ಮಾಗಡಿ: ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿ ಮುಂದುವರೆಸುವಂತೆ ಒತ್ತಾಯಿಸಿ ಜೂನ್ 5ರಂದು ತಾಲ್ಲೂಕಿನ ಮರೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲಾಗುವುದು ಎಂದು ಬಮುಲ್ ನಿರ್ದೇಶಕ ಎಚ್.ಎನ್.ಅಶೋಕ್ ತಿಳಿಸಿದ್ದಾರೆ.
ಪಟ್ಟಣದ ಬಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಂಗ ಏತ ನೀರಾವರಿ ಯೋಜನೆ ಮೂಲಕ ಕುಣಿಗಲ್ ಹೋಬಳಿಯ ಹುತ್ರಿದುರ್ಗ ಕೆರೆಗಳು ಸೇರಿ ತಾಲ್ಲೂಕಿನ 83 ಕೆರೆಗಳನ್ನು ನೀರು ತುಂಬಿಸುವ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಹೇಮಾವತಿ ನೀರಿನ ಮೂಲಕ ಕೆರೆಗಳನ್ನು ತುಂಬಿಸಲು ಮುಕ್ಕಾಲು ಟಿಎಂಸಿ ನೀರು ಮಾಗಡಿಗೆ ಮಂಜೂರಾತಿ ಯಾಗಿರುವ ಹಿನ್ನೆಲೆ ಕಾಮಗಾರಿ ನಡೆಯುತ್ತಿದೆ.
ಆದರೆ, ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿ ಮೂಲಕ ರಾಮನಗರ ಮತ್ತು ಕನಕಪುರ ತಾಲ್ಲೂಕಿಗೆ ನೀರು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ, ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ, ಜ್ಯೋತಿ ಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ ಅವರು ಜನರ ದಿಕ್ಕು ತಪ್ಪಿಸಿ ಯಾವುದೇ ಕಾರಣಕ್ಕೂ ಮಾಗಡಿಗೆ ನೀರು ಕೊಡುವುದಿಲ್ಲ ಎಂದು ಹೋರಾಟ ಮಾಡುತ್ತಿದ್ದು, ಕುಣಿಗಲ್ ಹಾಗೂ ಮಾಗಡಿ ರೈತರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ.
ಮಾಗಡಿಗೆ ಮಂಜೂರಾಗಿರುವ ನೀರನ್ನು ಕೇಳುತ್ತಿದ್ದೇವೆ. ಅದನ್ನು ಬಿಟ್ಟು ತುಮಕೂರಿಗೆ ಮಂಜೂರಾಗಿರುವ 24 ಟಿಎಂಸಿ ನೀರಿನಲ್ಲಿ ಪಾಲನ್ನು ಕೇಳುತ್ತಿಲ್ಲ. ಇದಕ್ಕೆ ಇಷ್ಟು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುವ ಅನಿವಾರ್ಯವೇನು? ಇದಕ್ಕೆ ಪಕ್ಷಾತೀತವಾಗಿ ಜನಪ್ರತಿನಿಧಿಗಳಿಗೆ ಉತ್ತರ ನೀಡಲು ಜೂನ್ 5ರಂದು ಮರೂರು ಹ್ಯಾಂಡ್ ಪೋಸ್ಟ್ ಬಳಿ ರೈತ ಸಂಘದಿಂದ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ತುಮಕೂರು ಹಾಲು ಬಂದ್ ಮಾಡುತ್ತೇವೆ:
ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಮಾಗಡಿ ತಾಲ್ಲೂಕಿನ ಅಳಿಯನಾಗಿದ್ದು, ನಮ್ಮ ತಾಲ್ಲೂಕಿಗೆ ನೀರು ಕೊಡಲ್ಲ ಎಂದು ಹೋರಾಟ ಮಾಡಲು ಹೇಗೆ ಮನಸು ಬರುತ್ತೆ. ನೀವು ಹೀಗೆ ರೈತರನ್ನು ಎತ್ತಿಕೊಂಡು ಹೋರಾಟ ಮುಂದುವರೆಸಿದರೆ ನಾವು ತುಮಕೂರಿನ ಹಾಲನ್ನು ನಮ್ಮ ಭಾಗದಲ್ಲಿ ಮಾರಾಟ ಮಾಡದಂತೆ ನಿಲ್ಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕೆಡಿಪಿ ಸದಸ್ಯ ಟಿ.ಜಿ.ವೆಂಕಟೇಶ್, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಹೊಸಪಾಳ್ಯ ಲೋಕೇಶ್, ಕಲ್ಕೆರೆ ಶಿವಣ್ಣ, ಆಗ್ರೋ ಪುರುಷೋತ್ತಮ್, ಜೆ.ಪಿ.ಚಂದ್ರೇಗೌಡ, ಕಲ್ಕೆರೆ ಕುಮಾರ್, ಚಿಕ್ಕರಾಜು, ತಗ್ಗೀಕುಪ್ಪೆ ರಾಜಣ್ಣ, ಶ್ರೀಪತಿಹಳ್ಳಿ ರಾಜಣ್ಣ, ಚಕ್ರಬಾವಿ ಮಾರೇಗೌಡ, ಅರಳುಕುಪ್ಪೆ ಕಾಂತರಾಜು, ಶಿವರಾಜು, ಮಾಂತೇಶ್, ಸುರೇಶ್, ನರೇಂದ್ರ ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.