ADVERTISEMENT

ಡಿ.ಕೆ.ಸುರೇಶ್‌ ರೋಡ್‌ ಶೋ

ಬಿಜೆಪಿಯ ಸುಳ್ಳುಗಾರರು ಎಷ್ಠೇ ಸುಳ್ಳು ಹೇಳಿದರೂ ಜನ ಅವರನ್ನು ನಂಬುವುದಿಲ್ಲ

​ಪ್ರಜಾವಾಣಿ ವಾರ್ತೆ
Published 3 ಮೇ 2019, 15:56 IST
Last Updated 3 ಮೇ 2019, 15:56 IST
ಮಾಗಡಿ ತಾಲ್ಲೂಕಿನ ಕುದೂರು, ತಿಪ್ಪಸಂದ್ರ ಹೋಬಳಿಗಳಲ್ಲಿ ಡಿ.ಕೆ.ಸುರೇಶ್‌ ರೋಡ್‌ ಶೋ ನಡೆಸಿ ಮತಯಾಚಿಸಿದರು.
ಮಾಗಡಿ ತಾಲ್ಲೂಕಿನ ಕುದೂರು, ತಿಪ್ಪಸಂದ್ರ ಹೋಬಳಿಗಳಲ್ಲಿ ಡಿ.ಕೆ.ಸುರೇಶ್‌ ರೋಡ್‌ ಶೋ ನಡೆಸಿ ಮತಯಾಚಿಸಿದರು.   

ಕುದೂರು(ಮಾಗಡಿ): ಬಿಜೆಪಿ ಅಭ್ಯರ್ಥಿಯನ್ನು ಮತದಾರರು ನೋಡಿಯೇ ಇಲ್ಲ ಎಂದು ಮೈತ್ರಿ ಪಕ್ಷದ ಅಭ್ಯರ್ಥಿ ಡಿ.ಕೆ.ಸುರೇಶ್‌ ತಿಳಿಸಿದರು.

ಕುದೂರು ಹೋಬಳಿಯ ವಿವಿಧ ಗ್ರಾಮಗಳಲ್ಲಿ ರೋಡ್‌ಶೋ ನಡೆಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್‌ ಪಕ್ಷದ ತ್ಯಾಗಬಲಿದಾನಗಳ ಬಗ್ಗೆ ಪ್ರತಿಯೊಬ್ಬ ದೇಶಪ್ರೇಮಿಗಳಿಗೂ ತಿಳಿದಿದೆ. ಬಿಜೆಪಿಯ ಸುಳ್ಳುಗಾರರು ಎಷ್ಠೇ ಸುಳ್ಳು ಹೇಳಿದರೂ ಜನ ಅವರನ್ನು ನಂಬುವುದಿಲ್ಲ. ಎಲ್ಲವನ್ನು ನಾನೇ ಮಾಡಿದ್ದು ಎಂದು ಸುಳ್ಳು ಹೇಳುತ್ತಿರುವ ಎಂ.ನರೇಂದ್ರಮೋದಿ, ಮತ್ತೊಮ್ಮೆ ಪ್ರಧಾನಿಯಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಜಿಲ್ಲೆಯ ಜನರ ನಾಡಿಮಿಡಿತ ತಿಳಿದಿದ್ದೇವೆ. ಹೇಮಾವತಿ ನದಿ ನೀರನ್ನು ಕೆರೆಗಳಿಗೆ ತುಂಬಿಸುವ ಕಾಮಗಾರಿ ಮತ್ತೆ ಆರಂಭವಾಗಲಿದೆ. ನರೇಗಾ ಯೋಜನೆಯಡಿ ಗ್ರಾಮೀಣ ಅಭಿವೃದ್ದಿ ಪಡಿಸಲಾಗಿದೆ. ಎಲ್ಲೆಡೆ ಶುದ್ಧ ಕುಡಿಯುವ ನೀರಿನ ಘಟಕ ಆರಂಬಿಸಿದ್ದೇವೆ. ಪಕ್ಷಾತೀತವಾಗಿ ಕೆಲಸ ಮಾಡಿದ್ದೇನೆ ಎಂದರು.

ಶಾಸಕ ಎ.ಮಂಜುನಾಥ ಮಾತನಾಡಿ ಮೈತ್ರಿಪಕ್ಷದ ಅಭ್ಯರ್ಥಿ ಡಿ.ಕೆ,ಸುರೇಶ್‌ ಅವರಿಗೆ ಅಧಿಕ ಮತನೀಡಿ ಆಯ್ಕೆ ಮಾಡಿದರೆ, ದುಡಿಯುವ ಜೋಡೆತ್ತಿನ ಶ್ರಮ ಬಳಸಿಕೊಂಡು ಸರ್ವರ ಅಭಿವೃದ್ಧಿಗೆ ಪೂರಕವಾಗಲಿದೆ. ಬಿಜೆಪಿ ಅವರು ಬೊಬ್ಬೆ ಹೊಡೆದುಕೊಳ್ಳುತ್ತಿದ್ದಾರೆ.ರಾಜ್ಯದಲ್ಲಿ ಅವರ ಸಾಧನೆ ಏನೂ ಇಲ್ಲ ಎಂದರು.

ಕಾಂಗ್ರೆಸ್‌ ಮುಖಂಡ ಎಚ್‌.ಸಿ.ಬಾಲಕೃಷ್ಣ ಮಾತನಾಡಿ ನರೇಗಾ ಮತ್ತು ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಶ್ರಮಿಸಿರುವ ಡಿ.ಕೆ.ಸುರೇಶ್‌ ಅವರನ್ನು ಮತ್ತೊಮ್ಮೆ ಅಧಿಕ ಮತಗಳನ್ನು ನೀಡಿ ಆಯ್ಕೆ ಮಾಡಬೇಕು ಎಂದರು.

ಶಿವಗಂಗೆಯಲ್ಲಿ ವಿನಾಯಕಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ವೀರಸಾಗರ, ಶ್ರೀಗಿರಿಪುರ, ಕುದೂರು, ತಿಪ್ಪಸಂದ್ರ, ಕಲ್ಯಾ, ಅಗಲಕೋಟೆಗಳಲ್ಲಿ ರೋಡ್‌ ಶೋ ನಡೆಸಿ ಮತಯಾಚಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಅಣ್ಣೇಗೌಡ, ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್‌.ಎಂ.ಕೃಷ್ಣಮೂರ್ತಿ, ಕಾಂಗ್ರೆಸ್‌ ಮುಖಂಡರಾದ ಮಹಮದ್‌ ಇನಾಯತ್‌ ಉಲ್ಲಾ, ಕುದೂರಿನ ಬಾಲರಾಜ್‌, ರಾಘವೇಂದ್ರ, ಬಾಲಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.