ADVERTISEMENT

‘ಗ್ಯಾರಂಟಿ’ಗೆ ಪರಿಶಿಷ್ಟರ ಹಣ ಬಳಕೆ: ಸರ್ಕಾರ ವಿರುದ್ಧ ದಲಿತ ಮುಖಂಡರ ಅಸಮಾಧಾನ

ದಲಿತ ಪರ ಎನ್ನುತ್ತಲೇ ಸಮುದಾಯಕ್ಕೆ ದ್ರೋಹ ಬಗೆಯುತ್ತಿರುವ ರಾಜ್ಯ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 5:06 IST
Last Updated 27 ಸೆಪ್ಟೆಂಬರ್ 2025, 5:06 IST
ರಾಮನಗರದ ಸ್ಫೂರ್ತಿ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಾ.ಪಂ. ಮಾಜಿ ಸದಸ್ಯ ಹನುಮಂತಯ್ಯ ಮಾತನಾಡಿದರು. ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಡಾ. ಲೋಕೇಶ್ ಮೌರ್ಯ, ದಲಿತ ಮುಖಂಡ ಶಿವಲಿಂಗಯ್ಯ ಹಾಗೂ ಇತರರು ಇದ್ದಾರೆ
ರಾಮನಗರದ ಸ್ಫೂರ್ತಿ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಾ.ಪಂ. ಮಾಜಿ ಸದಸ್ಯ ಹನುಮಂತಯ್ಯ ಮಾತನಾಡಿದರು. ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಡಾ. ಲೋಕೇಶ್ ಮೌರ್ಯ, ದಲಿತ ಮುಖಂಡ ಶಿವಲಿಂಗಯ್ಯ ಹಾಗೂ ಇತರರು ಇದ್ದಾರೆ   

ರಾಮನಗರ: ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ) ಮತ್ತು ಬುಡಕಟ್ಟು ಉಪ ಯೋಜನೆ (ಟಿಎಸ್‌ಪಿ) ಕಾಯ್ದೆಯಡಿ ಪರಿಶಿಷ್ಟರ ಕಲ್ಯಾಣಕ್ಕಾಗಿ ಇಟ್ಟಿರುವ ಅನುದಾನವನ್ನು, ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿರುವುದಕ್ಕೆ ದಲಿತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ನಗರದ ಸ್ಫೂರ್ತಿ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹನುಮಂತಯ್ಯ, ‘ನಾನೂ ಸಹ ದಲಿತ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಪರಿಶಿಷ್ಟರ ಕಲ್ಯಾಣಕ್ಕಾಗಿ ಕಾಯ್ದೆ ಜಾರಿಗೆ ತಂದರು. ಆದರೆ, ಅವರೇ ಆ ಕಾಯ್ದೆಯ ಆಶಯಕ್ಕೆ ವಿರುದ್ದವಾಗಿ ನಡೆದುಕೊಳ್ಳುತ್ತಾ ದಲಿತರಿಗೆ ದ್ರೋಹ ಬಗೆಯುತ್ತಿದ್ದಾರೆ’ ಎಂದರು.

‘ಕಾಯ್ದೆ ಜಾರಿಗೆ ಬಂದಾಗಿನಿಂದಲೂ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ. ಇದಕ್ಕೆ ಬಿಜೆಪಿ ಮತ್ತು ಜೆಡಿಎಸ್ ಸಹ ಹೊರತಲ್ಲ. ಅದಕ್ಕೆ ಕಾಯ್ದೆಯಲ್ಲಿ ಅವಕಾಶವಿದ್ದ ಸೆಕ್ಷನ್ 7ಡಿ ಅನ್ನು ಇದೇ ಸಿದ್ದರಾಮಯ್ಯ ಅವರು ರದ್ದುಪಡಿಸಿದರೂ, ಸೆಕ್ಷನ್ 7 ‘ಸಿ’ ಮೂಲಕ ಅನುದಾನವನ್ನು ಗ್ಯಾರಂಟಿಗೆ ಹರಿಸುತ್ತಿದ್ದಾರೆ. ಕೂಡಲೇ ಆ ಸೆಕ್ಷನ್ ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.

‘ಪರಿಶಿಷ್ಟರ ಕಲ್ಯಾಣಕ್ಕೆ ಬಳಸಬೇಕಿದ್ದ ಸಾವಿರಾರು ಕೋಟಿ ಹಣವನ್ನು ಪ್ರತಿ ವರ್ಷ ಅನ್ಯ ಉದ್ದೇಶಕ್ಕೆ ಬಳಸಿದರೆ, ಕಾಯ್ದೆಯ ಪ್ರಯೋಜನವಾಗದರೂ ಏನು? ವರ್ಷದಿಂದ ವರ್ಷಕ್ಕೆ ಗ್ಯಾರಂಟಿಗೆ ನಮ್ಮ ಹಣ ಬಳಕೆ ಪ್ರಮಾಣ ಏರುತ್ತಲೇ ಇದೆ. ಈ ಕುರಿತು ಸಮುದಾಯದ ಸಚಿವರು ಹಾಗೂ ಶಾಸಕರು ತುಟಿ ಬಿಚ್ಚದಿರುವುದು ದಲಿತರಿಗೆ ಬಗೆಯುವ ದ್ರೋಹವಾಗಿದೆ’ ಎಂದರು.

ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಡಾ. ಲೋಕೇಶ್ ಮೌರ್ಯ ಮಾತನಾಡಿ, ‘ಪರಿಶಿಷ್ಟರ ಹಣ ಗ್ಯಾರಂಟಿ ಯೋಜನೆಗಳಿಗೆ ಹರಿಯುತ್ತಿರುವುದರಿಂದಾಗಿ ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಬಹುತೇಕ ಇಲಾಖೆಗಳಲ್ಲಿ ಪರಿಶಿಷ್ಟರ ಯೋಜನೆಗಳು ಜಾರಿಯಾಗುತ್ತಿಲ್ಲ. ಟ್ಯಾಕ್ಸಿ ವಿತರಣೆ, ಭೂ ಒಡೆತನ ಯೋಜನೆ, ಗಂಗಾ ಕಲ್ಯಾಣ ಸೇರಿದಂತೆ ಹಲವು ಯೋಜನೆಗಳು ನನೆಗುದಿಗೆ ಬಿದ್ದಿವೆ’ ಎಂದು ಹೇಳಿದರು.

ಸುದ್ದಿಗೋಷ್ಡಿಯಲ್ಲಿ ಮುಖಂಡರಾದ ಕೃಷ್ಣಯ್ಯ, ಶಿವಬಸವಯ್ಯ, ಶಿವಶಂಕರ್, ರಾಜಶೇಖರ್ ಹಾಗೂ ಇತರರು ಇದ್ದರು.

‘ಅನ್ಯಾಯದ ವಿರುದ್ಧ ಹೋರಾಟ’

‘ರಾಜ್ಯ ಸರ್ಕಾರ ಮೂರು ವರ್ಷಗಳಿಂದ ಗ್ಯಾರಂಟಿ ಯೋಜನೆಗಳಿಗಾಗಿಯೇ ಬಜೆಟ್‌ನಲ್ಲಿ ₹52 ಸಾವಿರ ಸಾವಿರ ಕೋಟಿ ಮೀಸಲಿಡುತ್ತಿದೆ. ಆದರೂ ಪರಿಶಿಷ್ಟರ ಹಣ ಯಾಕೆ ಬಳಸುತ್ತಿದೆ? ವರ್ಷದಿಂದ ವರ್ಷಕ್ಕೆ ಗ್ಯಾರಂಟಿ ಫಲಾನುಭವಿಗಳ ಸಂಖ್ಯೆಯಲ್ಲಿ ಇಳಿಮುಖವಾದರೂ ಪರಿಶಿಷ್ಟರ ಹಣ ಬಳಕೆ ಮಾತ್ರ ಏರುಗತಿಯಲ್ಲಿ ಸಾಗುತ್ತಿದೆ. ಈ ಕುರಿತು ಸಮುದಾಯದ ಜನಪ್ರತಿನಿಧಿಗಳು ಪ್ರಶ್ನಿಸಿ ನಮ್ಮ ಹಣ ಗ್ಯಾರಂಟಿ ಪಾಲಾಗುವುದನ್ನು ತಡೆಯಬೇಕು. ಸಮುದಾಯಕ್ಕೆ ಆಗುತ್ತಿರುವ ಅನ್ಯಾಯದ ಕುರಿತು ಮುಂದೆ ಕರಪತ್ರ ಮುದ್ರಿಸಿ ಹಂಚಿ ಜನಜಾಗೃತಿ ಮೂಡಿಸುವ ಮೂಲಕ ಹೋರಾಟ ಆರಂಭಿಸಲಾಗುವುದು’ ಎಂದು ಮುಖಂಡ ಶಿವಲಿಂಗಯ್ಯ ಎಚ್ಚರಿಕೆ ನೀಡಿದರು. 

ಗ್ಯಾರಂಟಿ ಯೋಜನೆಗಳಿಗೆ ಎಲ್ಲಾ ಜಾತಿ ಮತ್ತು ಧರ್ಮದವರೂ ಫಲಾನುಭವಿಗಳಾಗಿದ್ದಾರೆ. ಆದರೆ ದಲಿತರ ಹಣವಷ್ಟೇ ಯಾಕೆ ಗ್ಯಾರಂಟಿಗೆ ಬಳಸಲಾಗುತ್ತಿದೆ? ಬೇರೆ ಸಮುದಾಯಗಳ ಹಣವನ್ನು ಗ್ಯಾರಂಟಿಗೆ ಬಳಸುವ ತಾಕತ್ತು ಸರ್ಕಾರಕ್ಕೆ ಇದೆಯೇ?
– ಲೋಕೇಶ್ ಮೌರ್ಯ ಸದಸ್ಯ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.