ದೊಡ್ಡ ಸಾದೇನಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿದೆ. 60 ವರ್ಷದ ಈ ವ್ಯಕ್ತಿ ಡಯಾಲಿಸ್‌ಗೆಂದು ವಿಕ್ಟೋರಿಯಾ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿಯೇ ಪರೀಕ್ಷೆಗೆ ಒಳಗಾಗಿದ್ದರು. ಆಸ್ಪತ್ರೆ ಸಂಪರ್ಕದಿಂದಲೇ ಸೋಂಕು ಹರಡಿರಬಹುದು ಎಂದು ಶಂಕಿಸಲಾಗಿದೆ. ಈ ಎಲ್ಲ ಪ್ರಕರಣಗಳೊಟ್ಟಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಒಟ್ಟಾರೆ 37ಕ್ಕೆ ಏರಿಕೆಯಾಗಿದೆ.

ಕನಕಪುರದ ವ್ಯಕ್ತಿ ಸಾವು

ಕನಕಪುರದ 90 ವರ್ಷದ ವೃದ್ಧರೊಬ್ಬರು ಕೋವಿಡ್‌-19 ಸೋಂಕಿಗೆ ಬಲಿಯಾಗಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಕೊರೊನಾದಿಂದ ಸಾವಿಗೀಡಾದವರ ಸಂಖ್ಯೆ ಎರಡಕ್ಕೆ ಏರಿದೆ.

ಎದೆನೋವಿನಿಂದ ಬಳಲುತ್ತಿದ್ದ ಇವರನ್ನು ಐದು ದಿನದ ಹಿಂದಷ್ಟೇ ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಕೊನೆಯುಸಿರೆಳೆದರು. ಮರಣದ ತರುವಾಯ ಅವರ ಗಂಟಲು ದ್ರವದ ಪರೀಕ್ಷೆ ನಡೆಸಿದ್ದು, ವರದಿ ಪಾಸಿಟಿವ್‌ ಆಗಿದೆ. ಹೀಗಾಗಿ ಆತ ಕನಕಪುರದಲ್ಲಿ ವಾಸಿಸುತ್ತಿದ್ದ ಎಂ.ಜಿ. ರಸ್ತೆಯಲ್ಲಿ ಬಟ್ಟೆ ಅಂಗಡಿ ಹೊಂದಿದ್ದು, ಮೇಗಳ ಬೀದಿಯಲ್ಲಿ ವಾಸವಿದ್ದರು. ಮೇಗಳ ಬೀದಿ ಪ್ರದೇಶ ಪೂರ ಸೀಲ್‌ಡೌನ್‌ ಆಗಿದೆ.

ಟೊಯೊಟಾ ಸಿಬ್ಬಂದಿಗೂ ಸೋಂಕು

ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಇರುವ ಟೊಯೊಟಾ ಕಂಪನಿಯ ಇಬ್ಬರಿಗೆ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಇಡೀ ಕಾರ್ಖಾನೆ ಘಟಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಸೋಂಕು ನಿವಾರಣ ದ್ರಾವಣ ಸಿಂಪಡನೆ ಕಾರ್ಯ ನಡೆದಿತ್ತು.

ಮಂಡ್ಯದ ಒಬ್ಬ ಹಾಗೂ ಬೆಂಗಳೂರಿನ ಹೆಬ್ಬಗೋಡಿಯ ವ್ಯಕ್ತಿಗೆ ಸೋಂಕು ತಗುಲಿದೆ. ಇವರಲ್ಲಿ ಒಬ್ಬರು ಇದೇ 7ರಂದು ಹಾಗೂ ಇನ್ನೊಬ್ಬರು ಇದೇ 16ರಂದು ಕರ್ತವ್ಯಕ್ಕೆ ಕಡೆಯದಾಗಿ ಹಾಜರಾಗಿದ್ದರು. ಸೋಂಕು ಧೃಢಪಟ್ಟಿರುವುದು ಖಾತ್ರಿಯಾಗುತ್ತಲೇ ಈ ಇಬ್ಬರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಎಲ್ಲ ಸಿಬ್ಬಂದಿಯ ತಪಾಸಣೆ ಕಾರ್ಯ ನಡೆದಿದ್ದು, ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ.

'ಉಳಿದ ಸಿಬ್ಬಂದಿಗೆ ಸೋಂಕು ತಗುಲದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದ್ದು, ಕಾರ್ಖಾನೆ ಸ್ವಚ್ಛತೆ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸೋಂಕಿತರ ಸಂಪರ್ಕಕ್ಕೆ ಬಂದ ಎಲ್ಲರ ಕ್ವಾರಂಟೈನ್‌ಗೆ ಸ್ಥಳೀಯ ಆಡಳಿತದ ಜೊತೆ ಸಹಕಾರ ನೀಡುತ್ತಿದ್ದೇವೆ’ ಎಂದು ಕಂಪನಿಯು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.