ADVERTISEMENT

ಕೋವಿಡ್ ನಿಯಂತ್ರಣ: ಮುನ್ನೆಚ್ಚರಿಕೆ ಅಗತ್ಯ

ಯುವ ಸ್ಪಂದನ ಕೇಂದ್ರದಿಂದ ಆನ್‌ಲೈನ್‌ ಅರಿವು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 2:32 IST
Last Updated 25 ಸೆಪ್ಟೆಂಬರ್ 2020, 2:32 IST

ರಾಮನಗರ: ‘ಸರ್ಕಾರಗಳು ಕೋವಿಡ್‌ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಿವೆ. ಜನರು ಸಹ ನಮ್ಮ ಜಾಗರೂಕತೆಯನ್ನು ನಾವೇ ಅಳವಡಿಸಿಕೊಳ್ಳುವ ಅಗತ್ಯವಿದೆ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ನಾಗರತ್ನಾ ತಿಳಿಸಿದರು.

ಗುರುವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯುವ ಸ್ಪಂದನ ಕೇಂದ್ರದಲ್ಲಿ ಆಯೋಜಿಸಿದ್ದ ಜಿಲ್ಲೆಯ ಯುವ ಜನತೆಯೊಂದಿಗೆ ಕೋವಿಡ್-19 ಕುರಿತು ಆನ್‍ಲೈನ್ ಮುಖಾಂತರ ಅರಿವು ಮೂಡಿಸುವ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೊರೊನಾ ನಿಯಂತ್ರಣ ಮಾಡಲು ನಮ್ಮ ಇಲಾಖೆಯ ಯುವ ಸ್ಪಂದನ ಕೇಂದ್ರದ ಮೂಲಕ ಆನ್‍ಲೈನ್ ಮೂಲಕ ಮಾಹಿತಿ ನೀಡಿ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.

ADVERTISEMENT

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ನಾಗರಾಜು ಮಾತನಾಡಿ, ಕೊರೊನಾ ಸೋಂಕು ಎಲ್ಲ ವಯೋಮಾನದವರಿಗೂ ಹರಡಲಿದೆ. ಹಾಗಾಗಿ, ಗುಂಪು ಇರುವ ಸ್ಥಳಗಳಲ್ಲಿ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ ಎಂದರು. ಈ ರೋಗದ ಹಂತಗಳು, ಹತೋಟಿ ಮತ್ತು ವಹಿಸಬಹುದಾದ ಮುಂಜಾಗೃತಾ ಕ್ರಮಗಳ ಬಗ್ಗೆ ಅವರು ವಿವರಣೆ ನೀಡಿದರು.

ಯುವ ಸ್ಪಂದನ ಕೇಂದ್ರದ ಪರಿವರ್ತಕ ಡಾ.ಡೊಳ್ಳು ಚಂದ್ರು ಮಾತನಾಡಿ, ಯುವ ಜನರಿಂದ ಯುವ ಜನರಿಗಾಗಿ ಜನರಲ್ಲಿನ ಸಂಬಂಧಗಳು, ಸುರಕ್ಷತೆ, ಸಂವಹನ, ಮಾರ್ಗದರ್ಶನ, ಆರೋಗ್ಯ ಜೀವನ ಶೈಲಿ, ಬೆಳವಣಿಗೆ ಹಾಗೂ ಶಿಕ್ಷಣದಂತಹ ಹಲವು ಆಶಯಗಳ ಅನುಷ್ಠಾನ ಕಾರ್ಯದಲ್ಲಿ ಯುವಸ್ಪಂದನ ಕೇಂದ್ರ ಕೆಲಸ ನಿರ್ವಹಿಸುತ್ತಿದೆ. ಕಳೆದ 8 ತಿಂಗಳಿಂದ ಎದುರಾಗಿರುವ ಕೋವಿಡ್‌ ಜನರನ್ನು ಚಿಂತೆಗೀಡುಮಾಡಿದೆ. ಜನರು ಭಯಪಡುವ ಅವಶ್ಯಕತೆಯಿಲ್ಲ. ಬದಲಿಗೆ ಎಚ್ಚರ ವಹಿಸುವ ಮೂಲಕ ನಾವು ರೋಗದ ಹತೋಟಿಗೆ ಪಣತೊಡೋಣ. ಹೆಚ್ಚಿನ ಮಾಹಿತಿ ಅವಶ್ಯವಿದ್ದಲ್ಲಿ ಯುವ ಪರಿವರ್ತಕರ ನೆರವು ಪಡೆಯಿರಿ ಎಂದು ಕರೆ ನೀಡಿದರು.

ಕೋಲಾರದ ಬಂಗಾರು ತಿರುಪತಿ ಪ್ರಥಮದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸತೀಶ್, ರಾಷ್ಟ್ರೀಯ ಯೋಗಪಟು ಸಂತೋಷ್, ಉಪನ್ಯಾಸಕ ಡಾ.ಮಂಜುನಾಥ್, ಯಕ್ಷಗಾನ ಕಲಾವಿದರಾದ ಕುಮಾರ್, ಆನಂದ್, ಧನುಷ್, ಪ್ರಶಾಂತ್, ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.