ADVERTISEMENT

ಮೊಗಳ್ಳಿ ಗಣೇಶ್ ನುಡಿ ನಮನ|ಅನಾಥತೆಯಲ್ಲಿ ಅರಳಿದ ಅದ್ಭುತ ಪ್ರತಿಭೆ:ನಟರಾಜ ಹುಳಿಯಾರ್

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 2:27 IST
Last Updated 18 ಅಕ್ಟೋಬರ್ 2025, 2:27 IST
<div class="paragraphs"><p>ರಾಮನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ‘ನಮ್ಮವರು’ ತಂಡ ಶುಕ್ರವಾರ ಹಮ್ಮಿಕೊಂಡಿದ್ದ ಸಾಹಿತಿ ಡಾ. ಮೊಗಳ್ಳಿ ಗಣೇಶ್ ಅವರ ನುಡಿನಮನ ಕಾರ್ಯಕ್ರಮದಲ್ಲಿ ಗಣ್ಯರು ಹಾಗೂ ಸಾಹಿತ್ಯಾಸಕ್ತರು ಮೊಗಳ್ಳಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. </p></div>

ರಾಮನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ‘ನಮ್ಮವರು’ ತಂಡ ಶುಕ್ರವಾರ ಹಮ್ಮಿಕೊಂಡಿದ್ದ ಸಾಹಿತಿ ಡಾ. ಮೊಗಳ್ಳಿ ಗಣೇಶ್ ಅವರ ನುಡಿನಮನ ಕಾರ್ಯಕ್ರಮದಲ್ಲಿ ಗಣ್ಯರು ಹಾಗೂ ಸಾಹಿತ್ಯಾಸಕ್ತರು ಮೊಗಳ್ಳಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

   

ರಾಮನಗರ: ‘ಮೊಗಳ್ಳಿ ಗಣೇಶ್ ಮತ್ತು ನಾನು ಒಟ್ಟಿಗೆ ಬರೆಯಲು ಶುರು ಮಾಡಿದವರು. ಹಳ್ಳಿಯ ಅನಾಥತೆಯಲ್ಲಿ ಅರಳಿದ ಅದ್ಭುತ ಪ್ರತಿಭೆಯಾಗಿದ್ದ ಮೊಗಳ್ಳಿ ಎದುರಿಸಿದ ಸನ್ನಿವೇಶಗಳೇ ಅವರನ್ನು ಶ್ರೇಷ್ಠ ಕಥೆಗಾರನನ್ನಾಗಿ ಮಾಡಿತು. ಅವರೊಬ್ಬ ಕಾಲ ಸೃಷ್ಟಿಸಿದ ಅದ್ಭುತ ಕಥೆಗಾರ’ ಎಂದು ಲೇಖಕ ಡಾ. ನಟರಾಜ ಹುಳಿಯಾರ್ ಅಭಿಪ್ರಾಯಪಟ್ಟರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ‘ನಮ್ಮವರು’ ತಂಡ ಶುಕ್ರವಾರ ಹಮ್ಮಿಕೊಂಡಿದ್ದ ‘ಡಾ. ಮೊಗಳ್ಳಿ ಗಣೇಶ್ ನುಡಿನಮನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪ್ರಜಾವಾಣಿ ಕಥಾಸ್ಪರ್ಧೆಯಲ್ಲಿ ಸತತ ನಾಲ್ಕು ಸಲ ಮೊಗಳ್ಳಿ ಪ್ರಶಸ್ತಿ ಪಡೆದರು. ರಾತ್ರಿ– ಹಗಲು ಒಂದೇ ಎಂಬಂತೆ ಭಾವಿಸಿ ಜೀವಿಸಿದ್ದ ಮೊಗಳ್ಳಿ, ದಲಿತ ಲೋಕದೊಳಗಿರುವ ಹಿಂಸೆಯ ಸ್ವರೂಪವನ್ನು ತಮ್ಮ ಕಥೆಗಳಲ್ಲಿ ತೆರೆದಿಟ್ಟರು’ ಎಂದರು.

ADVERTISEMENT

‘ದಲಿತ, ರೈತ, ಸಾಹಿತ್ಯಿಕ ವಲಯದ ಕುರಿತು ಬರೆದಿದ್ದ ಮೊಗಳ್ಳಿ ಬರಹಗಳಲ್ಲಿ ಪ್ರಾಮಾಣಿಕತೆ ಮತ್ತು ನೈತಿಕತೆ ಇದೆ. ತಕರಾರು ಅಂಕಣದಲ್ಲಿ ವಿಮರ್ಶೆಯ ಸಾಂಪ್ರದಾಯಿಕತೆಯನ್ನೇ ವಿಮರ್ಶಿಸಿದರು. ಅದರಲ್ಲಿ ವಾಸ್ತವವು ಇತ್ತು. ಅದಕ್ಕೆ ಸಾಹಿತಿ ಯು.ಆರ್. ಅನಂತಮೂರ್ತಿ ಪ್ರತಿಕ್ರಿಯಿಸಿದ್ದರು. ಅವರ ಪ್ರತಿಭೆ ಗುರುತಿಸಿ ಲಂಕೇಶ್ ಅವರು ಕರೆದು ತಮ್ಮ ಪತ್ರಿಕೆಯಲ್ಲಿ ಬರೆಯಲು ಜಾಗ ಕೊಟ್ಟಿದ್ದರು’ ಎಂದು ನೆನೆದರು.

‘ಮೊಗಳ್ಳಿ ಅವರ ಕಡೆಯ ಕಥೆ ಮತ್ತು ಸಂದರ್ಶನ ಮಯೂರದಲ್ಲಿ ಪ್ರಕಟವಾಯಿತು. ಸಾವಿನ ಹಾಸಿಗೆ ಮೇಲಿದ್ದುಕೊಂಡೇ ಹೊಸಿಲು ದಾಟಿದವರು ಕಥೆ ಬರೆದಿದ್ದಾರೆ. ನೀರಾಗದೆ ಪನ್ನೀರಾಗುವ ಆಸೆಪಟ್ಟಿದ್ದ ಮೊಗಳ್ಳಿ, ಯಾವುದೋ ಭರವಸೆ ಮೇಲೆ ಬರೆಯುತ್ತಿದ್ದರು. ಪ್ರೀತಿ ದಕ್ಕಿದ ಕಡೆಯಷ್ಟೇ ನೋಡುತ್ತಿದ್ದರು. ಅವರ ಕಥೆಗಳಲ್ಲಿ ಪ್ರಗತಿಪರ ತತ್ವಗಳಿವೆ’ ಎಂದರು.

ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕಿ ಡಾ. ಎನ್.ಕೆ. ಲೋಲಾಕ್ಷಿ ಮಾತನಾಡಿ, ‘ಮೊಗಳ್ಳಿ ಅವರ ತಾಯಿ, ನೀನು ನಾಲ್ಕು ಅಕ್ಷರ ಕಲಿಯದಿದ್ರೆ ಬಾವಿಗೆ ಬಿದ್ದು ಸಾಯ್ತೆನೆ ಎಂದಿದ್ದರು. ಆ ಮಾತಿನಿಂದಾಗಿ ನಮಗೊಬ್ಬ ಅದ್ಭುತ ಕಥೆಗಾರ ಸಿಕ್ಕಿದರು. ಅವರ ಪ್ರತಿ ಪುಸ್ತಕವೂ ಆತ್ಮಕಥನದ ಅನುಭವ ನೀಡುತ್ತದೆ’ ಎಂದು ಹೇಳಿದರು.

‘ಗಣೇಶ್ ಅವರ ಮಾರ್ಗದರ್ಶನದಲ್ಲಿ ನಾವು ದಲಿತ ಕಾವ್ಯ, ಕಥನ ಕಟ್ಟುವ ಕೆಲಸವಾಗಬೇಕು. ನೀರಿನಲ್ಲಿ ಮುಳುಗಿದರೂ ಮತ್ತೆ ಮೇಲೇಳುತ್ತೇನೆ ಎನ್ನುವ ಆಶಯ ಅವರ ಸಾಹಿತ್ಯದಲ್ಲಿದೆ. ಸತ್ಯ ಮತ್ತು ನಂಬಿಕೆಯ ಹುಡುಕಾಟವಿದೆ. ಇದ್ದಿದ್ದನ್ನು ಇದ್ದಂಗೆ ಹೇಳುವ ವ್ಯಕ್ತಿತ್ವ ಅವರದ್ದಾಗಿತ್ತು’ ಎಂದು ತಿಳಿಸಿದರು.

‘ಮೊಗಳ್ಳಿ ಅವರು ಎಲ್ಲವೂ ಸರಿ ಇದೆ ಎಂದು ಬರೆದಿದ್ದರೆ, ಹಲವು ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತಿದ್ದವು. ಆದರೆ, ಸಂಕಟಗಳ ವಾಸ್ತವ ಚಿತ್ರಣವನ್ನು ನೈಜವಾಗಿ ಬರೆದಿದ್ದಕ್ಕೆ ಸಿಗಬೇಕಾದ ಗೌರವ ಬರಲಿಲ್ಲ. ಅವರ ಸಾಹಿತ್ಯ ಸ್ಥಳೀಯ ಭಾಷೆಗಳಿಗಷ್ಟೇ ಅಲ್ಲದೆ ಇಂಗ್ಲಿಷ್‌ಗೆ ಭಾಷಾಂತರ ಆಗಬೇಕು. ಅವರ ಸಾಹಿತ್ಯದ ಫಸಲನ್ನು ನಾಡಿನ ಓದುಗರು ಮೇಯುವಂತಾಗಬೇಕು’ ಎಂಬ ಆಶಯ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ, ‘ಸಮಾಜದಲ್ಲಿ ಶೋಷಣೆಯ ವಿರುದ್ದ ಹೋರಾಡಲು ಸಾಹಿತಿಗಳು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕೋಮುವಾದ ಮತ್ತು ಜಾತಿವಾದ ಹೋಗಲಾಡಿಸಲು ಸಾಹಿತ್ಯ ಕೂಡ ಮದ್ದಾಗಬಲ್ಲದು ಎಂಬುದನ್ನು ತೋರಿಸಿದ್ದಾರೆ. ಅಂತಹ ಕೃತಿಗಳು ಓದುವಿಕೆ ಇಂದಿನ ಅಗತ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಮೊಗಳ್ಳಿ ಗಣೇಶ್ ಅವರ ಬದುಕು– ಬರಹ ಕುರಿತು ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಚರ್ಚೆ, ವಿಚಾರ ಸಂಕಿರಣ ಸೇರಿದಂತೆ ಯಾವುದೇ ರೀತಿಯ ಕಾರ್ಯಕ್ರಮ ಆಯೋಜನೆ ಮಾಡಿದರೂ, ಅದಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಜಾನಪದ ವಿದ್ವಾಂಸ ಡಾ. ಕುರುವ ಬಸವರಾಜ್, ರೈತ ಸಂಘದ ಮುಖಂಡ ಸಿ. ಪುಟ್ಟಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ ಹಾಗೂ ದಲಿತ ಮುಖಂಡ ಶಿವಶಂಕರ್ ಅವರು ಮೊಗಳ್ಳಿ ಕುರಿತು ಅಭಿಪ್ರಾಯ ಹಂಚಿಕೊಂಡರು. ಉಪನ್ಯಾಸಕ ಡಾ. ಡಿ.ಆರ್. ದೇವರಾಜ್ ಮತ್ತು ಲೇಖಕಿ ಎಚ್.ಕೆ. ಶೈಲಾ ಶ್ರೀನಿವಾಸ್ ಕವಿತೆ ವಾಚಿಸಿದರು.

ಲೇಖಕ ಡಾ. ಎಚ್.ಡಿ. ಉಮಾಶಂಕರ್‌ ಕಾರ್ಯಕ್ರಮ ನಿರೂಪಣೆ ಮಾಡಿದರು. ನಾಟಕ ಅಕಾಡೆಮಿ ಸದಸ್ಯ ಕುಂಬಾಪುರ ಬಾಬು ಸ್ವಾಗತಿಸಿದರು. ಸಾಮಾಜಿಕ ಕಾರ್ಯಕರ್ತೆ ಎಸ್. ಪದ್ಮರೇಖಾ ವಂದಿಸಿದರು. ಗಾಯಕ ಬ್ಯಾಡರಹಳ್ಳಿ ಶಿವಕುಮಾರ್ ನೇತೃತ್ವದ ತಂಡ ಗೀತ ಗಾಯನ ನಡೆಸಿ ಕೊಟ್ಟಿತು. ಸಾಹಿತಿ ಡಾ. ಅಂಕನಹಳ್ಳಿ ಪಾರ್ಥ, ಪೌರ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಆರ್. ನಾಗರಾಜು, ಪೌರಾಯುಕ್ತ ಡಾ. ಜಯಣ್ಣ, ದಲಿತಪರ, ರೈತಪರ, ಕನ್ನಡಪರ ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಇದ್ದರು.

ನಾನು ಬರೆದರೆ ದಲಿತ ಸಾಹಿತಿ ಅಂತಾರೆ. ಅದೇ ಬೇರೆಯವರನ್ನು ಯಾಕೆ ಬ್ರಾಹ್ಮಣ ಲಿಂಗಾಯತ ಒಕ್ಕಲಿಗ ಸಾಹಿತಿ ಎಂದು ಕರೆಯುವುದಿಲ್ಲ? ಅವರಂತೆ ನಮ್ಮನ್ನೂ ಸಾಹಿತಿ ಅಂದುಕೊಂಡು ಓದಬೇಕು ಎಂದು ಮೊಗಳ್ಳಿ ಹೇಳುತ್ತಿದ್ದರು
ಡಾ. ನಟರಾಜ್ ಹುಳಿಯಾರ್ ಲೇಖಕ
ಮೊಗಳ್ಳಿ ಗಣೇಶ್ ಅವರ ಸಾವಿಗೆ ಸಮಾಜವೇ ಕಾರಣ. ಬಾಲ್ಯದಿಂದ ಸಾವಿನವರೆಗೆ ಅವರಲ್ಲಿ ಸಾಮಾಜಿಕ ನೋವು– ಸಂಕಟಗಳೇ ಇದ್ದವು. ಅನ್ಯಾಯವಾದಾಗ ಸಂಬಂಧಗಳು ಸೃಜನೆಯಾಗಬೇಕು. ಆದರೆ ಅವರ ಬದುಕಿನಲ್ಲಿ ಅದಾಗಲಿಲ್ಲ
ಡಾ. ಎನ್.ಕೆ. ಲೋಲಾಕ್ಷಿ ನಿರ್ದೇಶಕಿ ಕುವೆಂಪು ಕನ್ನಡ ಅಧ್ಯಯನ ಕೇಂದ್ರ ಮೈಸೂರು ವಿಶ್ವವಿದ್ಯಾಲಯ

‘ಅಕಾಡೆಮಿಕ್ ಶೋಷಣೆಯಿಂದ ಏಕಾಂಗಿಯಾದ’

‘ಹಳ್ಳಿಯಿಂದ ಬಂದ ಸೃಜನಶೀಲ ಪ್ರತಿಭೆಯಾಗಿದ್ದ ಮೊಗಳ್ಳಿ ಗಣೇಶ್ ಅವರನ್ನು ಅಕಾಡೆಮಿಕ್ ವಲಯದ ಶೋಷಣೆ ಏಕಾಂಗಿಯಾಗಿಸಿತು. ಇದು ಅವರನ್ನು ಏಕಾಂಗಿತನದ ವ್ಯಸನಿಯಾಗಿಸಿತು. ಪ್ರಶಸ್ತಿ ಮತ್ತು ಸನ್ಮಾನದ ಹಂಗಿಲ್ಲದೆ ನಾವೆಲ್ಲರೂ ಬರೆಯಲಾರಂಭಿಸಿದೆವು. ಮೊಗಳ್ಳಿ ವಿಶ್ವ ಶ್ರೇಷ್ಠ ಎನಿಸುವ ಕಥೆಗಳನ್ನು ಬರೆದರೂ ಶೋಷಣೆ ಮತ್ತು ರಾಜಕಾರಣವನ್ನು ಗಟ್ಟಿಯಾಗಿ ಎದುರಿಸಲಾಗಲಿಲ್ಲ. ಜರ್ಮನಿಗೆ ಹೋಗಿ ಬಂದಿದ್ದ ಅವರು ನಮ್ಮೂರಲ್ಲಿ ನನ್ನನ್ನು ಮುಟ್ಟುವುದಿಲ್ಲ. ಆದರೆ ಜರ್ಮನಿಯಲ್ಲಿ ಯುವತಿಯೊಬ್ಬಳು ನಾನು ಓದಿದ ಕಥೆ ಕೇಳಿ ಕೆನ್ನೆಗೆ ಮುತ್ತು ಕೊಟ್ಟಳು ಎಂದು ಖುಷಿಯಾಗಿ ಹೇಳಿಕೊಂಡಿದ್ದರು. ಜಾಲಮಂಗಲ ನಾಗಭೂಷಣ್ ಅವರು ರಾಮನಗರದಲ್ಲಿ ಸಾಹಿತಿಗಳ ಸಮಾವೇಶಕ್ಕೆ ಕರೆದು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿದ್ದಾಗ ನಮ್ಮ ಜಿಲ್ಲೆಯಲ್ಲೂ ನನ್ನ ಸಾಹಿತ್ಯ ಪ್ರೀತಿಸುವವರು ಇದ್ದಾರೆಂದು ಸಂತಸಪಟ್ಟಿದ್ದರು’ ಎಂದು ಸಾಹಿತಿ ಡಾ. ಬಂಜಗೆರೆ ಜಯಪ್ರಕಾಶ್ ಅವರು ಮೊಗಳ್ಳಿ ನೆನಪುಗಳನ್ನು ಮೆಲುಕು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.