ADVERTISEMENT

ದಲಿತರಿಗೆ ಸಿ.ಎಂ ಸ್ಥಾನಕ್ಕಾಗಿ ಜನಾಂದೋಲನ: ದಲಿತ ಸಂಘಟನೆಗಳ ಒಕ್ಕೂಟದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 2:45 IST
Last Updated 9 ನವೆಂಬರ್ 2025, 2:45 IST
<div class="paragraphs"><p>ರಾಮನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ&nbsp;ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ. ಎಂ. ವೆಂಕಟಸ್ವಾಮಿ ಮಾತನಾಡಿದರು. </p></div>

ರಾಮನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ. ಎಂ. ವೆಂಕಟಸ್ವಾಮಿ ಮಾತನಾಡಿದರು.

   

ರಾಮನಗರ: ‘ದಲಿತರಿಗೆ ಮುಖ್ಯಮಂತ್ರಿ ಸ್ಥಾನವನ್ನು ಹಿಂದಿನಿಂದಲೂ ವ್ಯವಸ್ಥಿತವಾಗಿ ವಂಚಿಸಲಾಗುತ್ತಿದೆ. ಈಗ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಮುನ್ನೆಲೆಗೆ ಬಂದಿದ್ದು, ಈಗಲಾದರೂ ದಲಿತರನ್ನು ಸಿ.ಎಂ ಮಾಡಬೇಕು. ಅದಕ್ಕಾಗಿ ರಾಜ್ಯದಾದ್ಯಂತ ಜನಾಂದೋಲನ ನಡೆಸಲಾಗುವುದು’ ಎಂದು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ. ಎಂ. ವೆಂಕಟಸ್ವಾಮಿ ಹೇಳಿದರು.

‘ಸದ್ಯದ ಬೆಳವಣಿಗೆ ಗಮನಿಸಿದರೆ ಕಾಂಗ್ರೆಸ್‌ನಲ್ಲಿ ದಲಿತರಿಗೆ ಸಿ.ಎಂ ಸ್ಥಾನ ಒಲಿಯುವ ಕಾಲ ಬಂದಿದೆ. ಈ ಸಲವಾದರೂ ಪಕ್ಷವು ದಲಿತರೊಬ್ಬರಿಗೆ ಅತ್ಯುನ್ನತ ಹುದ್ದೆ ನೀಡಿ, ಲಾಗಾಯ್ತಿನಿಂದಲೂ ಪಕ್ಷಕ್ಕೆ ನಿಷ್ಠವಾಗಿರುವ ಸಮುದಾಯದ ಋಣ ತೀರಿಸಬೇಕು’ ಎಂದು ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ADVERTISEMENT

ಪ್ರಜಾ ವಿಮೋಚನಾ ಚಳವಳಿ ಮುಖಂಡ ಮುನಿ ಆಂಜನಪ್ಪ ಮಾತನಾಡಿ, ‘ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಂತಹ ಮುತ್ಸದ್ಧಿ ರಾಷ್ಟ್ರ ನಾಯಕ ಸೇರಿದಂತೆ ದಲಿತ ಸಮುದಾಯದಲ್ಲಿ ಕೆ.ಎಚ್. ಮುನಿಯಪ್ಪ, ಡಾ. ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಡಾ. ಎಚ್.ಸಿ. ಮಹದೇವಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರಿದ್ದಾರೆ. ಸಿ.ಎಂ ಹುದ್ದೆಗೆ ಇವರಲ್ಲಿ ಯಾರನ್ನಾದರೂ ಪರಿಗಣಿಸಬೇಕು’ ಎಂದು ಆಗ್ರಹಿಸಿದರು.

‘ಕಾಂಗ್ರೆಸ್ ಪಕ್ಷವು ಪರಿಶಿಷ್ಟರನ್ನು ಕೇವಲ ಮತಬ್ಯಾಂಕ್ ಮಾಡಿಕೊಂಡು, ಪ್ರತಿ ಸಲವೂ ಅಧಿಕಾರ ಹಿಡಿಯುತ್ತಾ ಬಂದಿದೆ. ಈ ಬಾರಿ ಸಮುದಾಯಕ್ಕೆ ಸಿ.ಎಂ ಸ್ಥಾನ ನೀಡಬೇಕು. ಈ ಕುರಿತು, ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಸೇರಿದಂತೆ ಇತರರ ಗಮನ ಸೆಳೆಯುವ ಪ್ರಯತ್ನ ಮಾಡಲಾಗುವುದು’ ಎಂದರು.

ವಾಲ್ಮೀಕಿ ನಾಯಕ ಸಮುದಾಯದ ಮುಖಂಡ ರಾಜಣ್ಣ, ‘ದಲಿತರಲ್ಲಿ ಎಷ್ಟೇ ರಾಜಕೀಯ ಪ್ರಜ್ಞೆ ಬಂದರೂ, ಎಲ್ಲಾ ಪಕ್ಷಗಳೂ ಅವರನ್ನು ಮುಖ್ಯಮಂತ್ರಿ ಹುದ್ದೆವರೆಗೆ ಬಿಟ್ಟುಕೊಂಡಿಲ್ಲ. ಇದು ಸಮುದಾಯಕ್ಕೆ ಮಾಡಿರುವ ರಾಜಕೀಯ ದ್ರೋಹ. ಈಗ ನಾವೂ ಜಾಗೃತರಾಗಿದ್ದೇವೆ. ರಾಜ್ಯದ ಚುಕ್ಕಾಣಿ ಕೊಟ್ಟರೆ, ದಲಿತರ ಸಾಮರ್ಥ್ಯ ಏನೆಂದು ತೋರಿಸುತ್ತೇವೆ. ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿ ಆಯ್ಕೆ ವಿಷಯದಲ್ಲಿ ದಲಿತರನ್ನು ಕಡೆಗಣಿಸಿದರೆ ದುಬಾರಿ ಬೆಲೆ ತೆರಬೇಕಾದಿತು’ ಎಂದು ಎಚ್ಚರಿಕೆ ನೀಡಿದರು.

ಸಮತಾ ಸೈನಿಕ ದಳದ ಜಿ.ಸಿ. ವೆಂಕಟರಮಣಪ್ಪ, ಮರಳವಾಡಿ ಮಂಜು, ಅಶ್ವತ್ಥಮ್ಮ, ಹರೀಶ್ ಬಾಲು, ಸುರೇಶ್, ನಂಜು, ರಾಜಮಣಿ ಹಾಗೂ ಇತರರು ಇದ್ದರು.

ದಲಿತರನ್ನು ತನ್ನ ಮತಬ್ಯಾಂಕ್ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಆ ಸಮುದಾಯದ ಮೇಲೆ ಕಾಳಜಿ ಇದ್ದರೆ ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇದ್ದರೆ ದಲಿತರನ್ನು ರಾಜ್ಯದ ಮುಖ್ಯಮಂತ್ರಿ ಮಾಡಬೇಕು
– ಡಾ. ಜಿ. ಗೋವಿಂದಯ್ಯ ಕಾರ್ಯಾಧ್ಯಕ್ಷ ಆರ್‌ಪಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.