ADVERTISEMENT

ಭಾರತ ಬಂದ್‌ಗೆ ಜಿಲ್ಲಾ ರೈತ ಸಂಘ ಬೆಂಬಲ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 5:07 IST
Last Updated 21 ಸೆಪ್ಟೆಂಬರ್ 2021, 5:07 IST
   

ರಾಮನಗರ: ಕೃಷಿ, ಎಪಿಎಂಸಿ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿಯನ್ನು ವಿರೋಧಿಸಿ ಇದೇ 27ರಂದು ನಡೆಯಲಿರುವ ಭಾರತ್ ಬಂದ್‍ ಅನ್ನು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೆಂಬಲಿಸಲಿದೆ ಎಂದು ಸಂಘಟನೆಯ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ್
ತಿಳಿಸಿದರು.

ಅಂದು ರೈತ ಸಂಘದ ಆಶ್ರಯದಲ್ಲಿ ನಗರದ ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು. ಜಿಲ್ಲೆಯ ವ್ಯಾಪಾರಸ್ಥರು, ಕಾರ್ಖಾನೆಗಳ ಮಾಲೀಕರು ಸೇರಿದಂತೆ ಎಲ್ಲಾ ರೈತರು ಕರೆ ಕೊಟ್ಟಿರುವ ಭಾರತ್ ಬಂದ್‍ಗೆ ತಮ್ಮ ವ್ಯಾಪಾರ-ವಹಿವಾಟು ಸ್ಥಗಿತಗೊಳಿಸಿ ಸಹಕಾರ ನೀಡಬೇಕು ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.

ಜಿಲ್ಲೆಯಲ್ಲಿ ಕಾಡಂಚಿನ ಗ್ರಾಮಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗಿದೆ. ರಾಮನಗರ ತಾಲ್ಲೂಕಿನ ತೆಂಗಿನಕಲ್ಲು ಗ್ರಾಮದಲ್ಲಿ ದಿನನಿತ್ಯ ರಾತ್ರಿ ಕಾಡಾನೆಗಳ ಹಿಂಡು ತೋಟ, ಜಮೀನುಗಳಿಗೆ ನುಗ್ಗಿ ದಾಂದಲೆ ನಡೆಸುತ್ತಿವೆ. ಕೊಳವೆಬಾವಿಗೆ ಅಳವಡಿಸಿರುವ ಪೈಪುಗಳನ್ನು ಕಿತ್ತು ರಂಪಾಟ ಮಾಡುತ್ತಿವೆ. ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದು, ಕಾಡಾನೆಯೊಂದು ಸಹ ಮೃತಪಟ್ಟಿದೆ ಎಂದರು.

ADVERTISEMENT

ಕಾಡಂಚಿನ ಗ್ರಾಮಗಳಲಿ ರೈತರ ಸಮಸ್ಯೆಗಳು ಮಿತಿ ಮೀರಿವೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ನೀಡಿದ ರಕ್ಷಣೆಯ ಭರವಸೆ ಹುಸಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಮನಗರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ವೈ. ವೆಂಕಟೇಶ್ ವಿರುದ್ಧ ಇಲಾಖೆಯಲ್ಲಿ ಅನೇಕ ದೋಷಾರೋಪಣೆ ಪಟ್ಟಿ ಮಾಡಲಾಗಿದೆ. ಇಂತಹ ಅಧಿಕಾರಿಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಚನ್ನಪಟ್ಟಣ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.