ADVERTISEMENT

ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ: ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಸೂಚನೆ

ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಳವಳ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 15:23 IST
Last Updated 7 ಸೆಪ್ಟೆಂಬರ್ 2020, 15:23 IST
ವಿಡಿಯೊ ಸಂವಾದದಲ್ಲಿ ಪಾಲ್ಗೊಂಡ ಜಿಲ್ಲಾ ಮಟ್ಟದ ಅಧಿಕಾರಿಗಳು
ವಿಡಿಯೊ ಸಂವಾದದಲ್ಲಿ ಪಾಲ್ಗೊಂಡ ಜಿಲ್ಲಾ ಮಟ್ಟದ ಅಧಿಕಾರಿಗಳು   

ರಾಮನಗರ: ಜಿಲ್ಲೆಯಲ್ಲಿ ಕೋವಿಡ್-19 ನಿಂದ ನಿಧನರಾಗುತ್ತಿರುವವರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದು ವಿಷಾದದ ಸಂಗತಿ. ಜನರ ಜೀವ ಉಳಿಸಲು ಎಲ್ಲಾ ರೀತಿಯಿಂದ ಶ್ರಮಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಅಧಿಕಾರಿಗಳಿಗೆ ಸೂಚಿಸಿದರು.

ರಾಮನಗರದ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಸೋಮವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಅವರು ಮಾತನಾಡಿದರು. ಕಳೆದ 10 ದಿನಗಳಿಂದ ಜಿಲ್ಲೆಯಲ್ಲಿ ದಿನನಿತ್ಯವೂ ಒಂದು ಇಲ್ಲವೇ ಎರಡು ಸಾವು ದಾಖಲಾಗುತ್ತಿದೆ. ಹಿಂದೆ ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಶೇ 0.60ರಷ್ಟು ಇತ್ತು. ಈಗ ಇದು ಶೇ 1.24ಕ್ಕೆ ಏರಿಕೆಯಾಗಿದೆ. ಸಾವಿನ ಪ್ರಮಾಣವನ್ನು ತಗ್ಗಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕು. ಈ ಬಗ್ಗೆ ವರದಿ ಸಲ್ಲಿಸಬೇಕು ಎಂದು ಅವರು ಜಿಲ್ಲಾಧಿಕಾರಿಗೆ ಹೇಳಿದರು.

"ಜಿಲ್ಲೆಯಲ್ಲಿ ಸಾವನ್ನಪ್ಪುತ್ತಿರುವವರ ಪೈಕಿ ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ಇತರೆ ಕಾಯಿಲೆಯಿಂದ ಬಳಲುತ್ತಿರುವವರು ಹೆಚ್ಚಾಗಿದ್ದಾರೆ. ಅಲ್ಲದೆ, ಬೆಂಗಳೂರಿನಲ್ಲಿ ನೆಲೆಸಿರುವ ಮೂಲತಃ ರಾಮನಗರ ಜಿಲ್ಲೆಯವರ ಪೈಕಿ ಕೆಲವರು ಬೆಂಗಳೂರಿನಲ್ಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಇಂತಹವರ ಪೈಕಿ ಪರಿಸ್ಥಿತಿ ಕೈಮೀರಿದಾಗ ಅನಿವಾರ್ಯವಾಗಿ ರಾಮನಗರ ಜಿಲ್ಲೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯವರು ಕಳುಹಿಸುತ್ತಿದ್ದಾರೆ. ಹೀಗಾಗಿ, ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. 75 ವರ್ಷಕ್ಕಿಂತಲೂ ಹೆಚ್ಚು ವಯಸ್ಸಾದವರು ನಿಧನರಾಗಿರುತ್ತಾರೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್ ಸಚಿವರಿಗೆ ಮಾಹಿತಿ ನೀಡಿದರು.

ADVERTISEMENT

ಸಾವು: ಜಿಲ್ಲೆಯಲ್ಲಿ ಇದುವರೆಗೆ ಚನ್ನಪಟ್ಟಣ ತಾಲ್ಲೂಕಿನಲ್ಲಿ 11, ಕನಕಪುರ ತಾಲ್ಲೂಕಿನಲ್ಲಿ 11, ಮಾಗಡಿ ತಾಲ್ಲೂಕಿನಲ್ಲಿ 13 ಜನ ಹಾಗೂ ರಾಮನಗರ ತಾಲ್ಲೂಕಿನಲ್ಲಿ 15 ಜನ ಸಾವನ್ನಪ್ಪಿದ್ದಾರೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 50 ಮಂದಿ ನಿಧನರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಆಂಬ್ಯುಲೆನ್ಸ್ ಕೊರತೆ ಇಲ್ಲ: ಜಿಲ್ಲೆಯಲ್ಲಿ ಒಟ್ಟು 16 ಆಂಬ್ಯುಲೆನ್ಸ್‌ಗಳು ಲಭ್ಯವಿದ್ದು, ಪ್ರತಿ ತಾಲ್ಲೂಕಿಗೂ ತಲಾ ಮೂರು ವಾಹನಗಳನ್ನು ನೀಡಲಾಗಿದೆ. ಕೋವಿಡ್ ಕಾಳಜಿ ಕೇಂದ್ರಗಳಲ್ಲೂ ಒಂದೊಂದು ವಾಹನಗಳನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಕೋವಿಡ್ ಪರೀಕ್ಷೆ: ಜಿಲ್ಲೆಯಲ್ಲಿ ಪ್ರತಿ ದಿನವೂ 950ಕ್ಕೂ ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ರೋಗ ಲಕ್ಷಣ ಉಳ್ಳವರು ಮತ್ತು ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಆದ್ಯತೆ ಮೇರೆಗೆ ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇಡೀ ರಾಜ್ಯದಲ್ಲೇ ನಿಗದಿ ಪಡಿಸಿರುವ ಸಂಖ್ಯೆಗಿಂತಲೂ ಅಧಿಕ ಪ್ರಮಾಣದ ಕೋವಿಡ್ ಪರೀಕ್ಷೆಗಳನ್ನು ನಡೆಸುತ್ತಿರುವ ಜಿಲ್ಲೆ ಎನ್ನುವ ಹಿರಿಮೆಯನ್ನು ರಾಮನಗರ ಹೊಂದಿದೆ ಎಂದು ಜಿಲ್ಲಾಧಿಕಾರಿ ಅರ್ಚನಾ ತಿಳಿಸಿದರು.

ಕಲಾಗ್ರಾಮ: ಚನ್ನಪಟ್ಟಣದ ಗೊಂಬೆಗಳು, ರೇಷ್ಮೆ, ಕರಕುಶಲ ವಸ್ತುಗಳನ್ನು ಒಂದೆಡೆ ತಯಾರಿಸುವ ಮತ್ತು ಅವುಗಳನ್ನು ಅಲ್ಲೇ ಮಾರಾಟ ಮಾಡುವಂತಹ ಒಂದು 'ಕಲಾಗ್ರಾಮ'ವನ್ನು ಜಿಲ್ಲೆಯಲ್ಲಿ ತೆರೆಯುವ ಉದ್ದೇಶವಿದೆ. ಇದಕ್ಕಾಗಿ 50 ಎಕರೆ ಜಮೀನನ್ನು ರಾಷ್ಟ್ರೀಯ ಹೆದ್ದಾರಿ ಸಮೀಪ ಗುರುತಿಸುವಂತೆ ಸಚಿವರು ಇದೇ ಸಂದರ್ಭ ಜಿಲ್ಲಾಧಿಕಾರಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ, ಪೋಲೀಸ್ ವರಿಷ್ಠಾಧಿಕಾರಿ ಎಸ್. ಗಿರೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ. ವಿಜಯ್ ಮತ್ತು ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ವೈದ್ಯರ ಕೊರತೆ

ಜಿಲ್ಲೆಯಲ್ಲಿ ಇನ್ನೂ 10 ವೈದ್ಯರ ಕೊರತೆ ಇದೆ. ಹುದ್ದೆಗಳನ್ನು ಭರ್ತಿ ಮಾಡಲು ಕ್ರಮವಹಿಸಲಾಗಿದ್ದು, ಎಂಬಿಬಿಎಸ್ ಮಾಡಿರುವ ವೈದ್ಯರು ಕೋವಿಡ್ ಕೇರ್‌ನಲ್ಲಿ ಕೆಲಸ ಮಾಡಲು ಮುಂದೆ ಬರುತ್ತಿಲ್ಲ. ಅದೇ ರೀತಿ 20 ನರ್ಸ್‌‌ಗಳ ಪೈಕಿ ಆರು ಜನರು ಮಾತ್ರ ಸೇರ್ಪಡೆಯಾಗಿದ್ದಾರೆ. ಇನ್ನೂ 14 ಮಂದಿಯ ಅವಶ್ಯಕತೆ ಇದೆ. ಹಾಗೆಯೇ, 12 ಮಂದಿ ಲ್ಯಾಬ್ ಟೆಕ್ನೀಷಿಯನ್ ಕೊರತೆ ಇದೆ ಎಂದು ಜಿಲ್ಲಾಧಿಕಾರಿ ಅರ್ಚನಾ ಸಭೆಗೆ ಮಾಹಿತಿ ನೀಡಿದರು.

***

ಜಿಲ್ಲೆಯಲ್ಲಿ ಸೋಂಕಿತರ ಸಾವಿನ ಪ್ರಮಾಣ ಶೇ 1.24ಕ್ಕೆ ಏರಿಕೆಯಾಗಿದೆ. ಇದನ್ನು ತಗ್ಗಿಸಲು ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಬೇಕು

- ಡಾ. ಸಿ.ಎನ್‌. ಅಶ್ವತ್ಥನಾರಾಯಣ,ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.