ADVERTISEMENT

ನಾಡ ಬಂದೂಕು ಮಾರಾಟ ಜಾಲ ಪತ್ತೆ: ಎಸ್‌ಪಿ ಗಿರೀಶ್‌ ಮಾಹಿತಿ

ಮನೆಕಳವು, ಸೈಬರ್‌ ಕ್ರೈಂ ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 11 ಜನವರಿ 2021, 16:28 IST
Last Updated 11 ಜನವರಿ 2021, 16:28 IST
ವಶಪಡಿಸಿಕೊಳ್ಳಲಾದ ವಸ್ತುಗಳನ್ನು ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಗಿರೀಶ್ ಪರಿಶೀಲಿಸಿದರು
ವಶಪಡಿಸಿಕೊಳ್ಳಲಾದ ವಸ್ತುಗಳನ್ನು ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಗಿರೀಶ್ ಪರಿಶೀಲಿಸಿದರು   

ರಾಮನಗರ: ಜಿಲ್ಲೆಯಲ್ಲಿ ಆನ್‌ಲೈನ್ ವಂಚನೆ, ಕಳವು ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಂತೆಯೇ ನಕಲಿ ಬಂದೂಕು ತಯಾರಿಸುತ್ತಿದ್ದವರನ್ನೂ ಜೈಲಿಗೆ ಅಟ್ಟಿದ್ದಾರೆ.

ಈಚೆಗೆ ಬೇಧಿಸಲಾದ ಪ್ರಕರಣಗಳು ಹಾಗೂ ಬಂಧಿಸಲಾದ ಆರೋಪಿಗಳ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ನಕಲಿ ನಾಡ ಬಂದೂಕು ತಯಾರಿ ಹಾಗೂ ಮಾರಾಟದ ಆರೋಪದಡಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ವಿಜಯ್ ಕುಮಾರ್ ಎಂಬುವವರನ್ನು ಮಾಗಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಬಂದೂಕು ಖರೀದಿ ಮಾಡಿದ 10 ಮಂದಿಯನ್ನೂ ವಶಕ್ಕೆ ಪಡೆಯಲಾಗಿದೆ. ಇದೇ ತಿಂಗಳ 5ರಂದು ಮಾಗಡಿ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿಕ ಕಾರಿನಲ್ಲಿ ನಾಡ ಬಂದೂಕನ್ನು ಮಾರಾಟ ಮಾಢಲು ಯತ್ನಿಸಿದ್ದ ವಿಜಯ್‌ರನ್ನು
ಬಂಧಿಸಲಾಗಿತ್ತು. ಇವರನ್ನು ವಿಚಾರಣೆಗೆ ಒಳಪಡಿಸಿದಾಗ ಚಿಕ್ಕಬಳ್ಳಾಪುರ ಜಿಲ್ಲೆಯ ನಾಗಸಾನಹಳ್ಳಿ ಗ್ರಾಮದಲ್ಲಿನ ಶೆಡ್‍ನಲ್ಲಿ ಎಸ್‍ಬಿಎಂಎಲ್ ನಾಡ ಬಂದೂಕುಗಳನ್ನು ತಯಾರು ಮಾಡಿ ಹಲವರಿಗೆ ಮಾರಾಟ
ಮಾಡಿದ್ದಾಗಿ ಮಾಹಿತಿ ನೀಡಿದರು.

ಈ ಜಾಲದ ಅಡಿ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಮಾಗಡಿ ತಾಲ್ಲೂಕಿನಲ್ಲಿ ನಾಡ ಬಂದೂಕು ಖರೀದಿ ಮಾಡಿ ಅಕ್ರಮವಾಗಿಟ್ಟುಕೊಂಡಿದ್ದ 10 ಮಂದಿಗಳನ್ನು ವಶಕ್ಕೆ ಪಡೆಯಲಾಗಿದೆ.
ಸುಬ್ಬಾಚಾರಿ, ತಿಮ್ಮಪ್ಪ, ಬಾಲಪ್ಪ, ಶಿವಲಿಂಗ, ಚಿಕ್ಕಮದ್ದೀರಯ್ಯ, ಮುನಿಕೃಷ್ಣ, ಹನುಮಪ್ಪ, ಅಶ್ವಥಪ್ಪ, ನಾರಾಯಣಸ್ವಾಮಿ, ಗೋವಿಂದರೆಡ್ಡಿ ಎಂಬುವವರನ್ನು ಬಂಧಿಸಲಾಗಿದೆ. ಆರೋಪಿ ವಿಜಯ್ ಕುಮಾರ್ ಅವರಿಂದ ಒಟ್ಟು 12 ನಾಡ ಬಂದೂಕುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ತಿಳಿಸಿದರು. ಈ ಬಂದೂಕುಗಳನ್ನು ಸ್ಥಳೀಯ ರೈತರು ಕಾಡುಪ್ರಾಣಿಗಳನ್ನು ಓಡಿಸಲು ಬಳಕೆ ಮಾಡಿಕೊಳ್ಳುತ್ತಿದ್ದರು. ಆದರೆ ಇದರಿಂದ ಮನುಷ್ಯರಿಗೂ ತೊಂದರೆ ಆಗುವ ಸಾಧ್ಯತೆ ಇತ್ತು ಎಂದರು.

ADVERTISEMENT

ಕಳವು ಅರೋಪಿಗಳ ಬಂಧನ: ಮಾಗಡಿ ಠಾಣೆ ಪೊಲೀಸರು ನಾಲ್ಕು ಮಂದಿ ಅಂತ್ ಜಿಲ್ಲಾ ಕಳ್ಳರನ್ನು ಬಂಧಿಸಿದ್ದು, ಅವರಿಂದ 250 ಗ್ರಾಂ ಚಿನ್ನ, 107 ಗ್ರಾಂ ಬೆಳ್ಳಿ ಆಭರಣವನ್ನು ವಶಪಡಿಸಿಕೊಂಡಿದ್ದಾರೆ.
ಸುನೀಲ್ ಕುಮಾರ್, ಸಂತೋಷ್ ಕುಮಾರ್, ಪುಷ್ಪಾ , ಮಾಲಾ ಬಾಯಿ ಬಂಧಿತರು. ಇವರಿಂದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ 14 ಲಕ್ಷ ನಗದು ಹಾಗೂ ಹಾಗೂ 2 ಟಿವಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.
ಮಾಗಡಿ ಉಪವಿಭಾಗ ಡಿವೈಎಸ್ಪಿ ಓಂಪ್ರಕಾಶ್, ಸರ್ಕಲ್ ಇನ್‌ಸ್ಪೆಕ್ಟರ್ ಮಂಜುನಾಥ್, ಮಾಗಡಿ ಠಾಣೆ ಎಸ್ ಐ ಶ್ರೀಕಾಂತ್, ಸೈಬರ್ ಕ್ರೈಂ ಅಧಿಕಾರಿ ಅಶೋಕ್ ಕುಮಾರ್ ಇದ್ದರು.

ಮಗನಿಂದಲೇ ತಂದೆ ಬ್ಯಾಂಕ್ ಹಣ ಲೂಟಿ

ತಂದೆ ಹಾಗೂ ಅತ್ತೆಯ ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದ ಸಿಮ್ ಕಾರ್ಡ್ ಕಳವು ಮಾಡಿ ಹಣವನ್ನು ಬೇರೆ ಖಾತೆಗೆ ವರ್ಗಾಯಿಸಿ ಹಣ ಡ್ರಾ ಮಾಡಿಕೊಂಡ ಮಗ ಹಾಗೂ ಅದಕ್ಕೆ ಸಹಕರಿಸಿದ ಇಬ್ಬರನ್ನು ಸೈಬರ್ ಕ್ರೈಂ
ಪೊಲೀಸರು ಬಂಧಿಸಿದ್ದಾರೆ. ಕನಕಪುರ ತಾಲ್ಲೂಕಿನ ವಿದ್ಯಾಸಾಗರ್, ಶಶಿಕುಮಾರ್, ಚಲುವ ನಾರಾಯಣ್ ಬಂಧಿತರು. ಆರೋಪಿಗಳಿಂದ ಎರಡು ಮೊಬೈಲ್ ಪೋನ್, ಒಂದು ಟಾಟಾ ಏಸ್, 7.90 ಲಕ್ಷ ನಗದು, ಪಾಸ್‍ಬುಕ್, ಸಿಮ್ ಕಾರ್ಡ್, ಎಟಿಎಂ ಕಾರ್ಡ್‌ ಸೇರಿದಂತೆ ಒಟ್ಟು ಮೌಲ್ಯ 9.40 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ತಮ್ಮ ತಂದೆ ಹಾಗೂ ಖಾತೆಯಲ್ಲಿ ಹೆಚ್ಚಿನ ಹಣ ಇರುವುದನ್ನು ಮನಗೊಂಡಿದ್ದ ಆರೋಪಿ ಚೆಲುವನಾರಾಯಣ ಈ ಖಾತೆಗಳಿಗೆ ಲಿಂಕ್‌ ಆಗಿದ್ದ ಸಿಮ್ ಕದ್ದು ನಕಲಿ ಮಾಡಿಕೊಂಡು ಅದನ್ನು ಇನ್ನಿತರ ಆರೋಪಿಗಳಮೊಬೈಲ್‌ಗೆ ಬಳಸಿ ಅದಕ್ಕೆ ಫೋನ್‌ ಪೇ ಆ್ಯಪ್‌ ಹಾಕಿಕೊಂಡಿದ್ದರು. ಅದಕ್ಕೆ ಈ ಎರಡೂ ಬ್ಯಾಂಕ್ ಖಾತೆ ಲಿಂಕ್ ಮಾಡಿ ಹಣ ವರ್ಗಾವಣೆ ಮಾಡಿಕೊಂಡಿದ್ದರು. ನಂಬರ್‌ ಬದಲಾದ ಕಾರಣ ಇದು ಖಾತೆದಾರರ ಅರಿವಿಗೆಬಂದಿರಲಿಲ್ಲ. ಮೂರು ತಿಂಗಳ ಬಳಿಕ ಘಟನೆ ಬೆಳಕಿಗೆ ಬಂದಿದ್ದು, ದೂರು ಆಧರಿಸಿ ತನಿಖೆ ನಡೆಸಿದ ಸೈಬರ್‌ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿದರು ಎಂದು ಎಸ್ಪಿ ಮಾಹಿತಿ ನೀಡಿದರು.

ಕಾರು ಮಾರಿದವರೇ ಕದ್ದರು

ಒಎಲ್‌ಎಕ್ಸ್‌ನಲ್ಲಿ ಕಾರು ಮಾರಾಟ ಮಾಡಿ, ಮತ್ತೆ ಕಾರಿನ ನಕಲಿ ಕೀ ಬಳಕೆ ಮಾಡಿ ಅದೇ ಕಾರನ್ನು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಕುಂಬಳಗೂಡು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕ್ರಾಂತಿ ಕಿರಣ್ ರೆಡ್ಡಿ, ನಾಗೇಶ್ವರ್ ರಾವ್, ಅರವಿಂದ್ ಬಂಧಿತರು. ಆರೋಪಿಗಳು ಇನೋವಾ ಕ್ರಿಸ್ಟಾ ಕಾರನ್ನು ವ್ಯಕ್ತಿಯೊಬ್ಬರಿಗೆ ಒಎಲ್‌ಎಕ್ಸ್ ಆ್ಯಪ್‌ ಮೂಲಕ ಮಾರಿದ್ದರು. ಕಾರು ಮಾರಾಟವಾದ ಬಳಿಕ ನಕಲಿ ಕೀ
ಬಳಕೆ ಮಾಡಿಕೊಂಡು ಕಳ್ಳತನ ಮಾಡಿ ಪರಾರಿಯಾಗಿದ್ದರು ಎಂದು ಎಸ್ಪಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.