ADVERTISEMENT

ಕನಕಪುರ: ಸಿಎಸ್‌ಆರ್ ಹಣದಿಂದ ಸರ್ಕಾರಿ ಶಾಲೆ ನಿರ್ಮಾಣ

ಕನಕಪುರ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಡಿ.ಕೆ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 3:13 IST
Last Updated 11 ಸೆಪ್ಟೆಂಬರ್ 2025, 3:13 IST
ಕನಕಪುರದಲ್ಲಿ ಬುಧವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಡಿ.ಕೆ ಶಿವಕುಮಾರ್ ಉದ್ಘಾಟಿಸಿದರು
ಕನಕಪುರದಲ್ಲಿ ಬುಧವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಡಿ.ಕೆ ಶಿವಕುಮಾರ್ ಉದ್ಘಾಟಿಸಿದರು   

ಕನಕಪುರ: ಶಿಕ್ಷಕರಿಗೆ ವಿಶ್ವದಲ್ಲೇ ವಿಶೇಷವಾದ ಸ್ಥಾನಮಾನವಿದ್ದು, ಬೇರೆ ಯಾರಿಗೂ ಅದು ಸಿಗುವುದಿಲ್ಲ. ಜಗತ್ತಿನಲ್ಲಿ ಶಿಕ್ಷಕರು ಅಷ್ಟು ಶ್ರೇಷ್ಠವಾದವರು ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.

ತಾಲ್ಲೂಕು ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದರು.

ಮನುಷ್ಯನಿಗೆ ವಿದ್ಯೆ, ವಿನಯ, ಉದ್ಯೋಗ, ಹಣ, ಧರ್ಮ, ಸುಖ ಇವೆಲ್ಲವೂ ವಿದ್ಯೆಯಿಂದಲೇ ಲಭಿಸುತ್ತದೆ. ವಿದ್ಯೆಗೆ ಪರ್ಯಾಯವಾದ ಮತ್ತೊಂದು ವಸ್ತು ಜಗತ್ತಿನಲ್ಲಿ ಯಾವುದು ಇಲ್ಲ. ಸಮಾಜದಲ್ಲಿ ನ್ಯಾಯ ನೀತಿ ಧರ್ಮದಿಂದ ಅವರು ಬಾಳಲು ಶಿಕ್ಷಣ ಮುಖ್ಯ ಎಂದರು.

ADVERTISEMENT

ವಿದ್ಯೆ ನೀರಿನಲ್ಲಿ ನೆನೆಯದ, ಅಗ್ನಿಯಲ್ಲಿ ಸುಡದ ಗುಪ್ತ ನಿಧಿ. ಮಕ್ಕಳಿಗೆ ಜಾಗತಿಕ ಮಟ್ಟದಲ್ಲಿ ಶಿಕ್ಷಣವನ್ನು ನೀಡಲು ತಾಲ್ಲೂಕಿನ ಶಿಕ್ಷಕರು ಸಿದ್ಧರಾಗಬೇಕು. ತಾಯಿ ಉಸಿರನ್ನು ನೀಡುತ್ತಾಳೆ, ತಂದೆ ಹೆಸರನ್ನು ನೀಡುತ್ತಾನೆ, ಗುರು ಉಸಿರು ಇರುವ ತನಕ ಹೆಸರು ಇರುವಂತೆ ಮಾಡುತ್ತಾನೆ. ಶಿಕ್ಷಕರು ಮಾರ್ಗದರ್ಶಕರಾಗಬೇಕೆಂದು ಕರೆ ನೀಡಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಖಾಸಗಿ ಶಾಲೆಗಳ ಸಮಾನವಾಗಿ ಮೂಲಸೌಕರ್ಯಗಳು ದೊರಕಬೇಕು ಎಂಬ ಉದ್ದೇಶದಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಿಎಸ್‌ಆರ್ ಹಣದಿಂದ ಸರ್ಕಾರಿ ಹೈಟೆಕ್ ಶಾಲೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ತಾಲ್ಲೂಕಿನಲ್ಲೂ ಶಾಲಾ ಕಟ್ಟಡಗಳ ನಿರ್ಮಾಣ ಪ್ರಾರಂಭವಾಗಿದೆ ಎಂದರು.

ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಸರ್ಕಾರದಿಂದಲೇ ಹೊಸ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ. ಕಾರ್ಪೊರೇಟ್ ಕಂಪನಿಗಳ ಲಾಭದ ಶೇಕಡ ಎರಡರಷ್ಟು ಮೊತ್ತವನ್ನು ಸೇವಾ ಕಾರ್ಯ ಬಳಕೆ ಮಾಡಲು ಕಾಯ್ದೆ ರೂಪಿಸಲಾಗಿದೆ. ಅಲ್ಲದೆ ಸರ್ಕಾರಿ ಶಾಲೆಗಳನ್ನು ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳು ದತ್ತು ತೆಗೆದುಕೊಂಡು ನಿರ್ವಹಣೆ ಮಾಡಲಿವೆ ಎಂದು ಹೇಳಿದರು.

ಬೆಂಗಳೂರಿನಲ್ಲಿ 25 ಲಕ್ಷ ಐಟಿ ತಜ್ಞರು ಇದ್ದಾರೆ. ಅಮೆರಿಕದಲ್ಲಿ 13 ಲಕ್ಷ ಇದ್ದಾರೆ. ಬೆಂಗಳೂರಿಗೆ ಜಾಗತಿಕ ಮಟ್ಟದಲ್ಲಿ ವಿದ್ಯಾರ್ಥಿಗಳನ್ನು ತಯಾರು ಮಾಡುವ ಜವಾಬ್ದಾರಿ ನಮ್ಮದಾಗಿದೆ. ತಾಲ್ಲೂಕಿನ ಮಕ್ಕಳು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವಂತೆ ನೋಡಿಕೊಳ್ಳಬೇಕೆಂದು ಶಿಕ್ಷಕರಿಗೆ ಸೂಚನೆ ನೀಡಿದರು.

ಶಿಕ್ಷಕರ ದಿನಾಚರಣೆ ಅಂಗವಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವಿಭಾಗದಲ್ಲಿ ರಸಪ್ರಶ್ನೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ವಿಜೇತರಿಗೆ ಮತ್ತು 2024-25ನೇ ಸಾಲಿನಲ್ಲಿ ನಿವೃತ್ತಿಯಾದ 75 ಶಿಕ್ಷಕರನ್ನು ಗೌರವಿಸಲಾಯಿತು.

ಶಿಕ್ಷಕರ ದಿನಾಚರಣೆ ಅಂಗವಾಗಿ ಲಯನ್ಸ್ ಮತ್ತು ಲಿಯೊ ಸಂಸ್ಥೆಯಿಂದ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು ಶಿಕ್ಷಕರು ಸೇರಿದಂತೆ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು.

ವಿಧಾನ ಪರಿಷತ್ ಸದಸ್ಯ ಎಸ್.ರವಿ, ಪುಟ್ಟಣ್ಣ ಮಾತನಾಡಿದರು. ಆರ್‌ಇಎಸ್ ಅಧ್ಯಕ್ಷ ಎಚ್.ಕೆ.ಶ್ರೀಕಂಠ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ. ವಿಜಯದೇವ, ಕೆ.ಎನ್.ದಿಲೀಪ, ಮೂರ್ತಿ, ಜಿಲ್ಲಾಧಿಕಾರಿ ಯಶವಂತ್ ವಿ.ಗುರಿಕಾರ್, ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್ ಜೈನ್, ತಹಶೀಲ್ದಾರ್ ಸಂಜಯ್, ಇಒ ಅವಿನಾಶ್, ನಗರಸಭೆ ಅಧ್ಯಕ್ಷೆ ಹೇಮರಾಜು, ನಗರಸಭಾ ಸದಸ್ಯರು, ಶಿಕ್ಷಕರ ದಿನಾಚರಣೆ ಆಚರಣಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶಿಕ್ಷಕರ ದಿನಾಚರಣೆಯಲ್ಲಿ ಡಿಕೆ ಶಿವಕುಮಾರ್ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.