ADVERTISEMENT

‘ಕನ್ನಡ ಹಬ್ಬ’ದಲ್ಲಿ ಮಿಂದೆದ್ದ ರಾಮನಗರ

ಮಾಜಿ ಶಾಸಕ ಸಿ.ಎಂ. ಲಿಂಗಪ್ಪಗೆ ‘ಪೌರ ಸನ್ಮಾನ’; 17 ಸಾಧಕರಿಗೆ ‘ಕೆಂಗಲ್ ಹನುಮಂತಯ್ಯ ಪ್ರಶಸ್ತಿ; ಗಮನ ಸೆಳೆದ ಆಕರ್ಷಕ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 6:36 IST
Last Updated 24 ಡಿಸೆಂಬರ್ 2025, 6:36 IST
<div class="paragraphs"><p>ರಾಮನಗರದ ಕ್ರೀಡಾಂಗಣದಲ್ಲಿ ನಗರಸಭೆ ಹಮ್ಮಿಕೊಂಡಿದ್ದ ‘ರೇಷ್ಮೆನಾಡ ಕನ್ನಡ ಹಬ್ಬ’ದಲ್ಲಿ ಮಾಜಿ ಶಾಸಕ ಸಿ.ಎಂ. ಲಿಂಗಪ್ಪ ಅವರಿಗೆ ಪೌರ ಸನ್ಮಾನ ಮಾಡಲಾಯಿತು. </p></div>

ರಾಮನಗರದ ಕ್ರೀಡಾಂಗಣದಲ್ಲಿ ನಗರಸಭೆ ಹಮ್ಮಿಕೊಂಡಿದ್ದ ‘ರೇಷ್ಮೆನಾಡ ಕನ್ನಡ ಹಬ್ಬ’ದಲ್ಲಿ ಮಾಜಿ ಶಾಸಕ ಸಿ.ಎಂ. ಲಿಂಗಪ್ಪ ಅವರಿಗೆ ಪೌರ ಸನ್ಮಾನ ಮಾಡಲಾಯಿತು.

   

ರಾಮನಗರ: ರಾರಾಜಿಸುತ್ತಿದ್ದ ಕನ್ನಡ ಬಾವುಟಗಳು. ಝಗಮಗಿಸುವ ವರ್ಣರಂಜಿತ ವಿದ್ಯುತ್ ದೀಪಗಳ ವೈಭವ. ಕಣ್ಮನ ಸೆಳೆದ ಜಾನಪದ ಕಲಾತಂಡಗಳ ಪ್ರದರ್ಶನ. ನಗರಸಭೆಯ ಕಾರ್ಯವೈಖರಿ ಪರಿಚಯಿಸಿದ ಸ್ತಬ್ಧಚಿತ್ರಗಳು. ಓದುಗರನ್ನು ತಣಿಸಿದ ಕನ್ನಡ ಪುಸ್ತಕ ಮಳಿಗೆಗಳು. ಮಾಹಿತಿ ಕೋಶದಂತಿದ್ದ ವಸ್ತು ಪ್ರದರ್ಶನ. ಸಂಗೀತದ ರಸದೌತಣ ಬಡಿಸಿದ ಸಂಗೀತ ಸಂಜೆ.

– ಜಿಲ್ಲಾ ಕ್ರೀಡಾಂಗಣದಲ್ಲಿ ನಗರಸಭೆ ವತಿಯಿಂದ ಸೋಮವಾರ ರಾತ್ರಿ ಹಮ್ಮಿಕೊಂಡಿದ್ದ ‘ರೇಷ್ಮೆನಾಡ ಕನ್ನಡ ಹಬ್ಬ’ದ ಉತ್ಸವದಲ್ಲಿ ನಗರದಾದ್ಯಂತ ಕಂಡುಬಂದ ದೃಶ್ಯಗಳಿವು. ಕನ್ನಡ ರಾಜ್ಯೋತ್ಸವವು ಉತ್ಸವದ ರೂಪ ಪಡೆದು ಸಾವಿರಾರು ಜನರ ಸಂಗಮಕ್ಕೆ ಕನ್ನಡ ಹಬ್ಬ ಸಾಕ್ಷಿಯಾಯಿತು.

ADVERTISEMENT

ಆಕರ್ಷಕ ಮೆರವಣಿಗೆ: ವೇದಿಕೆ ಕಾರ್ಯಕ್ರಮಕ್ಕೆ ಮುಂಚೆ ಮಿನಿ ವಿಧಾನಸೌಧದಿಂದ ಕ್ರೀಡಾಂಗಣದವರೆಗೆ ನಡೆದ ಭುವನೇಶ್ವರಿ ಚಿತ್ರ, ಸ್ತಬ್ಧಚಿತ್ರ ಹಾಗೂ ಪೌರ ಸನ್ಮಾನ ಪುರಸ್ಕೃತ ಮಾಜಿ ಶಾಸಕ ಸಿ.ಎಂ. ಲಿಂಗಪ್ಪ ಅವರ ಪಲ್ಲಕ್ಕಿ ಮೆರವಣಿಗೆ ಗಮನ ಸೆಳೆಯಿತು. ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು, ವಿವಿಧ ಸಂಘ–ಸಂಘಟನೆಗಳ ಸದಸ್ಯರು, ಸಾರ್ವಜನಿಕರು ಕನ್ನಡ ಬಾವುಟ ಹಿಡಿದು ಸಾಗಿದರು.

ಮೆರವಣಿಯ ಅಲ್ಲಲ್ಲಿ ಜನರು ಕನ್ನಡಾಂಬೆಗೆ ವಂದಿಸಿ, ಲಿಂಗಪ್ಪ ಅವರ ಮೇಲೆ ಪುಷ್ಪ ಮಳೆಗರೆದರು. ಐಜೂರು ವೃತ್ತ, ಹಳೆ ಬಸ್ ನಿಲ್ದಾಣ, ಎಂ.ಜಿ. ರಸ್ತೆ ಮಾರ್ಗವಾಗಿ ಬಂದ ಮೆರವಣಿಗೆ ಸಂಜೆ ಕ್ರೀಡಾಂಗಣ ತಲುಪಿತು. ನಾಡಿನ ವಿವಿಧ ಭಾಗಗಳ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರಗು ತಂದವು.

ಕಲಾ ಸಂಗಮ: ಹೋಳಿನೃತ್ಯ, ಜಗ್ಗಲಗಿ ಮೇಳ, ನಾಸಿಕ್ ಡೋಲು, ನಗಾರಿ, ಡಮಾಮಿ ನೃತ್ಯ, ಸೋಲಿಗರ ನೃತ್ಯ, ಮರಗಾಲು ಮತ್ತು ಗಾರುಡಿ ಗೊಂಬೆ, ಮಣೇವು ನೃತ್ಯ, ಕರಡಿ ಮಜಲು, ಜೇನು ಕುರುಬರ ನೃತ್ಯ, ಲೆಂಗಿನ್ ನೃತ್ಯ, ಚಟ್ಟಿಮೇಳ, ಮಹಿಳಾ ಕೋಲಾಟ, ಕಾಡುಗೊಲ್ಲರ ಕೋಲಾಟ, ಲಂಬಾಣಿ ಬೂಮರ್ ನೃತ್ಯ, ಪೂಜಾ ಕುಣಿತ, ಡೊಳ್ಳು, ವೀರಗಾಸೆ,ಪಟ, ಸೋಮನ ಕುಣಿತ, ಚಿಲಿಪಿಲಿ ಗೊಂಬೆ, ಕೋಳಿ ನೃತ್ಯಗಳು ಕಣ್ಮನ ತಣಿಸಿದವು.

ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ವಸ್ತು ಪ್ರದರ್ಶನ, ಕನ್ನಡ ಪುಸ್ತಕಗಳ ಮಳಿಗೆಗಳಲ್ಲಿ ಜನಸಂದಣಿ ಕಂಡುಬಂತು. ಜನ ಅಂಗಡಿಗಳಿಗೆ ಬಂದು ಪ್ರದರ್ಶನ ಕಣ್ತುಂಬಿಕೊಂಡರು. ಇಷ್ಟದ ಪುಸ್ತಕ ಖರೀದಿಸಿ ಕನ್ನಡ ಸೆಲ್ಫಿ ಬೂತ್‌ನಲ್ಲಿ ಜನರು ಫೋಟೊ ತೆಗೆದುಕೊಂಡು ಸಂಭ್ರಮಿಸಿದರು.

ದಸರಾ ಮಾದರಿ:  ‘ಮೈಸೂರು ದಸರಾದಂತೆ ಕನ್ನಡ ಹಬ್ಬವನ್ನು ಆಯೋಜಿಸಲಾಗಿದೆ. ಇಷ್ಟು ಅದ್ದೂರಿಯಾಗಿ ಬೇರೆಲ್ಲೂ ಆಚರಿಸಿಲ್ಲ. ಕನ್ನಡವೇ ನಮ್ಮ ಸರ್ವಸ್ವವಾಗಬೇಕು. ನಮ್ಮ ನಾಡು, ನುಡಿ ಹಾಗೂ ಜಲದ ವಿಷಯದಲ್ಲಿ ಎಲ್ಲರೂ ಅಭಿಮಾನ ಬೆಳೆಸಿಕೊಂಡು ಕನ್ನಡತನ ಮೆರೆಯಬೇಕು’ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಎಂದು ಸಲಹೆ ಮಾಡಿದರು.

ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕನ್ನಡದಲ್ಲಿ ಶೇ 100ರಷ್ಟು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಛಲವಾದಿ ಮಹಾಸಭಾ ಅಧ್ಯಕ್ಷೆ ವಾಣಿ ಶಿವರಾಂ ಸೇರಿದಂತೆ ಗಣ್ಯರನ್ನು ಸನ್ಮಾನಿಸಲಾಯಿತು. ಬ್ಯಾಡರಹಳ್ಳಿ ಶಿವಕುಮಾರ್ ಅತಿಥಿಗಳನ್ನು ಸ್ವಾಗತಿಸಿದರು. ಕಂದಾಯ ನಿರೀಕ್ಷಕ ಆರ್. ನಾಗರಾಜು ಪ್ರಶಸ್ತಿ ವಿಜೇತರನ್ನು ಪರಿಚಯಿಸಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ. ರೇವಣ್ಣ, ವಿಧಾನ ಪರಿಷತ್ ಸದಸ್ಯ ಎಸ್. ರವಿ, ವಿಶ್ವಕರ್ಮ ಅಭಿವೃದ್ಧಿ ನಿಗಮದ ಪಿ. ಸುಜ್ಞಾನಮೂರ್ತಿ, ಜಿಲ್ಲಾಧ್ಯಕ್ಷ ಕೆ. ರಾಜು, ತಾಲ್ಲೂಕು ಅಧ್ಯಕ್ಷ ವಿ.ಎಚ್. ರಾಜು, ಜಿಬಿಡಿಎ ಅಧ್ಯಕ್ಷ ಗಾಣಕಲ್ ನಟರಾಜ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎರೇಹಳ್ಳಿ ವೈ.ಎಚ್. ಮಂಜು, ಯೋಜನಾ ನಿರ್ದೇಶಕ ಜಿ.ಡಿ. ಶೇಖರ್, ಹಿಂದುಳಿದ ಜಾತಿಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ರೈಡ್ ನಾಗರಾಜ್, ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರಸ್ವಾಮಿ, ಟಿಎಪಿಸಿಎಂಎಸ್ ಅಧ್ಯಕ್ಷ ದೊಡ್ಡಿ ಸೂರಿ, ನಗರಸಭೆ ಪೌರಾಯುಕ್ತ ಡಾ. ಜಯಣ್ಣ, ಉಪಾಧ್ಯಕ್ಷೆ ಆಯಿಷಾ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷಾ   ಇದ್ದರು.

ಸಾಲುಮರದ ನಿಂಗಣ್ಣ ಸಾಹಿತಿ ಡಾ. ಭೈರಮಂಗಲ ರಾಮೇಗೌಡ ಡಾ. ಶೇಖರ್ ಸುಬ್ಬಯ್ಯ ಸೇರಿದಂತೆ ವಿವಿಧ ಕ್ಷೇತ್ರಗಳ 17 ಸಾಧಕರಿಗೆ ‘ಕೆಂಗಲ್ ಹನುಮಂತಯ್ಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು
ಗಮನ ಸೆಳೆದ ಜಾನಪದ ಕಲಾ ತಂಡಗಳು
ಕಾರ್ಯಕ್ರಮದಲ್ಲಿ ಸೇರಿದ್ದ ಜನ
ಪ್ರೇಕ್ಷಕರಿಗೆ ರಸದೌತಣ ಬಡಿಸಿದ ಸಂಗೀತ ನಿರ್ದೇಶಕ ಗುರುಕಿರಣ್ ಗಾಯನ

‘ಕೆಂಗಲ್ ಹನುಮಂತಯ್ಯ ಹೆಸರು ಚಿರಸ್ಥಾಯಿ’

‘ನಮ್ಮ ರಾಮನಗರದ ಮಣ್ಣಿನ ಕೆಂಗಲ್ ಹನುಮಂತಯ್ಯ ಅವರು ನಾಡು ಕಂಡ ಶ್ರೇಷ್ಠ ರಾಜಕಾರಣಿ. ರಾಜ್ಯದ ಆಡಳಿತ ಕೇಂದ್ರವಾದ ವಿಧಾನಸೌಧವನ್ನು ಕಟ್ಟಿದವರು. ಅವರ ಹೆಸರಿನಲ್ಲಿ ನಗರಸಭೆಯಿಂದ ತಾಲ್ಲೂಕಿನ ಸಾಧಕರಿಗೆ ಕೆಂಗಲ್ ಹನುಮಂತಯ್ಯ ಪ್ರಶಸ್ತಿ ನೀಡುವ ಮೂಲಕ ಅವರ ಹೆಸರನ್ನು ಚಿರಸ್ಥಾಯಿಗೊಳಿಸಲಾಗುತ್ತಿದೆ. ಮುತ್ಸದ್ದಿ ರಾಜಕಾರಣಿ ಸಿ.ಎಂ. ಲಿಂಗಪ್ಪ ಅವರ ಕೊಡುಗೆ ದೊಡ್ಡದು. ಅವರಿಗೆ ಪೌರ ಸನ್ಮಾನ ಮಾಡುತ್ತಿರುವುದು ನಮಗೆ ಸಿಕ್ಕ ಭಾಗ್ಯ’ ಎಂದು ಪ್ರಾಸ್ತಾವಿಕ ಮಾತುಗಳನ್ನಾಡಿದ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಹೇಳಿದರು. ಸಂಗೀತದ ರಸದೌತಣ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ನೇತೃತ್ವ ತಂಡವು ರಾತ್ರಿ ಪ್ರೇಕ್ಷಕರಿಗೆ ಸಂಗೀತದ ರಸದೌತಣ ಬಡಿಸಿತು. ವೇದಿಕೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಶುರುವಾದ ಸಂಗೀತ ಕಾರ್ಯಕ್ರಮ ಮಧ್ಯರಾತ್ರಿವರೆಗೆ ಜನರನ್ನು ಹಿಡಿದಿಟ್ಟಿತು. ಗುರುಕಿರಣ್ ಸೇರಿದಂತೆ ಖ್ಯಾತ ಗಾಯಕರಾದ ಮಂಗ್ಲಿ ಮಾಲ್ಗುಡಿ ಶುಭ ರಾಜೇಶ್ ಕೃಷ್ಣನ್ ಅನುರಾಧ ಭಟ್ ಗಣೇಶ್ ಕಾರಂತ್ ಕಂಠಸಿರಿಯ ಹಾಡುಗಳು ಜನರನ್ನು ಕುಣಿಸಿದವು. ನಗರಸಭೆ ಅಧ್ಯಕ್ಷ ಶಶಿ ಪೌರಾಯುಕ್ತ ಜಯಣ್ಣ ಸದಸ್ಯರು ಗಣ್ಯರು ಸಹ ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಅಭಿಮಾನದ ಸನ್ಮಾನಕ್ಕೆ ಲಿಂಗಪ್ಪ ಹರ್ಷ

‘ಕನ್ನಡ ನಮ್ಮ ತನು–ಮನವಾದಾಗ ಮಾತ್ರ ಕನ್ನಡದ ಉಳಿವು ಬೆಳೆವು ಸಾಧ್ಯ’ ಎಂದು ಪೌರ ಸನ್ಮಾನ ಸ್ವೀಕರಿಸಿದ ಮಾಜಿ ಶಾಸಕ ಸಿ.ಎಂ. ಲಿಂಗಪ್ಪ ಹೇಳಿದರು.  ‘ಆರು ದಶಕದ ಸಾರ್ವಜನಿಕ ಜೀವನದಲ್ಲಿ ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ. ಅದನ್ನು ಸೇವೆ ಅಥವಾ ಕೊಡುಗೆ ಎಂದು ಭಾವಿಸಿ ಪೌರ ಸನ್ಮಾನ ಮಾಡಿರುವ ನಗರಸಭೆಗೆ ನಾನು ಋಣಿ. ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಅವರ ಪ್ರೀತಿಯಿದಿಂದಾಗಿ ಸನ್ಮಾನಕ್ಕೆ ಒಪ್ಪಬೇಕಾಯಿತು’ ಎಂದರು. ಕೆಂಗಲ್‌ ಪ್ರಶಸ್ತಿ ಪುರಸ್ಕೃತರು ಸಾಲುಮರದ ನಿಂಗಣ್ಣ (ಪರಿಸರ) ಡಾ. ಭೈರಮಂಗಲ ರಾಮೇಗೌಡ (ಸಾಹಿತ್ಯ) ಪಿ. ನಾಗರಾಜ್ (ಹೈನುಗಾರಿಕೆ) ಡಾ. ಎಂ. ಭೈರೇಗೌಡ (ಜಾನಪದ) ಹಾಜಿ ಸಯ್ಯದ್ ಜಿಯಾವುಲ್ಲಾ (ಆಡಳಿತ–ಸಮಾಜ ಸೇವೆ) ಚನ್ನಕೇಶವ (ಸಮಾಜ ಸೇವೆ) ಕೃಷ್ಣರಾಜು (ರಂಗಭೂಮಿ) ಡಾ. ಶೇಖರ್ ಸುಬ್ಬಯ್ಯ (ವೈದ್ಯಕೀಯ) ಲಕ್ಷ್ಮಣ್ (ಸಮಾಜ ಸೇವೆ) ಆಶಾ (ಮಾನವೀಯ ಸೇವೆ) ಅಂಕನಹಳ್ಳಿ ಶಿವಣ್ಣ (ಜಾನಪದ ಕಲೆ) ಎಚ್. ಶ್ರೀನಿವಾಸ್ (ವೈದ್ಯಕೀಯ ಸಂಶೋಧನೆ) ವಿಷಕಂಠ (ಕ್ರೀಡೆ) ಶ್ರೀನಿವಾಸ ವಿ. (ಕಲೆ–ನಾಟಕ) ಎಂ.ಜಿ. ಶಿವಲಿಂಗಯ್ಯ (ಆಡಳಿತ) ಕವಿತಾ ರಾವ್ (ಸಮಾಜ ಸೇವೆ) ಆಸಿಫ್ ಷರೀಫ್ (ಶಿಕ್ಷಣ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.