ADVERTISEMENT

ರಾಮನಗರ | ‘ಭಾರತ ಜೋಡೊ’ ನೆನಪಿನ ಪಾದಯಾತ್ರೆಗೆ ಕ್ಷಣಗಣನೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2023, 10:30 IST
Last Updated 7 ಸೆಪ್ಟೆಂಬರ್ 2023, 10:30 IST
   

ರಾಮನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದಿದ್ದ ‘ಭಾರತ್ ಜೋಡೊ ಯಾತ್ರೆ’ಗೆ ಒಂದು ವರ್ಷವಾದ ನೆನಪಿಗಾಗಿ ರಾಮನಗರದಲ್ಲಿ ಹಮ್ಮಿಕೊಂಡಿರುವ ಪಾದಯಾತ್ರೆಗೆ ಕ್ಷಣಗಣನೆ ಆರಂಭವಾಗಿದೆ.

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ಶಾಸಕರು ಹಾಗೂ ಪಕ್ಷದ ಸ್ಥಳೀಯ ಮುಖಂಡರ ಕಟೌಟ್‌ಗಳು, ಬ್ಯಾನರ್‌ಗಳು ಹಾಗೂ ಕಾಂಗ್ರೆಸ್ ಬಾವುಟಗಳು ನಗರದಲ್ಲಿ ರಾರಾಜಿಸುತ್ತಿವೆ. ನಾಯಕರಿಗೆ ಸ್ವಾಗತ ಕೋರುವ ಮುಖಂಡರ ಬ್ಯಾನರ್‌ಗಳು ರಸ್ತೆಯುದ್ದಕ್ಕೂ ಇಣುಕುತ್ತಿವೆ.

ಪಾದಯಾತ್ರೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ಸಂಸದ ಡಿ.ಕೆ. ಸುರೇಶ್, ಸಂಪುಟದ ಅನೇಕ ಸಚಿವರು, ಸ್ಥಳೀಯ ಶಾಸಕ ಶಾಸಕರಾದ ಎಚ್‌.ಎ. ಇಕ್ಬಾಲ್ ಹುಸೇನ್, ಎಚ್‌.ಸಿ. ಬಾಲಕೃಷ್ಣ, ಸಂಸದ ಡಿ.ಕೆ. ಸುರೇಶ್ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ.

ADVERTISEMENT

ಬೆಂಗಳೂರು– ಮೈಸೂರು ರಸ್ತೆಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಿಂದ ಸಂಜೆ 5 ಗಂಟೆಗೆ ಶುರುವಾಗಲಿರುವ ಪಾದಯಾತ್ರೆಯು ಒಂದು ತಾಸು ನಡೆಯಲಿದ್ದು, 6 ಗಂಟೆಗೆ ಅಂತ್ಯವಾಗಲಿದೆ. ಪಾದಯಾತ್ರೆ ಬಳಿಕ ನಡೆಯುವ ಕಾರ್ಯಕ್ರಮಕ್ಕಾಗಿ ಐಜೂರು ವೃತ್ತದ ಬಸ್ ನಿಲ್ದಾಣದ ಬಳಿ ವೇದಿಕೆ ನಿರ್ಮಿಸಲಾಗಿದೆ. ಅಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಭಾಷಣ ಮಾಡಲಿದ್ದಾರೆ.

ಪಾದಯಾತ್ರೆ ಯಶಸ್ವಿಗೊಳಿಸಲು ಜಿಲ್ಲೆಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾ ಕೇಂದ್ರಕ್ಕೆ ಬರಲಿದ್ದು, ಸುಮಾರು 25 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಕಾರ್ಯಕರನ್ನು ರಾಮನಗರಕ್ಕೆ ಕರೆತರಲು ಬಸ್ ಸೇರಿದಂತೆ ಇತರ ವಾಹನಗಳ ವ್ಯವಸ್ಥೆ ಮಾಡಲಾಗಿದೆ.

ಸಿದ್ಧತೆ ಪರಿಶೀಲಿಸಿದ ಸಂಸದ

ಕಾರ್ಯಕ್ರಮಕ್ಕೆ ನಡೆಸಿರುವ ಸಿದ್ಧತೆಯನ್ನು ಸಂಸದ ಡಿ.ಕೆ. ಸುರೇಶ್ ಪರಿಶೀಲನೆ ನಡೆಸಿದರು. ಪಾದಯಾತ್ರೆ ಸಾಗಲಿರುವ ಮಾರ್ಗದಲ್ಲಿ ಸಂಚರಿಸಿದ ಅವರು, ವೇದಿಕೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯ ಕುರಿತು ಸ್ಥಳೀಯ ನಾಯಕರಿಂದ ಮಾಹಿತಿ ಪಡೆದರು.

ಪಾದಯಾತ್ರೆ ಅಂಗವಾಗಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಯಾತ್ರೆ ಸಾಗುವ ಮಾರ್ಗದಲ್ಲಿ ವಾಹನಗಳ ನಿಲುಗಡೆಗೆ ನಿರ್ಬಂಧ ಹೇರಲಾಗಿದ್ದು, ಬೀದಿ ಬದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಲಾಗಿದೆ.

ಪಾದಯಾತ್ರೆ ಮಾರ್ಗ

ಡಿ.ಸಿ ಕಚೇರಿ – ಎಸ್‌.ಪಿ. ಕಚೇರಿ ವೃತ್ತ – ನೀರಿನ ಟ್ಯಾಂಕ್ ವೃತ್ತ – ಎಂ.ಜಿ. ರಸ್ತೆ – ಕಾಮಣ್ಣನ ಗುಡಿ ವೃತ್ತ – ಶೋಭಾ ಹೋಟೆಲ್ ವೃತ್ತ – ಕೆಂಗಲ್ ಹನುಮಂತಯ್ಯ ವೃತ್ತ – ಐಜೂರು ವೃತ್ತದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.