ADVERTISEMENT

ವಿಜೃಂಭಣೆಯ ದ್ರೌಪತಮ್ಮ ಕರಗ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 19 ಮೇ 2019, 14:07 IST
Last Updated 19 ಮೇ 2019, 14:07 IST
ಕನಕಪುರ ನಗರದಲ್ಲಿ ಕರಗ ಮಹೋತ್ಸವ ಮೆರವಣಿಗೆ ನಡೆಯಿತು
ಕನಕಪುರ ನಗರದಲ್ಲಿ ಕರಗ ಮಹೋತ್ಸವ ಮೆರವಣಿಗೆ ನಡೆಯಿತು   

ಕನಕಪುರ: ನಗರದಲ್ಲಿ 9 ದಿನಗಳಿಂದ ನಡೆಯುತ್ತಿದ್ದ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈಭವದ ದ್ರೌಪತಮ್ಮ ಕರಗ ಮಹೋತ್ಸವವು ಶನಿವಾರ ರಾತ್ರಿ ಬುದ್ಧ ಪೂರ್ಣಿಮೆಯಲ್ಲಿ ಶಕ್ತ್ಯೋತ್ಸವದೊಂದಿಗೆ ಮುಕ್ತಾಯವಾಯಿತು.

ಸಂಗಮ ರಸ್ತೆಯಲ್ಲಿ ಶ್ರೀ ದ್ರೌಪತಮ್ಮ ಧರ್ಮರಾಯ ದೇವಸ್ಥಾನ ನಿರ್ಮಾಣವಾದ ಮೇಲೆ ನಗರದಲ್ಲಿ ನಡೆಸುತ್ತಿರುವ 22ನೇ ಕರಗ ಮಹೋತ್ಸವವು ಇದಾಗಿದೆ. ತಿಗಳ ಸಮುದಾಯಕ್ಕೆ ಸೇರಿದವರು ಈ ಕರಗ ಮಹೋತ್ಸವವನ್ನು ಪ್ರಾರಂಭದಿಂದಲೂ ವಿಜೃಂಭಣೆಯಿಂದ ಧಾರ್ಮಿಕ ಸಂಪ್ರದಾಯದಂತೆ ಆಚರಿಸಿಕೊಂಡು ಬಂದಿದ್ದಾರೆ.

ಮೇ 10 ರಂದು ಧರ್ಮರಾಯಸ್ವಾಮಿ ದೇವಾಲಯದ ಮುಂದೆ ಧ್ವಜಸ್ತಂಬವನ್ನು ನೆಡುವ ಮೂಲಕ ಕರಗ ಮಹೋತ್ಸವಕ್ಕೆ ಸಮುದಾಯದ ಮುಖಂಡರು ಹಾಗೂ ದ್ರೌಪತಮ್ಮ ಧರ್ಮರಾಯ ಸೇವಾ ಸಮಿತಿಯವರು ಚಾಲನೆ ನೀಡಿದರು.

ADVERTISEMENT

11 ರಂದು ಅರಿಸಿನ ಅಲಂಕಾರ, 12 ರಂದು ಕುಂಕುಮ ಅಲಂಕಾರ, 13 ರಂದು ಹೂವಿನ ಅಲಂಕಾರ, 14 ರಂದು ಶ್ರೀಗಂಧದ ಅಲಂಕಾರ, 15 ರಂದು ಕಲ್ಯಾಣೋತ್ಸವ, 16 ರಂದು ಹಸಿಕರಗ, 17 ರಂದು ಲಕ್ಕಿ ಅಲಂಕಾರದೊಂದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

18ರ ಮಧ್ಯರಾತ್ರಿ ಪ್ರತಿ ವರ್ಷ ಕರಗವನ್ನು ಹೊರುವ ರಘು ಅವರೇ ಈ ಭಾರಿಯು ಕರಗವನ್ನು ಹೊತ್ತು ನಗರದ ಪ್ರಮುಖ ಬೀದಿಗಳಲ್ಲಿ ಯಶಸ್ವಿಯಾಗಿ ದ್ರೌಪತಮ್ಮ ಕರಗವನ್ನು ನಡೆಸಿಕೊಟ್ಟರು. ಅವರೊಂದಿಗೆ ವೀರ ಕುಮಾರರು ಮೆರವಣಿಗೆಯಲ್ಲಿ ಜತೆಯಲ್ಲಿ ಸಾಗಿದರು.

ರಾತ್ರಿ ಕರಗ ಮಹೋತ್ಸವವನ್ನು ನಗರದ ಪ್ರಮುಖ ಬೀದಿಗಳಲ್ಲಿ ನಡೆಸಿ ಭಾನುವಾರ ಬೆಳಿಗ್ಗೆ ದ್ರೌಪತಮ್ಮ ಧರ್ಮರಾಯ ದೇವಾಲಯ ಮುಂಭಾಗ ಅಗ್ನಿಕೊಂಡವನ್ನು ಹಾಯ್ದು ದ್ರೌಪತಮ್ಮ ದೇವಾಲಯವನ್ನು ಸೇರಿದರು.

ಸಾಂಸ್ಕೃತಿಕ ವೈಭವದೊಂದಿಗೆ ನಡೆದ ಧಾರ್ಮಿಕ ದ್ರೌಪತಮ್ಮ ಕರಗ ಮಹೋತ್ಸವವನ್ನು ನೋಡಲು ಇಡೀ ರಾತ್ರಿ ಜನತೆ ಮನೆಗಳ ಮುಂದೆ ಕಾದು ಕರಗಕ್ಕೆ ಪೂಜೆಯನ್ನು ನೆರವೇರಿಸಿದರು.

ಸೇವಾ ಸಮಿತಿಯ ಅಧ್ಯಕ್ಷ ಕೆ.ಪಿ. ಆನಂದ, ಉಪಾಧ್ಯಕ್ಷ ಕೆ.ಆರ್‌.ವೆಂಕಟರಮಣಸ್ವಾಮಿ, ಕಾರ್ಯದರ್ಶಿ ರಾಮಚಂದ್ರ, ಸಹ ಕಾರ್ಯದರ್ಶಿಗಳಾದ ಶಾಂತಕುಮಾರ್‌, ಜಯರಾಮ್‌ ಸೇರಿದಂತೆ ಸಮುದಾಯದ ಮುಖಂಡರು ಮುಂದೆ ನಿಂತು ಮಹೋತ್ಸವ ನೆರವೇರಿಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.