
ರಾಮನಗರ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕೆಂಬ ಬೇಡಿಕೆಗೆ ಪಕ್ಷದ ಹೈಕಮಾಂಡ್ ಸ್ಪಂದಿಸುತ್ತಿದೆ. ಜ. 6ರಂದು ನಮ್ಮ ನಾಯಕನಿಗೆ ಸಿ.ಎಂ ಪಟ್ಟಾಭಿಷೇಕವಾಗುವ ವಿಶ್ವಾಸವಿದೆ ಎಂದು ಡಿಕೆಶಿ ಅವರ ಆಪ್ತ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಹೇಳಿದರು.
ಮುಖ್ಯಮಂತ್ರಿ ಬದಲಾವಣೆ ವಿಷಯ ಕುರಿತು ನಗರದಲ್ಲಿ ಶನಿವಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಬೇಕು. ನಮ್ಮ ಬೇಡಿಕೆ ಮತ್ತು ಡಿಕೆಶಿ ಅವರ ಹೋರಾಟಕ್ಕೆ, ಶ್ರಮಕ್ಕೆ ಪ್ರತಿಫಲ ಸಿಗಬೇಕು ಎಂದರು.
ಬಹುಶಃ ಜ. 6ರಂದು ಅವರಿಗೆ ಮುಖ್ಯಮಂತ್ರಿ ಸ್ಥಾನ ಶೇ 99ರಷ್ಟು ಸಿಗುವ ವಿಶ್ವಾಸವಿದೆ. ಜ. 6 ಮತ್ತು ಜ. 9 ಅವರ ಅದೃಷ್ಟ ಸಂಖ್ಯೆಯಾಗಿದ್ದು, 6ರಂದೇ ಅವರಿಗೆ ಹುದ್ದೆ ಸಿಗಲಿದೆ. ನಮ್ಮಲ್ಲಿ ಯಾವುದೇ ಬಣ ಇಲ್ಲ.
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಇಬ್ಬರೂ ರಾಜ್ಯದ ಆಸ್ತಿ. ನಮ್ಮ ಬೇಡಿಕೆ ಮತ್ತು ಡಿಕೆಶಿ ಅವರ ಹೋರಾಟಕ್ಕೆ, ಶ್ರಮಕ್ಕೆ ಪ್ರತಿಫಲ ಸಿಗಬೇಕು ಎಂದು ತಿಳಿಸಿದರು.
ಯತೀಂದ್ರ ಸಿದ್ದರಾಮಯ್ಯ ಅವರು ನಾಯಕತ್ವ ಬದಲಾವಣೆ ಇಲ್ಲ ಎಂಬ ಹೇಳಿಕೆ ಕುರಿತ ಪ್ರಶ್ನೆಗೆ, ಯಾರು ಏನೇ ಹೇಳಿಕೊಳ್ಳಲಿ. ರಾಜ್ಯದ ಜನ ಹಾಗೂ ಈ ಭಾಗದ ಶಾಸಕರು ಡಿಕೆಶಿಗೆ ಅವಕಾಶ ಕೊಡಿ ಅಂತ ಕೇಳಿದ್ದೇವೆ. ಶಿವಕುಮಾರ್ ಸಿ.ಎಂ ಆಗೋದು ಖಚಿತ.
ನಮ್ಮಲ್ಲಿ 140 ಜನ ಶಾಸಕರಿದ್ದಾರೆ. ನಮ್ಮಲ್ಲಿ ಸಂಖ್ಯಾಬಲದ ವಿಚಾರ ಬರಲ್ಲ. ಕಾಂಗ್ರೆಸ್ ಶಿಸ್ತಿನ ಪಕ್ಷ. ವರಿಷ್ಠರ ತೀರ್ಮಾನಕ್ಕೆ ಎಲ್ಲರೂ ಬದ್ದ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.