ADVERTISEMENT

ರಾಮನಗರ | ಭಕ್ತರ ರಕ್ಷಣೆಗೆ ಅಗತ್ಯ ಕ್ರಮಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 4:16 IST
Last Updated 5 ಫೆಬ್ರುವರಿ 2026, 4:16 IST
ಯಶವಂತ್ ವಿ. ಗುರುಕರ್
ಯಶವಂತ್ ವಿ. ಗುರುಕರ್   

ರಾಮನಗರ: ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಭಕ್ತರು ಫೆ. 8ರಿಂದ 11ರವರೆಗೆ ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ಬೊಮ್ಮಸಂದ್ರ ಗ್ರಾಮದ ಬಳಿ ಹರಿಯುವ ಕಾವೇರಿ ನದಿ ದಾಟಿ ಮಲೆ ಮಹದೇಶ್ವರ ಸ್ವಾಮಿ ಬೆಟ್ಟಕ್ಕೆ ಪಾದಯಾತ್ರೆ ಕೈಗೊಳ್ಳುತ್ತಾರೆ. ಈ ಸಂದರ್ಭದಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಕುರಿತು ಬುಧವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ‘ಪಾದಯಾತ್ರೆ ಅವಧಿಯಲ್ಲಿ ಕೆಆರ್‌ಎಸ್, ಕಬಿನಿ, ಶಿಂಷಾ ಜಲಾಶಯ ಹಾಗೂ ಇತರ ಮೂಲಗಳಿಂದ ಬರುವ ನೀರಿನ ಪ್ರಮಾಣವನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲು ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಮೋಹನ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ನದಿ ನೀರಿನ ಪ್ರಮಾಣ ಗರಿಷ್ಠ ಮೂರೂವರೆ ಅಡಿ ಮೀರದಂತೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಬೇಕು’ ಎಂದರು.

‘ಭಕ್ತರ ಭದ್ರತೆಗಾಗಿ ಹಾಗೂ ನದಿ ದಾಟುವಾಗ ನೂಕುನುಗ್ಗಲು ಉಂಟಾಗದಂತೆ ಅಗತ್ಯ ಕ್ರಮಕೈಗೊಳ್ಳಲು ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು. ಯಾವುದೇ ಅಹಿತಕರ ಘಟನೆಗಳು ಸಂಭವಿಸಿದರೆ ಕೂಡಲೇ ರಕ್ಷಣಾ ಕಾರ್ಯ ಕೈಗೊಳ್ಳಲು ಎಸ್‌ಡಿಆರ್‌ಎಫ್ ತಂಡವನ್ನು ನಾಲ್ಕೂ ದಿನ ನಿಯೋಜಿಸಬೇಕು’ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಚಂದ್ರಯ್ಯ ಅವರಿಗೆ ನಿರ್ದೇಶನ ನೀಡಿದರು.

ADVERTISEMENT

‘ಪಾದಯಾತ್ರೆ ಮಾರ್ಗದಲ್ಲಿ ಕಾಡು ಪ್ರಾಣಿಗಳಿಂದ ರಕ್ಷಣೆ ಒದಗಿಸಲು ಅರಣ್ಯ ಸಿಬ್ಬಂದಿ ನಿಯೋಜಿಸಬೇಕು. ಸಂಜೆ 5.30ರ ನಂತರ ಕಾಡು ಮಾರ್ಗಗಳಲ್ಲಿ ಭಕ್ತರ ಪ್ರವೇಶ ನಿರ್ಬಂಧಿಸಬೇಕು. ವನ್ಯಜೀವಿಗಳ ಓಡಾಟದ ಮೇಲೆ ನಿಗಾ ವಹಿಸಲು ಡ್ರೋನ್ ಕ್ಯಾಮೆರಾ ಬಳಸಬೇಕು. ಅದಕ್ಕೆ ನುರಿತ ತಂಡಗಳನ್ನು ನಿಯೋಜಿಸಬೇಕು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾವೇರಿ ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚಿಸಿದರು.

‘ನದಿ ದಾಟಲು ಅನುಕೂಲವಾಗುವಂತೆ ಅಗ್ನಿಶಾಮಕ ಇಲಾಖೆ ಹಾಗೂ ಅರಣ್ಯ ಇಲಾಖೆಯ ಸಮನ್ವಯದೊಂದಿಗೆ ನದಿ ದಾಟಲು ಸೂಕ್ತ ಮಾರ್ಗ ಗುರುತಿಸಬೇಕು. ಆ ಮಾರ್ಗದಲ್ಲಿ ಉತ್ತಮ ರೋಪ್ ವ್ಯವಸ್ಥೆ ಕಲ್ಪಿಸಬೇಕು’ ಎಂದು ಕನಕಪುರದ ತಹಶೀಲ್ದಾರ್ ಸಂಜಯ್‌ ಅವರಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಧನರಾಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಿರಂಜನ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಮಂಜುನಾಥ್, ಮುಖಂಡರಾದ ಏಳಗಳ್ಳಿ ರವಿ, ಉಯ್ಯಂಬಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.

‘ವೈದ್ಯರು ನುರಿತ ಈಜುಗಾರರನ್ನು ನಿಯೋಜಿಸಿ’ ‘ರಕ್ಷಣಾ ಕಾರ್ಯ ಹಾಗೂ ಅರಣ್ಯದಲ್ಲಿ ಬೆಂಕಿ ನಿಯಂತ್ರಿಸಲು ಅಗ್ನಿಶಾಮಕ ವಾಹನ ಮೋಟಾರು ದೋಣಿ ಹಾಗೂ ಅಗತ್ಯ ಸಿಬ್ಬಂದಿಯನ್ನು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ನಿಯೋಜಿಸಬೇಕು. ಆಂಬುಲೆನ್ಸ್ ಔಷಧ 24 ಗಂಟೆ ಲಭ್ಯವಿರುವ ವೈದ್ಯರು ಆರೋಗ್ಯ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಬೇಕು. ತುರ್ತು ಸಂದರ್ಭಗಳಲ್ಲಿ ಸಮೀಪದ ಆಸ್ಪತ್ರೆಗೆ ಏರ್‌ಲಿಫ್ಟ್ ಮಾಡಲು ಏರ್‌ಲಿಫ್ಟ್ ಸಂಸ್ಥೆ ಮಾಹಿತಿ ಸಂಗ್ರಹಿಸಬೇಕು. ಪಾದಯಾತ್ರೆ ಮಾರ್ಗಗಳಲ್ಲಿ ಬೆಸ್ಕಾಂನವರು ಅಗತ್ಯ ಲೈಟಿಂಗ್ ವ್ಯವಸ್ಥೆ ಕಲ್ಪಿಸಬೇಕು. ಮಾರ್ಗದಲ್ಲಿ ಸ್ವಚ್ಛತೆ ಕಾಪಾಡಲು ಸ್ವಚ್ಛತಾ ಸಿಬ್ಬಂದಿ ನಿಯೋಜಿಸಬೇಕು. ಪಾದಯಾತ್ರಿಗಳಿಗೆ ಅರಿವು ಮೂಡಿಸಲು ಧ್ವನಿವರ್ಧಕಗಳನ್ನು ಅಳವಡಿಸಬೇಕು. ಭಕ್ತರು ನದಿ ದಾಟುವಾಗ ನುರಿತ ಐದು ಮಂದಿ ಈಜುಗಾರರು ಸ್ಥಳದಲ್ಲಿರಬೇಕು. ನದಿ ದಡದಲ್ಲಿ ಯಾವುದೇ ಅಂಗಡಿ ಮುಂಗಟ್ಟುಗಳನ್ನು ಹಾಕದಂತೆ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.